ಬೆಂಗಳೂರು, ನ.10- ವಿಧಾನಸೌಧದ ಲ್ಲಿರುವ ಟೆರರಿಸ್ಟ್‌ಗೂ ಪರಪನ ಅಗ್ರಹಾರದಲ್ಲಿ ರುವ ಟೆರರಿಸ್ಟ್‌ಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸೌಧದ ಟೆರರಿಸ್ಟ್ ಯಾರೆಂದು ನನ್ನಗಿಂತ ಮಾಧ್ಯಮದವರಿಗೆೆ ಚೆನ್ನಾಗಿ ಗೊತ್ತಿದೆ. ವಿಧಾನಸೌಧದಲ್ಲಿರುವ ಟೆರರಿಸ್ಟ್ ಇವರಿಗಿಂತ ತುಂಬಾ ಅಪಾಯಕಾರಿ. ಈ ಬಗ್ಗೆ ಜನರು ಮಾತನಾಡುತ್ತಾರೆ ಎಂದರು.
ಜೈಲಿನಲ್ಲಿ ಖೈದಿಗಳಿಗೆ ರಾಜಾತಿಥ್ಯ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಜೈಲಿನಲ್ಲಿ ಸೌಲಭ್ಯ ನೀಡಿರುವ ಬಗ್ಗೆ ಚರ್ಚೆ ಆಗುತ್ತಿದ್ದು, ಇದು ಏನು ಹೊಸದಾಗಿ ಶುರುವಾಗಿಲ್ಲ. ಈ ಹಿಂದೆ ಹಿರಿಯ ಅಧಿಕಾರಿಗಳ ವಿಚಾರದಲ್ಲಿ ಘರ್ಷಣೆ ಆಗಿತ್ತು. ಅಧಿಕಾರಿಗಳ ನಡುವೆಯೇ ರಾಜಕಾರಣ ನಡೆಯುತ್ತಿದೆ. ಗೃಹ ಸಚಿವರು ಏನು ತನಿಖೆ ಮಾಡುತ್ತಾರೆ? ಎಂದು ಪ್ರಶ್ನಿಸಿದರು. ಮಾಧ್ಯಮಗಳು ಅಲ್ಲಿ ದೊರಕಿರುವ ಸೌಲಭ್ಯಗಳ ಬಗ್ಗೆ ತೋರಿಸಿವೆ. ಈಗ ಮತ್ತೆ ತನಿಖೆ ಮಾಡಿ ಏನು ಮಾಡುತ್ತೀರಾ? ಸುಮನೇ ಕಾಲ ಹರಣ ಮಾಡುತ್ತೀರಾ ಎಂದ ಅವರು, ಇದೆಲ್ಲಕ್ಕೂ ಮುಖ್ಯಮಂತ್ರಿ ಮತ್ತು ಗೃಹ ಸಚಿವರನ್ನೇ ಕೇಳಬೇಕು. ಆಡಳಿತ ವೈಫಲ್ಯ ಸರ್ಕಾರದಲ್ಲಿ ಎದ್ದು ಕಾಣುತ್ತಿದೆ ಎಂದರು.
ಮುಖ್ಯಮಂತ್ರಿಗಳು ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ ಎಂದು ಹೇಳಿದ್ದರೂ, ಈಗ ನಿಮಗೆ ಇದೆಯೇ? ಮಾಹಿತಿ ತಗೊಂಡು ಮುಖ್ಯಮಂತ್ರಿ ಮಾತನಾಡುತ್ತಾರಂತೆ. ಇವರಿಗೆ ಇಂಟಲಿಜೆನ್‌್ಸ ಇರಲ್ವಾ? ಎಂದು ಪ್ರಶ್ನಿಸಿದರು. ಒತ್ತಡ ಹಾಕಿದ ತಕ್ಷಣ ರಾಜೀನಾಮೆ ಕೊಡುವ ಕಾಲವೇ ಇದು? ಅಷ್ಟೊಂದು ನೈತಿಕತೆ ಯಾವ ರಾಜಕಾರಣಿಗಳಿಗೆ ಇದೆ? ಎಂದು ಗೃಹ ಸಚಿವರ ರಾಜೀನಾಮೆ ವಿಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.
ವಿಮಾನ ನಿಲ್ದಾಣದಲ್ಲಿ ನಮಾಜ್ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದಿದೆ. ಅನೇಕ ಜನರು ಬರುತ್ತಾರೆ. ಬೇರೆ ದೇಶದಲ್ಲಿ ಪ್ರತ್ಯೇಕ ಕೊಠಡಿ ಕೊಡುತ್ತಾರೆ. ಇಲ್ಲಿ ಹಲವಾರು ಧರ್ಮದ ಜನರು ಬರುತ್ತಾರೆ. ಅವರವರ ಧರ್ಮ ಅವರು ಪಾಲಿಸಬೇಕು. ನಾವು ಸಣ್ಣತನ ತೋರೋದಲ್ಲ, ಅವರಿಗೊಂದು ಕೊಠಡಿ ಮಾಡಿಕೊಡಬೇಕು ಎಂದರು.
