ಬೆಂಗಳೂರು,ಫೆ.2- ಭಿನ್ನ ಮತೀಯರ ವಿರೋಧವನ್ನು ಲೆಕ್ಕಿಸದೆ, ಕರ್ನಾಟಕದಲ್ಲಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲು ಒಲವು ತೋರದ ಕೇಂದ್ರ ಬಿಜೆಪಿ ವರಿಷ್ಠರು, ಹಾಲಿ ಅಧ್ಯಕ್ಷರಾಗಿರುವ ಬಿ.ವೈ ವಿಜಯೇಂದ್ರ ಅವರನ್ನೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಸಲು ಮುಂದಾಗಿದ್ದಾರೆ.
ಬಿಜೆಪಿಯ ಇತಿಹಾಸದಲ್ಲೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹಣಾಹಣಿ ನಡೆದ ಉದಾಹರಣೆ ಇಲ್ಲ. ಹೀಗಾಗಿ ಈ ಸಂಪ್ರದಾಯವನ್ನು ಮುರಿಯದೆ ಇರಲು ಬಿಜೆಪಿ ನಿರ್ಧಾರ ಮಾಡಿದೆ.ಬಿಜೆಪಿಯ ಉನ್ನತ ನಾಯಕರು ಮತಪತ್ರದ ಮೂಲಕ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲು ಒತ್ತಾಯಿಸಿದ್ದಾರೆ.
ಬಿ.ವೈ. ವಿಜಯೇಂದ್ರ ವಿರುದ್ಧ ಸಮರ್ಥ ನಾಯಕತ್ವ ಅಭ್ಯರ್ಥಿ ಕಣಕ್ಕಿಳಿಸಲು ಬಿಜೆಪಿಯಲ್ಲಿ ಚರ್ಚಿಸಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಅವರಿರುವ ಬಣದಲ್ಲಿ ಮಹತ್ವದ ಚರ್ಚೆಗಳು ಆಗಿವೆ.
ಹೀಗಾಗಿ ಕರ್ನಾಟಕದಲ್ಲಿ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವ ಸಾಧ್ಯತೆಗಳು ದಿನದಂದ ದಿನಕ್ಕೆ ಕ್ಷೀಣಿಸುತ್ತಿದ್ದು, ಮುಂದಿನ ಮೂರು ವರ್ಷಗಳ ಅವಧಿಗೆ ಹಾಲಿ ಅಧ್ಯಕ್ಷರಾಗಿರುವ ಬಿ.ವೈ ವಿಜಯೇಂದ್ರ ಅವರನ್ನೇ ಮುಂದುವರೆಸಲು ಕೇಂದ್ರ ವರಿಷ್ಟರು ಸಮತಿಸಿದ್ದಾರೆ. ಬಿಜೆಪಿ ಅಧ್ಯಕ್ಷರ ಬದಲಾವಣೆ ಕೂಗಿಗೆ ವರಿಷ್ಠರು ತಡೆ ಹಾಕಿದ್ದಾರೆ ಎಂದೇ ಹೇಳಲಾಗುತ್ತಿದೆ.
ಸರ್ವಸಮತಿಯೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಗೆ ಒಲವು ತೋರಿರುವ ಬಿಜೆಪಿ ವರಿಷ್ಠರು, ಹಾಲಿ ರಾಜ್ಯಾ ಧ್ಯಕ್ಷ ವಿಜಯೇಂದ್ರ- ತಟಸ್ಥ ಬಣದ ನಡು ವಣ ವಿವಾದಕ್ಕೆ ತೆರೆ ಎಳೆಯಲು ರಾಜ್ಯ ಸಂಘಟನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಉತ್ತರ ಪ್ರಾಂತ್ಯದ ವ್ಯಕ್ತಿಯನ್ನು ನೇಮಕ ಮಾಡಲು ಒಲವು ತೋರಿದ್ದಾರೆ.
ಚುನಾವಣೆ ಇಲ್ಲದೆ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ನಡೆಯುವುದು ಬಹುತೇಕ ಖಾತ್ರಿಯಾಗಿದೆ.
ಅಲ್ಲ ದೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅವರನ್ನೇ ಮುಂದುವರಿಸುವ ಸಾಧ್ಯತೆ ಬಲವಾಗಿದೆ. ಈಗ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ವರಿಷ್ಠರು ಒಲವು ತೋರದೇ ಇರುವುದರಿಂದ ಯಾರು ರಾಜ್ಯಾಧ್ಯಕ್ಷ ಎಂಬ ಪ್ರಶ್ನೆ ಉದ್ಭವವಾಗಿತ್ತು. ಬಿಜೆಪಿಯ ಆಂತರಿಕ ಮೂಲಗಳ ಪ್ರಕಾರ ವಿಜಯೇಂದ್ರ ಅವರೇ ಈ ಸ್ಥಾನದಲ್ಲಿ ಮುಂದುವರಿಯುವ ಸಾಧ್ಯತೆ ಅಧಿಕವಾಗಿದೆ.
ಇದೇ ತಿಂಗಳ ಅಂತ್ಯಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ ನಡೆಯಲಿದೆ. ಇದರ ಭಾಗವಾಗಿ ಶೇ. 50ರಷ್ಟು ರಾಜ್ಯಗಳಲ್ಲಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪೂರ್ಣವಾಗಬೇಕು. ಹಲವು ರಾಜ್ಯಗಳಲ್ಲಿ ಜಿಲ್ಲಾ ಹಾಗೂ ರಾಜ್ಯಾಧ್ಯಕ್ಷರ ಪಟ್ಟಿ ಪ್ರಕಟವಾಗಲಿದೆ.
ಫೆಬ್ರವರಿ ತಿಂಗಳ ಕೊನೆಯ ವಾರದಲ್ಲಿ ಇದು ಅಧಿಕೃತವಾಗಿ ಪ್ರಕಟವಾಗಲಿದ್ದು, ವಿಜಯೇಂದ್ರ ಅವರನ್ನು ಬದಲಾವಣೆಗೆ ಪಟ್ಡು ಹಿಡಿದಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಅವರ ತಂಡಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ. ನಳೀನ್ ಕುಮಾರ್ ಕಟಿಲ್ ಅವರ ಬಳಿಕ ಮಾಜಿ ಸಿಎಂ ಯಡಿಯೂರಪ್ಪ ಅವರು ಪುತ್ರ ಬಿವೈ. ವಿಜಯೇಂದ್ರ ಅವರನ್ನು 2023 ರ ನವೆಂಬರ್ನಲ್ಲಿ ಬಿಜೆಪಿ ರಾಜ್ಯಾಕ್ಷರನ್ನಾಗಿ ನೇಮಿಸಲಾಯಿತು. ಈ ಹುದ್ದೆಗೆ ಇರುವುದೇ ಮೂರು ವರ್ಷ ಅವಧಿ.
ವಿಜಯೇಂದ್ರ ಅವರಿಗೆ ಈ ಸ್ಥಾನ ನೀಡಿದ್ದೇ ಬಿಜೆಪಿ ಬಣ ರಾಜಕೀಯ, ಆರೋಪ, ಪ್ರತ್ಯಾರೋಪಗಳಿಗೆ ಕಾರಣವಾಯಿತು. ಪಕ್ಷಕ್ಕೆ ಮುಜುಗರ ಉಂಟಾಗುವ ಬೆಳವಣಿಗೆಗಳು ನಡೆದವು. ಶಿಕಾರಿಪುರದಲ್ಲಿ ಗೆದ್ದು ಬೀಗಿದ್ದ ಶಾಸಕ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಜವಾಬ್ದಾರಿ ಕಬ್ಬಿಣದ ಕಡಲೆಯಂತಾಯಿತು.
ಸವಾಲು ಮೀರಿ ನಾನು ಹೊಣೆ ನಿರ್ವಹಿಸುತ್ತೇನೆ ಎಂದುಕೊಂಡಿದ್ದರೂ ಸಹಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಹಿರಂಗವಾಗಿಯೇ ವಿಜಯೇಂದ್ರ ಪದೋನ್ನತಿ ವಿರೋಧಿಸಿದ್ದು, ವಿಜಯೇಂದ್ರ ಅವರನ್ನು ತಾತ್ಕಾಲಿಕ ಅಧ್ಯಕ್ಷ ಎಂದು ಕರೆದಿದ್ದರು.
ಸದ್ಯ ಬಿಜೆಪಿಯ ಸಾಂಸ್ಥಿಕ ಚುನಾವಣೆಗಳು ಈ ತಿಂಗಳ ಅಂತ್ಯಕ್ಕೆ ಕೊನೆಗೊಳ್ಳಲಿವೆ. ಈಗಾಗಲೇ ಹಲವು ಜಿಲ್ಲೆಗಳ ಅಧ್ಯಕ್ಷರ ಆಯ್ಕೆ ಮಾಡಲಾಗಿದೆ.
ಉಳಿದಿರುವ ಕೆಲವು ಜಿಲ್ಲೆಗಳಿಗೆ ಶೀಘ್ರದಲ್ಲೇ ಘೋಷಣೆ ಮಾಡುವ ಸಂಭವವಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಿರ್ಣಾಯಕ ಜನಾದೇಶದೊಂದಿಗೆ ಪಕ್ಷ ಮತ್ತೆ ಅಧಿಕಾರ ಹಿಡಿಯಬೇಕು. ಪಕ್ಷವನ್ನು ಗೆಲ್ಲಿಸಲು ಎಲ್ಲರೂ ಜೊತೆಯಾಗಿ ಗೆಲಸ ಮಾಡುವ ಗುರಿ ಹಾಕಿಕೊಳ್ಳಬೇಕು ಎಂಬುದು ಬಹುತೇಕರ ಒತ್ತಾಸೆಯಾಗಿದೆ.
ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಕರ್ನಾಟಕದಲ್ಲಿ ಬಿಜೆಪಿಯ ಸಾಂಸ್ಥಿಕ ಚುನಾವಣೆಗಳ ಉಸ್ತುವಾರಿಯಾಗಿ ಕೇಂದ್ರ ವರಿಷ್ಠರು ನಿಯೋಜಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ವಿಜಯೇಂದ್ರ ತಾವೇ ಮುಂದುವರೆಯುವ, ಅಧಿಕಾರದಲ್ಲಿ ಉಳಿಯುವ ವಿಶ್ವಾಸ ವ್ಯಕ್ತಪಡಿಸಿದ ಬೆನ್ನಲ್ಲೇ ಚುನಾವಣೆಗೆ ಬ್ರೇಕ್ ಹಾಕಲು ವರಿಷ್ಠರು ಮುಂದಾಗಿದ್ದಾರೆ.
ಬಣ ಬಡಿದಾಟದಿಂದ ಒಡೆದ ಮನೆಯಾಗಿರುವ ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಬಿಜೆಪಿ ರಾಜ್ಯಾಧ್ಯಕ್ಷರ ಚುನಾವಣೆಯ ಹಿನ್ನೆಲೆ ಬಿ.ವೈ.ವಿಜಯೇಂದ್ರ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಬಣಗಳ ನಡುವೆ ಜಿದ್ದಾಜಿದ್ದಿ ಜೋರಾಗಿದೆ. ರಾಜ್ಯಾಧ್ಯಕ್ಷರ ಚುನಾವಣೆಗೆ ಯತ್ನಾಳ್ ಬಣದಿಂದ ಪ್ರಬಲ ಕಣಕ್ಕಿಳಿಸಲು ಭರ್ಜರಿ ತಯಾರಿ ನಡೆದಿತ್ತು.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಬದಲಾವಣೆಗೆ ಪಟ್ಟು ಹಿಡಿದಿರುವ ಯತ್ನಾಳ್ ಬಣ ಚುನಾವಣೆಗೆ ಆಗ್ರಹಿಸಿದೆ. ಅಲ್ಲದೆ, ತಮ ಬಣದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಘೋಷಣೆಯನ್ನು ಮಾಡಿತ್ತು.
ರಾಜ್ಯಾದ್ಯಕ್ಷ ವಿಜಯೇಂದ್ರ ವಿರುದ್ಧ ಸಮರ ಸಾರಿರುವ ಯತ್ನಾಳ್ ಬಣ ತಮ ಅಭ್ಯರ್ಥಿಯ ಹೆಸರನ್ನು ಇನ್ನೂ ಘೋಷಣೆ ಮಾಡಿಲ್ಲ. ರೆಬೆಲ್ ತಂಡ ಮತ್ತೋರ್ವ ನಾಯಕ ರಮೇಶ್ ಜಾರಕಿಹೊಳಿ ಜೊತೆಗೆ ಚರ್ಚೆ ನಡೆಸಿ ಅಭ್ಯರ್ಥಿ ಘೋಷಣೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಆದರೆ ಅವರ ಹೆಸರಿನ ಸುಳಿವನ್ನು ಇನ್ನೂ ನೀಡಿಲ್ಲ.
ಯತ್ನಾಳ್ ಬಣದಲ್ಲಿ ಶಾಸಕ ರಮೇಶ್ ಜಾರಕಿಹೊಳಿ, ಮಾಜಿ ಶಾಸಕ ಅರವಿಂದ ಲಿಂಬಾವಳಿ, ಮಾಜಿ ಶಾಸಕ, ಕುಮಾರ ಬಂಗಾರಪ್ಪ, ಮಾಜಿ ಸಂಸದ ಪ್ರತಾಪ ಸಿಂಹ, ಮಾಜಿ ಕೇಂದ್ರ ಸಚಿವ ಜಿ ಎಂ ಸಿದ್ದೇಶ್ವರ್, ಮಾಜಿ ಸಂಸದ ಅಣ್ಣಾ ಸಾಹೇಬ ಜೊಲ್ಲೆ, ಮಾಜಿ ಸಚಿವ ಕುಮಾರ್ ಬಂಗಾರಪ್ಪ, ಶಾಸಕ ಆರ್ ಚಂದ್ರಪ್ಪ, ಬಿಪಿ ಹರೀಶ್, ಮಾಜಿ ಶಾಸಕ ಚಂದ್ರ ನಾಯ್‌್ಕ, ಮಾಜಿ ಸಂಸದ ಬಿವಿ ನಾಯ್‌್ಕ ಬಹಿರಂಗವಾಗಿ ಗುರುತಿಸಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ, ಬಿಜೆಪಿಯ ಕೆಲವು ಶಾಸಕರು, ಮಾಜಿ ಶಾಸಕರ ಪರೋಕ್ಷ ಬೆಂಬಲವೂ ಯತ್ನಾಳ್ ತಂಡಕ್ಕೆ ಇದೆ. ಹೀಗಿರುವಾಗ ಯತ್ನಾಳ್ ಟೀಂ ಯಾರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಿದೆ ಎಂಬುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು.ರಾಜ್ಯ ಬಿಜೆಪಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ 3 ವರ್ಷಕ್ಕೊಮೆ ಚುನಾವಣೆ ನಡೆಯುತ್ತದೆ. ಆದರೆ ಅಂತಿಮವಾಗಿ ಹೈಕಮಾಂಡ್ ರಾಜ್ಯಾಧ್ಯಕ್ಷ ಸ್ಥಾನವನ್ನು ಅವಿರೋಧವಾಗಿ ಆಯ್ಕೆ ಮಾಡುತ್ತದೆ.
ಇಲ್ಲಿ ಯಾವುದೇ ಗೊಂದಲಕ್ಕೆ ಅವಕಾಶವನ್ನು ನೀಡುವುದಿಲ್ಲ. ಆದರೆ ಈ ಬಾರಿ ಕಮಲದ ಎರಡು ಬಣಗಳ ನಡುವಿನ ಗುದ್ದಾಟ ಯಾವ ಸನ್ನಿವೇಶವನ್ನು ಸೃಷ್ಟಿಸಲಿದೆ ಎಂಬ ಕುತೂಹಲಕ್ಕೆ ಕಾರಣವಾಗಿದೆ.ಇನ್ನು ಯತ್ನಾಳ್ ಅವರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ, ಚುನಾವಣೆಯನ್ನು ಎದುರಿಸಲು ನಾವೂ ಸಿದ್ಧ ಎಂದು ವಿಜಯೇಂದ್ರ ಬಣ ಸವಾಲು ಹಾಕಿದೆ. ತಾಕತ್ತಿದ್ದರೆ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಸ್ಪರ್ಧೆ ಮಾಡಲಿ ಎಂದು ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಸವಾಲು ಹಾಕಿದ್ದರು.