ಉಡುಪಿ : ಹಿರಿಯ ನಟ, ರಂಗಕರ್ಮಿ ರಾಜು ತಾಳಿಕೋಟೆ ನಿಧನ ಹೊಂದಿದ್ದಾರೆ. ಹೃದಯಾಘಾತದಿಂದ ರಾಜು ತಾಳಿಕೋಟೆ ನಿಧನ ಹೊಂದಿದ್ದಾರೆ . ರಾಜು ತಾಳಿಕೋಟೆ ಅವರನ್ನು ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ವೈದ್ಯರು ಪರೀಕ್ಷೆ ನಡೆಸಿದ ಬಳಿಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಉಡುಪಿಯಲ್ಲಿ ಸಿನಿಮಾವೊಂದರ ಶೂಟಿಂಗ್ ಮುಗಿಸಿ ರೂಮುನಲ್ಲಿ ಮಲಗಿದ್ದಾಗ ಹಾರ್ಟ್ ಅಟ್ಯಾಕ್ ಆಗಿದೆ.
ಕುಡುಕನ ಪಾತ್ರಗಳಲ್ಲಿ ಮನೋಜ್ಞವಾಗಿ ಅಭಿನಯಿಸುತ್ತಿದ್ದ ಇವರ ʼಕಲಿಯುಗದ ಕುಡುಕ’, ‘ಕುಡುಕರ ಸಾಮ್ರಾಜ್ಯ’, ಮತ್ತು ‘ಅಸಲಿ ಕುಡುಕ’ ಬಹಳ ಫೇಮಸ್ ಆಗಿದ್ದವು. ಈ ನಾಟಕಗಳ ಆಡಿಯೋ ಕ್ಯಾಸೆಟ್‌ಗಳು ಕೂಡ ಆ ಕಾಲದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದ್ದವು.
ವಿಜಯಪುರ ಜಿಲ್ಲೆಯ ತಾಳಿಕೋಟೆಯ ಮಣ್ಣಿನ ಗುಣವನ್ನು ಮೈಗೂಡಿಸಿಕೊಂಡಿದ್ದ ರಾಜು ಅವರು, ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ರಂಗಭೂಮಿಯ ಮೂಲಕ. ಅವರ ‘ಖಾಸ್ಗತೇಶ್ವರ ನಾಟಕ ಮಂಡಳಿ’ ಉತ್ತರ ಕರ್ನಾಟಕದಲ್ಲಿ ಬಹಳ ಪ್ರಸಿದ್ಧಿ. ಅದರಲ್ಲೂ ‘ಕಲಿಯುಗದ ಕುಡುಕ’ ನಾಟಕದಲ್ಲಿನ ಅವರ ಅಭಿನಯ ಅವರನ್ನು ಮನೆಮಾತಾಗುವಂತೆ ಮಾಡಿತ್ತು. ಆ ನಂತರ ಯೋಗರಾಜ್ ಭಟ್ಟರ ‘ಮನಸಾರೆ’ ಚಿತ್ರದ ಮೂಲಕ ಸಿನಿಮಾಗೆ ಕಾಲಿಟ್ಟ ಅವರು, ಮತ್ತೆ ಹಿಂತಿರುಗಿ ನೋಡಲೇ ಇಲ್ಲ. ಇತ್ತೀಚೆಗಷ್ಟೇ ಧಾರವಾಡ ರಂಗಾಯಣದ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡು, ರಂಗಭೂಮಿಗೆ ಹೊಸ ಹುರುಪು ನೀಡುವ ಕನಸು ಕಂಡಿದ್ದರು.
ಕಂಬನಿ ಮಿಡಿದ ಯೋಗರಾಜ್ ಭಟ್ :
ತಮ್ಮ ನೆಚ್ಚಿನ ನಟನ ಅಗಲಿಕೆಯಿಂದ ದುಃಖಿತರಾಗಿರುವ ಯೋಗರಾಜ್ ಭಟ್, “ಬಯಲು ಸೀಮೆಯ ಹೃದಯಕ್ಕೆ ನಮನ. ನೀವೆಂದರೆ ತುಂಬು ಪ್ರೀತಿ, ತುಂಬು ಖುಷಿ, ತುಂಬು ನೆನಪು. ನೀವೊಬ್ಬ ನಾಡು ಕಂಡ ಉತ್ಕೃಷ್ಟ ಕಲಾವಿದ. ಹೋಗಿಬನ್ನಿ. ಸಾವಲ್ಲ ಇದು ನಿಮ್ಮ ಹುಟ್ಟು. ನಮನ, ಧನ್ಯವಾದ ರಾಜಣ್ಣ,” ಎಂದು ಭಾವಪೂರ್ಣವಾಗಿ ಬರೆದುಕೊಂಡಿದ್ದಾರೆ.