ವಿಜಯಪುರ,ಅ.13-ಹಳೇ ದ್ವೇಷದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೊಲೆಯಾದ ಯುವಕರನ್ನು ತಾಲ್ಲೂಕಿನ ಕನ್ನೂರು ಗ್ರಾಮದ ಸಾಗರ್ ಬೆಳುಂಡಗಿ (26) ಮತ್ತು ಇಸಾಕ್ ಖುರೇಶಿ (24) ಎಂದು ಗುರುತಿಸಲಾಗಿದೆ.
ರಾತ್ರಿ 10.30 ರ ಸುಮಾರಿನಲ್ಲಿ ಇವರಿಬ್ಬರು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ದುಷ್ಕರ್ಮಿಗಳು ಅಡ್ಡಗಟ್ಟಿ ಹಲ್ಲೆ ನಡೆಸಿ ಇಬ್ಬರ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಸುದ್ದಿ ತಿಳಿದು ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಇಬ್ಬರ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.
ಜೋಡಿ ಕೊಲೆಯ ತನಿಖೆ ಕೈಗೊಂಡಿರುವ ಪೊಲೀಸರು, ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ, ದೃಶ್ಯಾವಳಿಗಳನ್ನು ಆಧರಿಸಿ, ಹಂತಕರ ಪತ್ತೆಗೆ ಶೋಧ ಕೈಗೊಂಡಿದ್ದಾರೆ.
ಈ ಜೋಡಿ ಕೊಲೆಯಿಂದ ಕನ್ನೂರು ಗ್ರಾಮದ ಜನತೆ ಆತಂಕಗೊಂಡಿದ್ದಾರೆ.
ಎರಡು ವರ್ಷದ ಹಿಂದೆ ಗ್ರಾಮದ ಈರಣ್ಣಗೌಡ ಎಂಬುವವರ ಮೇಲೆ ಈ ಇಬ್ಬರು ಹಲ್ಲೆ ನಡೆಸಿದ್ದರು, ಕೆಲ ದಿನಗಳ ಹಿಂದೆ ಚಿಕಿತ್ಸೆ ಲಿಸದೇ ಈರಣ್ಣಗೌಡ ಮೃತಪಟ್ಟಿದ್ದಾರೆ. ಇದೇ ದ್ವೇಷಕ್ಕೆ ಈ ಇಬ್ಬರನ್ನು ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ.