ಬೆಂಗಳೂರು,ಮೇ8- ಪ್ರಸಕ್ತ ಲೋಕಸಭೆ ಚುನಾವಣೆಯ ಎರಡು ಹಂತದ ಮತದಾನ ರಾಜ್ಯದಲ್ಲಿ ಪೂರ್ಣಗೊಂಡ ಬೆನ್ನಲ್ಲೇ ವಿಧಾನಪರಿಷತ್‌ನ ಆರು ಸದಸ್ಯ ಸ್ಥಾನಗಳಿಗೆ ಮತ್ತೊಂದು ಚುನಾವಣೆ ಎದುರಾಗಿದೆ. ವಿಧಾನಪರಿಷತ್‌ನ ಆರು ಸದಸ್ಯ ಸ್ಥಾನಗಳಿಗೆ ನಾಳೆ ಅಧಿಸೂಚನೆ ಹೊರಬೀಳಲಿದ್ದು, ನಾಳೆಯಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ.
ಆಯನೂರು ಮಂಜುನಾಥ್ ಮತ್ತು ಮರಿತಿಬ್ಬೇಗೌಡ ಅವರ ರಾಜೀನಾಮೆಯಿಂದ ತೆರವಾಗಿರುವ ಎರಡು ಸ್ಥಾನ ಹಾಗೂ ಡಾ.ಚಂದ್ರಶೇಖರ ಬಿ.ಪಾಟೀಲ, ಎ.ದೇವೇಗೌಡ, ಡಾ.ವೈ.ಎ.ನಾರಾಯಣಸ್ವಾಮಿ, ಎಸ್.ಎಲ್.ಬೋಜೇಗೌಡ ಅವರು ಜೂ.21ರಂದು ನಿವೃತ್ತಿ ಹೊಂದುವುದರಿಂದ ತೆರವಾಗುವ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರ, ಕರ್ನಾಟಕ ನೈರುತ್ಯ ಪದವೀಧರ, ಬೆಂಗಳೂರು ಪದವೀಧರ ಹಾಗೂ ಕರ್ನಾಟಕ ಆಗ್ನೇಯ ಶಿಕ್ಷಕರ, ಕರ್ನಾಟಕ ನೈರುತ್ಯ ಶಿಕ್ಷಕರ ಮತ್ತು ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರಗಳಿಗೆ ಭಾರತದ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ.
ನಾಳೆಯಿಂದ ಮೇ 16ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ಮೇ 17ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಮೇ 20ರಂದು ನಾಮಪತ್ರ ವಾಪಸ್ ಪಡೆಯಲು ಕಡೆಯ ದಿನವಾಗಿದೆ. ಜೂ.3ರಂದು ಬೆಳಗ್ಗೆ 8ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದ್ದು, ಜೂ.6ರಂದು ಮತ ಎಣಿಕೆ ನಡೆಯಲಿದೆ.
ವಿಧಾನಪರಿಷತ್‌ನ ಚುನಾವಣಾ ವೇಳಾಪಟ್ಟಿ ಮೇ 2ರಂದು ಪ್ರಕಟವಾಗಿದ್ದು, ಅಂದಿನಿಂದಲೇ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಈಶಾನ್ಯ, ನೈರುತ್ಯ ಹಾಗೂ ಬೆಂಗಳೂರು ಪದವೀಧರ ಕ್ಷೇತ್ರಗಳಲ್ಲಿ 3,24,502 ಮತದಾರರು ಇದ್ದು, 1,81,391 ಪುರುಷರು 1,43,075 ಮಹಿಳೆಯರು ಹಾಗೂ 36 ಇತರೆ ಮತದಾರರು ಇದ್ದಾರೆ.
ಆಗ್ನೇಯ, ನೈರುತ್ಯ ಹಾಗೂ ದಕ್ಷಿಣ ಶಿಕ್ಷಕರ ಕ್ಷೇತ್ರಗಳಲ್ಲಿ 61,273 ಮತದಾರರು ಇದ್ದು ಈ ಪೈಕಿ 33,977 ಪುರುಷರು 27,294 ಮಹಿಳೆ ಹಾಗೂ ಇತರೆ 2 ಮತದಾರರು ಇದ್ದಾರೆ.ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ ಒಟ್ಟು 1,00,100 ಪದವೀಧರ ಮತದಾರರು ಇದ್ದು ಇದರಲ್ಲಿ 48,236 ಪುರುಷರು, 51,852 ಮಹಿಳೆಯರು ಹಾಗೂ ಇತರೆ 12 ಮತದಾರರು ಇದ್ದಾರೆ. ನೈರುತ್ಯ ಪದವೀಧರ ಕ್ಷೇತ್ರದಲ್ಲಿ 74,218 ಮತದಾರರು ಇದ್ದು, ಇದರಲ್ಲಿ 38,051 ಪುರುಷರು, 36,162 ಮಹಿಳೆಯರು ಹಾಗೂ 5 ಇತರೆ ಮತದಾರರು ಇದ್ದಾರೆ.
ಈಶಾನ್ಯ ಪದವೀಧರ ಕ್ಷೇತ್ರದಲ್ಲಿ 1,50,184 ಮತದಾರರು ಇದ್ದು, ಇದರಲ್ಲಿ 95,104 ಪುರುಷರು, 55,061 ಮಹಿಳೆಯರು ಹಾಗೂ 19 ಇತರ ಮತದಾರರು ಇದ್ದಾರೆ.ಹಾಗೆಯೇ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ 23,514 ಮತದಾರರು ಇದ್ದು, ಇದರಲ್ಲಿ 14,679 ಪುರುಷರು, 8,835 ಮಹಿಳಾ ಮತದಾರರು ಇದ್ದಾರೆ.
ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ 19,380 ಮತದಾರರು ಇದ್ದು 8,943 ಪುರುಷರು ಹಾಗೂ 10,437 ಮಹಿಳಾ ಮತದಾರರು ಮತದಾನ ಮಾಡುವ ಹಕ್ಕು ಪಡೆದಿದ್ದಾರೆ.ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ 18,379 ಮತದಾರರು ಇದ್ದು 10,335 ಪುರುಷರು, 8,022 ಮಹಿಳೆಯರು ಹಾಗೂ ಇತರೆ ಇಬ್ಬರು ಮತದಾರರು ಇದ್ದಾರೆ.