ಬೆಂಗಳೂರು,ಜು.3- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಡೆದಿರುವ ಬಹುಕೋಟಿ ಹಗರಣವನ್ನು ರಾಜ್ಯಸರ್ಕಾರ ಕೂಡಲೇ ಸಿಬಿಐಗೆ ವಹಿಸಬೇಕೆಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ತವರು ಜಿಲ್ಲೆ ಮೈಸೂರಿನ ಮುಡಾದಲ್ಲೇ ಸುಮಾರು 4 ಸಾವಿರ ಕೋಟಿ ಹಗರಣ ನಡೆದಿರುವುದು ಬೆಳಕಿಗೆ ಬಂದಿದೆ. ಇದರಲ್ಲಿ ಅನೇಕ ಪ್ರಭಾವಿಗಳೂ ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಹೀಗಾಗಿ ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿದರು.
ಈ ಮೊದಲು ವಾಲೀಕಿ ಅಭಿವೃದ್ಧಿ ನಿಗಮದಲ್ಲಿ ಏನೂ ನಡೆದಿಲ್ಲ ಎಂದು ತಿಪ್ಪೆ ಸಾರುವ ಕೆಲಸ ಮಾಡಲಾಯಿತು. ಬಳಿಕ ಸಚಿವ ನಾಗೇಂದ್ರ ರಾಜೀನಾಮೆ ನೀಡಬೇಕಾಯಿತು. ಸರ್ಕಾರ ಮತ್ತು ಪಕ್ಷಕ್ಕೆ ಮುಜುಗರವಾಗಬಾರದು ಎಂದು ರಾಜೀನಾಮೆ ನೀಡಿದ್ದಾರೆ ಎಂದು ಸಬೂಬು ಹೇಳುತ್ತಿದ್ದಾರೆ. ತಪ್ಪೇ ಮಾಡಿಲ್ಲ ಎಂದ ಮೇಲೆ ಅವರು ರಾಜೀನಾಮೆ ಏಕೆ ನೀಡಿದರು? ಎಂದು ಪ್ರಶ್ನೆ ಮಾಡಿದರು.
ಮುಡಾದಲ್ಲಿ ಹಗರಣ ಹೊರಬರುತ್ತಿದ್ದಂತೆ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ತಡಬರಿಸಿ ಸಭೆ ನಡೆಸಿದರು. ಅಕ್ರಮ ನಡೆದಿಲ್ಲ ಎಂದರೆ ಆಯುಕ್ತರು, ಅಧಿಕಾರಿಗಳನ್ನು ವರ್ಗಾವಣೆ ಮಾಡಿ ತನಿಖೆಗೆ ಆದೇಶ ಮಾಡಿರುವುದು ಏಕೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಡಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ತಮ ಅಧಿಕಾರ ದುರುಪಯೋಗಪಡಿಸಿಕೊಂಡು ಕೋಟ್ಯಂತರ ರೂ. ಬೆಲೆ ಬಾಳುವ ನಿವೇಶನಗಳನ್ನು ಹಿಂಬಾಲಕರಿಗೆ ಹಂಚಿಕೆ ಮಾಡಿದ್ದಾರೆ. ಇದೀಗ ಈ ಹಗರಣದಲ್ಲಿ ಸ್ವತಃ ಸಿಎಂ ಅವರ ಪತ್ನಿಯೂ ಶಾಮೀಲಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮುಖ್ಯಮಂತ್ರಿ ಕುಟುಂಬದ ಮೇಲೆ ಆರೋಪ ಬಂದಾಗ ರಾಜ್ಯಸರ್ಕಾರದ ತನಿಖಾ ಸಂಸ್ಥೆಗಳು ನಿಸ್ಪಕ್ಷಪಾತವಾಗಿ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದರು.ಮುಡಾದಲ್ಲಿ ಅಕ್ರಮ ನಡೆದಿಲ್ಲ ಎಂದರೆ ಸಚಿವ ಭೈರತಿ ಸುರೇಶ್ ಅವರು ಅಧಿಕಾರಿಗಳನ್ನು ಏಕೆ ವರ್ಗಾವಣೆ ಮಾಡಬೇಕಿತ್ತು?, ಇದು ಸಿಎಂ ಕುಟುಂಬದ ಬುಡಕ್ಕೆ ಬರುತ್ತದೆ ಎಂದು ಗೊತ್ತಾದ ಮೇಲೆ ಹಗರಣವನ್ನು ಮುಚ್ಚಿ ಹಾಕಲು ವ್ಯವಸ್ಥಿತವಾದ ಷಡ್ಯಂತ್ರ ಮಾಡಲಾಗಿದೆ.
ಯತೀಂದ್ರ ಹಾಗೂ ಇತರರನ್ನು ರಕ್ಷಣೆ ಮಾಡುವ ಕಾರಣಕ್ಕಾಗಿಯೇ ಸರ್ಕಾರ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿದರು.ತಮ ಬುಡಕ್ಕೂ ಹಗರಣ ಸುತ್ತಿಕೊಳ್ಳಬಹುದು ಎಂಬ ಕಾರಣಕ್ಕಾಗಿ ಸಚಿವ ಸುರೇಶ್ ಅವರು ಹಗರಣದ ಕಡತವನ್ನು ರಾತ್ರೋರಾತ್ರಿ ತೆಗೆದುಕೊಂಡು ಬಂದಿದ್ದಾರೆ. ಈಗ ಏನೂ ಇಲ್ಲ ಎಂದು ತಿಪ್ಪೆ ಸಾರುವ ಕೆಲಸ ನಡೆಯುತ್ತಿದೆ. ನನಗಿರುವ ಮಾಹಿತಿ ಪ್ರಕಾರ, 4 ಸಾವಿರ ಕೋಟಿ ಹಗರಣ ನಡೆದಿದೆ. ಇದರಲ್ಲಿ ಸಿದ್ದರಾಮಯ್ಯ ಹಾಗೂ ಭೈರತಿ ಸುರೇಶ್ ನೇರ ಭಾಗಿಯಾಗಿದ್ದಾರೆ ಎಂದು ಆರೋಪ ಮಾಡಿದರು.
ವಾಲೀಕಿ ಅಭಿವೃದ್ಧಿ ನಿಗಮದಲ್ಲೂ ಏನೂ ನಡೆದಿಲ್ಲ ಎಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕ ಸಚಿವರು ಸಮರ್ಥಿಸಿಕೊಳ್ಳುತ್ತಿದ್ದರು. ನಾಗೇಂದ್ರ ಬಂಧನವಾದರೆ ಸರ್ಕಾರದ ಬುಡವೇ ಅಲುಗಾಡಲಿದೆ ಎಂಬ ಕಾರಣಕ್ಕಾಗಿ ಬಲವಂತವಾಗಿ ರಾಜೀನಾಮೆ ಪಡೆದಿದ್ದಾರೆ.
ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ಈಗ ಅದೇ ಬ್ರಹಾಂಡ ಭ್ರಷ್ಟಾಚಾರದಲ್ಲಿ ಸಿಲುಕಿಕೊಂಡಿದೆ. ಲೋಕಸಭಾ ಚುನಾವಣೆಯಲ್ಲೂ ಜನತೆ ಸರಿಯಾದ ಪಾಠವನ್ನು ಕಲಿಸಿದ್ದಾರೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಜಯೇಂದ್ರ ಎಚ್ಚರಿಸಿದರು.