ಚನ್ನೈ , ಅ.11- ತಲೈವಾ ರಜನಿಕಾಂತ್ ಅಭಿನಯದ ವೆಟ್ಟೈಯಾನ್ ಚಿತ್ರವು ಮೊದಲ ದಿನವೇ 30 ಕೋಟಿ ರೂ.ಗಳ ಭರ್ಜರಿ ಕಲೆಕ್ಷನ್ ಮಾಡಿದೆ.ಬಾಲಿವುಡ್ ಬಾದ್‌ಶಾ ಅಮಿತಾಬ್ ಬಚ್ಚನ್ ಜತೆಗೆ ರಜನಿಕಾಂತ್ ನಟಿಸಿರುವ ವೆಟ್ಟೈಯಾನ್ ಚಿತ್ರ ನಿನ್ನೆ ದೇಶದಾದ್ಯಂತ ಬಿಡುಗಡೆಯಾಗಿದ್ದು ಮೊದಲ ದಿನವೇ 30 ಕೋಟಿ ರೂ.ಗಳ ಕಲೆಕ್ಷನ್ ಮಾಡಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ದಸರಾ ಹಬ್ಬದ ಸಂದರ್ಭದಲ್ಲೇ ಚಿತ್ರ ಬಿಡುಗಡೆಯಾಗಿರುವುದರಿಂದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ನೂತನ ದಾಖಲೆ ಬರೆಯುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ. ಪಂಚಭಾಷೆಗಳಲ್ಲಿ ಬಿಡುಗಡೆಯಾಗಿರುವ ಈ ಚಿತ್ರದ ತಮಿಳು ಅವತರಣಿಕೆಯಿಂದ ಮೊದಲ ದಿನವೇ 26.15 ಕೋಟಿ ರೂ. ಕಲೆಕ್ಷನ್ ಮಾಡಿದ್ದರು, ತೆಲುಗಿನಿಂದ ? 3.2 ಕೋಟಿ, ಹಿಂದಿಯಿAದ 60 ಲಕ್ಷ ಹಾಗೂ ಕನ್ನಡ ಅವತರಣಿಕೆಯಿಂದ 50 ಲಕ್ಷ ರೂ.ಗಳ ಹಣ ಸಂಗ್ರಹವಾಗಿದೆ.
ಟಿಜೆ ಜ್ಞಾನವೇಲ್ ನಿರ್ದೇಶನದ ಈ ಚಿತ್ರದ ತಾರಾಬಳಗದಲ್ಲಿ -ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ, ಮಂಜು ವಾರಿಯರ್, ರಿತಿಕಾ ಸಿಂಗ್, ದುಷಾರ ವಿಜಯನ್ ಮತ್ತು ವಿಜೆ ರಕ್ಷಣ್ ಕೂಡ ಇದ್ದಾರೆ.
1991ರಲ್ಲಿ ಹಮ್ ಚಿತ್ರದಲ್ಲಿ ಜತೆಯಾಗಿ ನಟಿಸಿದ್ದ ಅಮಿತಾಬ್ ಹಾಗೂ ರಜನಿಕಾಂತ್ ಅವರು ಮತ್ತೆ ಈಗ ಒಂದಾಗಿ ನಟಿಸುವ ಮೂಲಕ ಗಮನ ಸೆಳೆದಿದ್ದಾರೆ. ವೆಟ್ಟೈಯಾನ್ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ರಜನಿಕಾಂತ್ ಅವರು ಬಿಗ್ ಬಿ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ ಸಮಯವನ್ನು ನೆನಪಿಸಿಕೊಂಡರು. ಅಮಿತಾಬ್ ಬಚ್ಚನ್ ತಮ್ಮ ಜುಹು ಮನೆ ಮತ್ತು ಇತರ ಮುಂಬೈ ಆಸ್ತಿಗಳನ್ನು ಹೇಗೆ ಮಾರಾಟ ಮಾಡಬೇಕಾಯಿತು ಎಂದು ಅವರು ಹೇಳಿಕೊಂಡಿದ್ದರು.