ಬೆಂಗಳೂರು, ಆ.5- ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾರಿಗೆ ನೌಕರರು ಕರ್ತವ್ಯಕ್ಕೆ ಗೈರುಹಾಜರಾಗಿ ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ತಕ್ಷಣವೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಭೆ ಕರೆದು ಸಮಸ್ಯೆಯನ್ನು ಇತ್ಯರ್ಥಪಡಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಡ್ಡಕ್ಕೆ ಬೆಂಕಿ ಹತ್ತಿದಾಗ ಪರಿಹಾರ ಹುಡುಕಲು ಹೊರಟಿರುವುದು ನಿಮ್ಮ ದುರಾಡಳಿತ ವೈಖರಿಗೆ ಹಿಡಿದ ಕೈಗನ್ನಡಿ. ಈಗಲೂ ಕಾಲ ಮಿಂಚಿಲ್ಲ.ಸಾರಿಗೆ ನೌಕರರ ಪದಾಧಿಕಾರಿಗಳು ಮತ್ತು ಸಂಘಟನೆಗಳ ಮುಖಂಡರ ಜೊತೆ ಸಭೆ ನಡೆಸಿ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಮನವಿ ಮಾಡಿದರು.
ಮುಷ್ಕರ ನಡೆಸುವುದಾಗಿ ನೌಕರರು ಹಿಂದೆಯೇ ಹೇಳಿಕೊಂಡಿದ್ದರು. ಸರ್ಕಾರ ಈ ಬಗ್ಗೆ ಎಚ್ಚೆತ್ತುಕೊಳ್ಳಲಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳ ಬಸ್ ಬೇಕು ಎಂದು ಪತ್ರ ಬರೆದಿದ್ದಾರೆ. ನಿಮ್ಮ ಸರ್ಕಾರ ಏನು ಮಾಡಲು ಹೊರಟಿದೆ ಎಂದು ಪ್ರಶ್ನೆ ಮಾಡಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಪರೀಕ್ಷೆಗಳು ಮುಂದೂಡಲಾಗಿದೆ. ಅನೇಕ ಕಡೆ ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ತೆರಳದೆ ಮನೆಗೆ ವಾಪಸ್ಸಾಗಿದ್ದಾರೆ. ಇದಕ್ಕೆ ಸರ್ಕಾರದ ಹೊಣೆಗೇಡಿತನವೇ ಕಾರಣ ಎಂದು ವಾಗ್ದಾಳಿ ನಡೆಸಿದರು. ನೌಕರರಿಗೆ ಸಂಬಳ ಕೊಡಲು ಆಗುತ್ತಿಲ್ಲ. ಸರ್ಕಾರ ಸಂಪೂರ್ಣವಾಗಿ ದಿವಾಳಿಯಾಗಿದೆ. ನೌಕರರ ಬೇಡಿಕೆ ಈಡೇರಿಕೆ ಮಾಡಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ.
ಸಮಸ್ಯೆ ಬಗೆಹರಿಸಬೇಕಾದವರು ಅವರ ವಿರುದ್ಧ ಶಿಸ್ತು ಕ್ರಮದ ಮಾತನಾಡುತ್ತಿದ್ದಾರೆ. ಮೊದಲು ಸಮಸ್ಯೆಯನ್ನು ಪರಿಹರಿಸಬೇಕೇ ಹೊರತು ಬೆದರಿಕೆ ಹಾಕುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಸಾರಿಗೆ ನೌಕರರು ಮುಷ್ಕರ ನಡೆಸಲಿದ್ದಾರೆ ಎಂಬುದು ಸರ್ಕಾರಕ್ಕೆ ಮೊದಲೇ ಗೊತ್ತಿತ್ತು. ಅದನ್ನು ಪರಿಹರಿಸುವ ಬದಲು ರಾಹುಲ್ ಗಾಂಧಿಯವರ ಸಭೆ ಕುರಿತು ಚರ್ಚೆ ಮಾಡಿದ್ದಾರೆ. 2 ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗದಿದ್ದರೆ ಇದನ್ನು ಸರ್ಕಾರ ಎನ್ನಬೇಕೇ? ಎಂದು ಪ್ರಶ್ನೆ ಮಾಡಿದರು.