Wednesday, March 12, 2025
Homeರಾಜ್ಯವಿಜಯೇಂದ್ರ-ಅಮಿತ್ ಶಾ ಮಾತುಕತೆ

ವಿಜಯೇಂದ್ರ-ಅಮಿತ್ ಶಾ ಮಾತುಕತೆ

Vijayendra-Amit Shah talks

ಬೆಂಗಳೂರು, ಫೆ.11- ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಆಂತರಿಕ ಕಚ್ಚಾಟಕ್ಕೆ ಬ್ರೇಕ್ ಹಾಕಲು ಹೈಕಮಾಂಡ್ ಮುಂದಾಗಿರುವ ಬೆನ್ನಲ್ಲೇ, ವರಿಷ್ಠರ ಸೂಚನೆ ಹಿನ್ನೆಲೆಯಲ್ಲಿ ದೆಹಲಿಗೆ ತೆರಳಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲಿದ್ದಾರೆಂದು ತಿಳಿದುಬಂದಿದೆ.

ಕಳೆದ ಭಾನುವಾರ ಸಂಜೆ ವಿಜಯೇಂದ್ರ ಅವರು ದೆಹಲಿಗೆ ತೆರಳಿದ್ದರು.ಒಂದೆರಡು ದಿನಗಳ ಕಾಲ ಅಲ್ಲಿಯೇ ಇದ್ದು, ಬಳಿಕ ಅಮಿತ್ ಶಾ ಅವರನ್ನು ಭೇಟಿ ಮಾಡಿ ರಾಜ್ಯಕ್ಕೆ ವಾಪಸ್ಸಾಗಲಿದ್ದಾರೆ. ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ದೆಹಲಿಯಲ್ಲಿ ಬಿಜೆಪಿ ಅಧಿಕಾರ ಮತ್ತು ಮಣಿಪುರದಲ್ಲಿ ಸಿಎಂ ಎನ್. ಬಿರೇನ್ ಸಿಂಗ್ ತಮ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಉಂಟಾಗಿರುವ ಬಿಕ್ಕಟ್ಟಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯನಿರತರಾಗಿದ್ದು, ಬಿಡುವಾದ ಬಳಿಕ ಅಮಿತ್ ಶಾ ಅವರನ್ನು ಭೇಟಿ ಮಾಡಿದ ನಂತರವೇ ವಿಜಯೇಂಧ್ರ ವಾಪಸ್ಸಾಗಲಿದ್ದಾರೆಂದು ಮೂಲಗಳು ತಿಳಿಸಿವೆ.

ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ವಿಚಾರವಾಗಿ ವರಿಷ್ಠರು ನಿರ್ಧಾರ ಕೈಗೊಳ್ಳಲು ಮುಂದಾಗಿರುವ ಹಿನ್ನೆಲೆಯಲ್ಲಿ ಶಾ ಅವರೊಂದಿಗಿನ ವಿಜಯೇಂದ್ರ ಅವರ ಭೇಟಿ ನಿರ್ಣಾಯಕವಾಗಿದೆ.ಈ ನಡುವೆ ಪಕ್ಷದ ಹೈಕಮಾಂಡ್ ನಾಯಕರು ತಮಗೆ ಅವಕಾಶ ನೀಡುತ್ತಾರೆ ಎಂದು ನಿರೀಕ್ಷೆ ಇಟ್ಟುಕೊಂಡಿರುವ ಮಾಜಿ ಸಚಿವ ಬಿ. ಶ್ರೀರಾಮುಲು ಅವರು, ಪ್ರಯಾಗ್ರಾಜ್ನಲ್ಲಿ ಪವಿತ್ರ ಸ್ನಾನ ಮಾಡಿ ತವರಿಗೆ ವಾಪಸ್ಸಾಗಿದ್ದಾರೆ.

ಸಂಡೂರು ಉಪಚುನಾವಣೆಯಲ್ಲಿ ಪಕ್ಷದ ಸೋಲಿನ ಕುರಿತು ಮಾಜಿ ಸಿಎಂ ಡಿ.ವಿ. ಸದಾನಂದಗೌಡ ನೇತೃತ್ವದ ಸಮಿತಿಯ ವರದಿಯನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ. ಚುನಾವಣೆಗೆ ಉಳಿದಿರುವ ಕೊನೆಯ ಐದು ದಿನಗಳಲ್ಲಿ ಶ್ರೀರಾಮುಲು ಪ್ರಚಾರಕ್ಕೆ ಗೈರುಹಾಜರಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಈ ವಿಷಯದ ಬಗ್ಗೆ ಬಿಜೆಪಿ ಕರ್ನಾಟಕ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರು ಶ್ರೀರಾಮುಲು ಅವರನ್ನು ಪ್ರಶ್ನಿಸಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ಅವರು ಪಕ್ಷ ತೊರೆಯಲು ನಿರ್ಧರಿಸಿದ್ದಾರೆಂಬ ಮಾತುಗಳು ಕೇಳಿ ಬಂದಿದ್ದವು. ಏತನಧ್ಯೆ ಕೇಂದ್ರ ಸಚಿವ ವಿ.ಸೋಮಣ್ಣ ಅವರ ಮನೆ ಪೂಜೆ ನೆಪದಲ್ಲಿ ಬಂಡಾಯ ನಾಯಕರೂ ದೆಹಲಿ ಸೇರಿದ್ದರು.

ಈ ನಡುವೆ ಬಿಜೆಪಿ ಕೇಂದ್ರ ಚುನಾವಣಾ ಶಿಸ್ತು ಸಮಿತಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ಸೋಮವಾರವಷ್ಟೇ ಷೋಕಾಸ್ ನೋಟಿಸ್ ನೀಡಿದ್ದು, ಮೂರು ದಿನದೊಳಗೆ ಉತ್ತರಿಸುವಂತೆ ಸೂಚಿಸಿದೆ. ಹೀಗಾಗಿ ವಿಜಯೇಂದ್ರ ಹಾಗೂ ಯತ್ನಾಳ್ ಬಣದ ನಡುವೆ ಮುಂದೆ ನಡೆಯುವ ವಿದ್ಯಾಮಾನಗಳು ಕುತೂಹಲಕ್ಕೆ ಎಡೆಮಾಡಿಕೊಟ್ಟಿವೆ.

RELATED ARTICLES

Latest News