Monday, February 24, 2025
Homeರಾಜ್ಯವಿಶ್ವ ಗಾಣಿಗ ಸಮುದಾಯ ಟ್ರಸ್ಟ್‌ಗೆ ನಿಗದಿಯಾಗಿರುವ ಅನುದಾನ ಬಿಡುಗಡೆ ಮಾಡುವಂತೆ ವಿಜಯೇಂದ್ರ ಆಗ್ರಹ

ವಿಶ್ವ ಗಾಣಿಗ ಸಮುದಾಯ ಟ್ರಸ್ಟ್‌ಗೆ ನಿಗದಿಯಾಗಿರುವ ಅನುದಾನ ಬಿಡುಗಡೆ ಮಾಡುವಂತೆ ವಿಜಯೇಂದ್ರ ಆಗ್ರಹ

Vijayendra demands release of funds Vishwa Ganiga Community Trust

ಬೆಂಗಳೂರು,ಫೆ.18- ಅತಿ ಹಿಂದುಳಿದ ಗಾಣಿಗ ಸಮುದಾಯದ ವಿಶ್ವ ಗಾಣಿಗ ಸಮುದಾಯ ಟ್ರಸ್ಟ್‌ಗೆ ನಿಗದಿಯಾಗಿರುವ ಅನುದಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಬಿಡುಗಡೆ ಮಾಡಬೇಕೆಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಆಗ್ರಹಿಸಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲ ತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ವಿಜಯೇಂದ್ರ, ವಿಶ್ವ ಗಾಣಿಗ ಸಮುದಾಯ ಟ್ರಸ್ಟ್‌ಗೆ ನಿಗದಿಯಾಗಿರುವ ಅನುದಾನವನ್ನು ತಡೆಹಿಡಿದಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೂಗಿನಡಿಯಲ್ಲಿ ಅತಿ ಹಿಂದುಳಿದ ಸಮುದಾಯಗಳಿಗೆ ಶೋಷಣೆಯಾಗುತ್ತಿರುವ ಪರಿ ಬಿಅಹಿಂದ ಎನ್ನುವುದು ಸ್ವಾರ್ಥ ಸಾಧನೆಗೆ ಬಳಸಿಕೊಳ್ಳುವ ಅಸ್ತ್ರವಾಗಿದೆ ಎಂಬ ವಾಸ್ತವ ಅಸಂಘಟಿತ ಹಿಂದುಳಿದ ವರ್ಗಗಳಿಗೆ ಮನನವಾಗುತ್ತಿದೆ. ಈ ಕೂಡಲೇ ತಡೆ ಹಿಡಿದಿರುವ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.

ಅತಿ ಹಿಂದುಳಿದ ಗಾಣಿಗ ಸಮುದಾಯದ ವಿಶ್ವ ಗಾಣಿಗ ಸಮುದಾಯ ಟ್ರಸ್ಟ್ಗೆ ನಿಗದಿಯಾಗಿರುವ ಅನುದಾನವನ್ನು ತಡೆ ಹಿಡಿಯುವ ಮೂಲಕ ಹಿಂದುಳಿದವರ ಕಲ್ಯಾಣ ಕಾರ್ಯ ಹಾಗಿರಲಿ, ಅವರಿಗೆ ನೀಡುವ ಅನುದಾನಕ್ಕೂ ಕತ್ತರಿ ಪ್ರಯೋಗವಾಗುತ್ತಿರುವುದು ವಿಪರ್ಯಾಸವೇ ಸರಿ.

ಸಮುದಾಯ ಟ್ರಸ್ಟ್ ಅಭಿವೃದ್ಧಿಗಾಗಿ ಬಿಡುಗಡೆಯಾಗಿರುವ ಅನುದಾನವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ ತಡೆ ಹಿಡಿದು ಉಪದ್ರವ ಕೊಡುತ್ತಿರುವುದು ಸಾಮಾಜಿಕ ನ್ಯಾಯ ಪಠಿಸುವ ಕಾಂಗ್ರೆಸ್ ಸರ್ಕಾರದ ಅಸಲಿ ಮುಖವಾಡವನ್ನು ಬಯಲು ಮಾಡಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಪರಮಪೂಜ್ಯ ಪೂರ್ಣಾನಂದಪುರಿ ಸ್ವಾಮೀಜಿಗಳು ಪೂರ್ವಾಶ್ರಮದಲ್ಲಿ ಮಾಜಿ ಸಚಿವರಾಗಿದ್ದವರು, ನಾಲ್ಕು ದಶಕಗಳ ಕಾಲ ರಾಜಕೀಯ ಕ್ಷೇತ್ರದಲ್ಲಿ ಹಿಂದುಳಿದ ಸಮಾಜಗಳಿಗಾಗಿ ಪರಿಶ್ರಮಿಸಿದವರು, ಇದೀಗ ಸರ್ವಸಂಗ ಪರಿತ್ಯಾಗಿಗಳಾಗಿ ಸನ್ಯಾಸತ್ವ ಸ್ವೀಕರಿಸಿ ಗಾಣಿಗ ಸಮುದಾಯದ ಶೈಕ್ಷಣಿಕ ಹಾಗೂ ಔದ್ಯೋಗಿಕ ಪ್ರಗತಿಗಾಗಿ ತಮ್ಮನ್ನು ಸಮರ್ಪಿಸಿಕೊಂಡು ಶ್ರೀಮಠ ಅಭಿವೃದ್ಧಿಪಡಿಸಲು ತಮ್ಮ ಜೀವನವನ್ನು ಮುಡಿಪಾಗಿರಿಸಿದ್ದಾರೆ ಎಂದು ಹೇಳಿದ್ದಾರೆ.

ಇಂತಹ ನೈಜ ಕಾಳಜಿಯುಳ್ಳ ಪೂಜ್ಯ ಶ್ರೀಗಳ ಕೋರಿಕೆಯನ್ನು ಅಲಕ್ಷಿಸುತ್ತಿರುವ ಈ ಸರ್ಕಾರ ಘೋಷಣೆ ಮಾಡಿರುವ ಅನುದಾನವನ್ನೂ ಬಿಡುಗಡೆ ಮಾಡದೆ ಕಿರುಕುಳ ನೀಡುತ್ತಿರುವುದು ನೋಡಿದರೆ ಅತಿ ಹಿಂದುಳಿದ ಕಾಯಕ ಸಮುದಾಯಗಳನ್ನು ಅಪಮಾನಿಸುವ ಉದ್ದೇಶವನ್ನು ಸಚಿವರು ಇಟ್ಟುಕೊಂಡಂತೆ ಕಾಣುತ್ತಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ ವಿರುದ್ಧವೂ ವಿಜಯೇಂದ್ರ ಕಿಡಿಕಾರಿದ್ದಾರೆ.

RELATED ARTICLES

Latest News