ನವದೆಹಲಿ,ಆ.1- ದೇಶದ ಎರಡನೇ ಅತ್ಯುನ್ನುತ ನಾಗರಿಕ ಹುದ್ದೆ ಎನಿಸಿರುವ ಉಪರಾಷ್ಟ್ರಪತಿ ಆಯ್ಕೆಗೆ ಭಾರತ ಚುನಾವಣಾ ಆಯೋಗ ದಿನಾಂಕವನ್ನು ಘೋಷಣೆ ಮಾಡಿದ್ದು, ಜಗದೀಪ್ ಧನ್ಕರ್ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಸೆಪ್ಟೆಂಬರ್ 9 ರಂದು ಚುನಾವಣೆ ನಡೆಯಲಿದೆ.
ಭಾರತದ ಚುನಾವಣಾ ಆಯೋಗ ವೇಳಾ ಪಟ್ಟಿಯನ್ನು ಹೊರಡಿಸಿದ್ದು, ಇದರ ಪ್ರಕಾರ, ಉಪರಾಷ್ಟ್ರಪತಿ ಆಯ್ಕೆಗೆ ಸೆಪ್ಟೆಂಬರ್ 9 ಮತದಾನ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ ಎಂದು ಆಯೋಗ ತಿಳಿಸಿದೆ.ಆಗಸ್ಟ್ 7 ರಂದು ಚುನಾವಣಾ ಆಯೋಗದ ಅಧಿಸೂಚನೆ ಪ್ರಕಟವಾಗಲಿದ್ದು, ಆಗಸ್ಟ್ 21 ನಾಮನಿರ್ದೇಶನಗಳನ್ನು ಸಲ್ಲಿಸಲು ಕೊನೆಯ ದಿನವಾಗಿದ್ದು, ಆಗಸ್ಟ್ 22 ನಾಮಪತ್ರಗಳ ಪರಿಶೀಲನೆ ನಡೆಯಲಿದೆ.
ಆಗಸ್ಟ್ 25 ಉಮೇದುವಾರಿಕೆಗಳನ್ನು ಹಿಂಪಡೆಯಲು ಕೊನೆಯ ದಿನವಾಗಿದೆ. ಗೃಹ ಸಚಿವಾಲಯವು ಕಳೆದ ಜುಲೈ 22, 2025 ರಂದು ಹೊರಡಿಸಲಾದ ಅಧಿಸೂಚನೆಯ ಮೂಲಕ ಖಾಲಿ ಹುದ್ದೆಯನ್ನು ದೃಢಪಡಿಸಿತ್ತು. ಆಯ್ಕೆಯಾದ ವ್ಯಕ್ತಿಯು ಅವರು ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಐದು ವರ್ಷಗಳ ಪೂರ್ಣ ಅವಧಿಯನ್ನು ಪೂರೈಸುತ್ತಾರೆ.17ನೇ ಉಪರಾಷ್ಟ್ರಪತಿ ಚುನಾವಣೆಯು 1952 ರ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣಾ ಕಾಯ್ದೆಯಲ್ಲಿ ನಿಗದಿಪಡಿಸಿದ ನಿಯಮಗಳ ಪ್ರಕಾರ ನಡೆಯಲಿದೆ. ಜುಲೈ 22 ರಂದು ಹಾಲಿ ಅಧ್ಯಕ್ಷ ಜಗದೀಪ್ ಧನ್ಕರ್ ರಾಜೀನಾಮೆ ನೀಡಿದ ನಂತರ ಚುನಾವಣೆ ಎದುರಾಗಿದೆ.
ಬಲಾಬಲ :
ಬಿಜೆಪಿ ನೇತೃತ್ವದ ಎನ್‌ಡಿಎ ಲೋಕಸಭೆಯಲ್ಲಿ 293 ಸದಸ್ಯರ ಬೆಂಬಲವನ್ನು ಹೊಂದಿದೆ(542 ಸದಸ್ಯರು) ರಾಜ್ಯಸಭೆಯಲ್ಲಿ 129 ಸದಸ್ಯರ ಬೆಂಬಲವನ್ನು ಹೊಂದಿದೆ. ಇನ್ನು ನಾಮನಿರ್ದೇಶಿತ ಸದಸ್ಯರುಗಳನ್ನು ಸೇರಿಸಿದರೆ, ಆಡಳಿತ ಒಕ್ಕೂಟವು 786 ಸದಸ್ಯರಲ್ಲಿ 422 ಸದಸ್ಯರ ಬೆಂಬಲವನ್ನು ಹೊಂದಿದೆ.
ಉಭಯ ಸದನಗಳ ಒಟ್ಟು ಸದಸ್ಯರ ಬಲ 782 ಆಗಿದೆ. ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಗೆಲ್ಲಲು 392 ಮತಗಳ ಅಗತ್ಯವಿದೆ.ಈ ಮಧ್ಯೆ ಬಿಜೆಪಿ ನೇತೃತ್ವದ ಎನ್‌ಡಿಎ ಬಹುಮತ ಹೊಂದಿದ್ದರೂ ಸಹ ಪ್ರತಿಪಕ್ಷಗಳು ಇಂಡಿಯಾ ಒಕ್ಕೂಟದಿಂದ ಒಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ.
ಫಲಿತಾಂಶ ಏನೇ ಇರಲಿ ಪ್ರಬಲ ರಾಜಕೀಯ ಸಂದೇಶ ರವಾನಿಸುವ ಸ್ಪರ್ಧೆಯಿಂದ ಹಿಂದೆ ಸರಿಯಬಾರದು ಎಂಬುದು ವಿಪಕ್ಷಗಳ ಭಾವನೆಯಾಗಿದೆ ಎನ್ನಲಾಗಿದೆ. ಒಬ್ಬರು ನಾಮನಿರ್ದೇಶಿತ ಸದಸ್ಯರು ಸೇರಿದಂತೆ ಲೋಕಸಭೆ ಮತ್ತು ರಾಜ್ಯಸಭೆಯ ಎಲ್ಲಾ ಸದಸ್ಯರು ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸುತ್ತಾರೆ.
542 ಸದಸ್ಯ ಬಲದ ಲೋಕಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 293 ಸದಸ್ಯರ ಬೆಂಬಲವನ್ನು ಹೊಂದಿದ್ದರೆ ಇಂಡಿಯಾ ಒಕ್ಕೂಟ 234 ಸದಸ್ಯರನ್ನು ಹೊಂದಿದೆ. 240 ಸದಸ್ಯರ ಬಲದ ರಾಜ್ಯಸಭೆಯಲ್ಲಿ ಬಿಜೆಪಿ 130 ಸದಸ್ಯರನ್ನು ಹೊಂದಿದೆ. ನಾಮನಿರ್ದೇಶಿತ ಸದಸ್ಯರು ಬಹುತೇಕ ಎನ್‌ಡಿಎ ಅಭ್ಯರ್ಥಿ ಬೆಂಬಲಿಸಲಿದ್ದಾರೆ ಎನ್ನಲಾಗಿದೆ. ಇಂಡಿಯಾ ಒಕ್ಕೂಟ ಮೇಲ್ಮನೆಯಲ್ಲಿ 79 ಸದಸ್ಯರ ಬೆಂಬಲವನ್ನು ಹೊಂದಿದೆ. ಪರಿಣಾಮ ಸಂಸತ್ತಿನಲ್ಲಿ ಎನ್‌ಡಿಎ 423 ಮತ್ತು ಇಂಡಿಯಾ ಒಕ್ಕೂಟ 313 ಸದಸ್ಯರನ್ನು ಹೊಂದಿದೆ.
ಸಂವಿಧಾನದ ಪರಿಚ್ಛೇದ 68 (2) ರ ಪ್ರಕಾರ, ಮರಣ, ರಾಜೀನಾಮೆ ಅಥವಾ ತೆಗೆದುಹಾಕುವಿಕೆ ಅಥವಾ ಇನ್ಯಾವುದೇ ಕಾರಣದಿಂದ ಉಪ ರಾಷ್ಟ್ರಪತಿ ಸ್ಥಾನ ತೆರವಾದ ನಂತರ ಆದಷ್ಟು ಬೇಗ ಚುನಾವಣೆ ನಡೆಸಬೇಕು ಎಂದು ಹೇಳುತ್ತದೆ.
ಉಪರಾಷ್ಟ್ರಪತಿ ಆಯ್ಕೆ ಹೇಗೆ ನಡೆಯುತ್ತದೆ? ಉಪರಾಷ್ಟ್ರಪತಿ ಚುನಾವಣೆಯಲ್ಲಿ, ರಾಜ್ಯಸಭೆಯ 233 ಚುನಾಯಿತ ಸಂಸದರು, ರಾಜ್ಯಸಭೆಯ 12 ನಾಮನಿರ್ದೇಶಿತ ಸಂಸದರು ಮತ್ತು ಲೋಕಸಭೆಯ 543 ಸಂಸದರು ತಮ್ಮ ಮತಗಳನ್ನು ಚಲಾಯಿಸಬಹುದು. ಈ ರೀತಿಯಾಗಿ, ಒಟ್ಟು 788 ಜನರು ಮತ ಚಲಾಯಿಸಬಹುದು.ಪಕ್ಷಗಳ ವಿಪ್ ಅಗತ್ಯವಿಲ್ಲದೆ ಗೌಪ್ಯ ಮತಪತ್ರದ ಮೂಲಕ ಮತದಾನ ನಡೆಯುತ್ತದೆ. ರಾಷ್ಟ್ರಪತಿ ಚುನಾವಣೆಯಂತೆ ರಾಜ್ಯಗಳ ವಿಧಾನಸಭೆ ಶಾಸಕರಿಗೆ ಮತದಾನದ ಅವಕಾಶವಿಲ್ಲ.
ಏಕಮತದಾನ ವರ್ಗಾವಣೆ ವಿಧಾನದಲ್ಲಿ ಪ್ರತಿಯೊಬ್ಬ ಮತದಾರ ಅಭ್ಯರ್ಥಿಗಳನ್ನು ಪ್ರಾಶಸ್ತ್ಯದ ಕ್ರಮದಲ್ಲಿ ಶ್ರೇಣೀಕರಿಸುತ್ತಾರೆ. ಅವರ ಪ್ರಾಶಸ್ತ್ಯವನ್ನು ಸಂಖ್ಯೆಗಳ ರೂಪದಲ್ಲಿ ಗುರುತಿಸುತ್ತಾರೆ. (ಮೊದಲ ಪ್ರಾಶಸ್ತ್ಯಕ್ಕೆ 1, 2ನೇ ಪ್ರಾಶಸ್ತ್ಯಕ್ಕೆ 2, ಇತ್ಯಾದಿ.) ಮತಪತ್ರವು ಮಾನ್ಯವಾಗಿರಲು ಮೊದಲ ಪ್ರಾಶಸ್ಯವನ್ನು ಗುರುತಿಸುವುದು ಕಡ್ಡಾಯವಾಗಿದೆ.
ನಂತರದ ಆದ್ಯತೆಗಳು ಐಚ್ಛಿಕವಾಗಿರುತ್ತವೆ. ಎಣಿಕೆ ವೇಳೆ ಎಲ್ಲ ಅಭ್ಯರ್ಥಿಗಳಿಗೆ ಸಿಗುವ ಮೊದಲ ಪ್ರಾಶಸ್ತ್ಯದ ಮತಗಳನ್ನು ಆರಂಭಿಕವಾಗಿ ಎಣಿಕೆ ಮಾಡಲಾಗುತ್ತದೆ. ಮೊದಲ ಪ್ರಾಶಸ್ತ್ಯದ ಮತಗಳ ಎಣಿಕೆಯಲ್ಲಿ ಬಹುಮತ ದೊರೆಯದಿದ್ದಲ್ಲಿ 2ನೇ ಪ್ರಾಶಸ್ತ್ಯದ ಮತದಾನವನ್ನು ಪರಿಗಣಿಸಲಾಗುತ್ತದೆ. ಹೀಗೆಯೇ ಬಹುಮತ ಬರುವವರೆಗೂ ಮುಂದುವರಿಯುತ್ತದೆ.
ಅರ್ಹತೆಗಳೇನು? :
ಉಪರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸುವ ವ್ಯಕ್ತಿಯು ಭಾರತದ ನಾಗರಿಕನಾಗಿರಬೇಕು. ಕನಿಷ್ಠ 35 ವರ್ಷ ವಯಸ್ಸಾಗಿರಬೇಕು.ರಾಜ್ಯಸಭೆಯ ಸದಸ್ಯನಾಗಿ ಚುನಾಯಿತಗೊಳ್ಳಲು ಅರ್ಹತೆಯನ್ನು ಹೊಂದಿರಬೇಕು.
ಕೇಂದ್ರ ಅಥವಾ ರಾಜ್ಯ ಸರ್ಕಾರಗಳು, ಸ್ಥಳೀಯ ಪ್ರಾಧಿಕಾರಗಳು ಅಥವಾ ಇತರ ಸಾರ್ವಜನಿಕ ಪ್ರಾಧಿಕಾರಗಳ ಅಡಿಯಲ್ಲಿ ಯಾವುದೇ ಲಾಭದಾಯಕ ಹುದ್ದೆಯನ್ನು ಹೊಂದಿರಬಾರದು. 1974ರ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣಾ ನಿಯಮಗಳ ಅಡಿಯಲ್ಲಿ, ಅಭ್ಯರ್ಥಿಯ ನಾಮನಿರ್ದೇಶನವನ್ನು ಚುನಾವಣಾ ಕಾಲೇಜಿನಿಂದ ಕನಿಷ್ಠ 20 ಪ್ರಸ್ತಾವಕರು ಮತ್ತು 20 ಸಮರ್ಥಕರು ಬೆಂಬಲಿಸಬೇಕು.15,000 ರೂ. ಭದ್ರತಾ ಠೇವಣಿಯನ್ನು ಇಡಬೇಕು.