ಬೆಂಗಳೂರು,ಆ.17- ರಾಜ್ಯಪಾಲರು ಮುಡಾ ಪ್ರಕರಣದಲ್ಲಿ ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿರುವುದರಿಂದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ರಾಜ್ಯ ಬಿಜೆಪಿ ಅಧ್ಯಕ್ಷ ವಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ.
ಈ ಕುರಿತು ತಮ ಸಾಮಾಜಿಕ ಜಾಲತಾಣ ಎಕ್‌್ಸನಲ್ಲಿ ಪೋಸ್ಟ್ ಮಾಡಿರುವ ಅವರು, ಕಾರ್ಯಾಂಗದ ಮುಖ್ಯಸ್ಥರಾಗಿರುವ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಸಾಂವಿಧಾನಿಕವಾಗಿ ತಮಗಿರುವ ಅಧಿಕಾರವನ್ನು ಚಲಾಯಿಸಿ ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಎಂಬುದಕ್ಕೆ ಈ ಹಿಂದಿನ ನಿದರ್ಶನಗಳೇ ಸಾಕ್ಷಿಯಾಗಿವೆ. ಸಿದ್ದರಾಮಯ್ಯ ವಿರುದ್ಧ ಕೇಳಿಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪುರಾವೆಗಳು ಮತ್ತು ದಾಖಲೆಗಳನ್ನು ಸಾಮಾಜಿಕ ಕಾರ್ಯಕರ್ತರು ರಾಜ್ಯಪಾಲರಿಗೆ ನೀಡಿದ್ದರು.
ಕಾನೂನು ತಜ್ಞರ ಜೊತೆ ಚರ್ಚಿಸಿ ರಾಜ್ಯಪಾಲರು ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿರುವುದರಿಂದ ಸಿದ್ದರಾಮಯ್ಯನವರು ಗೌರವಯುತವಾಗಿ ತಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಬೇಕು. ಅವರು ಅಧಿಕಾರದಲ್ಲಿ ಮುಂದುವರೆದರೆ ಪಾರದರ್ಶಕ ಮತ್ತು ನಿಸ್ಪಕ್ಷಪಾತವಾಗಿ ತನಿಖೆ ನಡೆಸಲು ಸಾಧ್ಯವಿಲ್ಲ.
ಸಿದ್ದರಾಮಯ್ಯನವರು ತಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಖ್ಯಮಂತ್ರಿ ಸ್ಥಾನ ಮತ್ತು ಕಚೇರಿಯ ಘನತೆಯನ್ನು ಎತ್ತಿಹಿಡಿಯಬೇಕೆಂದು ವಿಜಯೇಂದ್ರ ಮನವಿ ಮಾಡಿದ್ದರು.