Friday, November 22, 2024
Homeರಾಜ್ಯರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಯಶಸ್ವಿ

ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಯಶಸ್ವಿ

ಬೆಂಗಳೂರು,ಜೂ.4- ಕಾಂಗ್ರೆಸ್‌‍ನ ಗ್ಯಾರಂಟಿಗಳ ನಡುವೆಯೂ ರಾಜ್ಯದಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನ ಗೆಲ್ಲಿಸಿಕೊಡುವಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಯಶಸ್ವಿಯಾಗಿದ್ದು, ಕುರ್ಚಿಯನ್ನು ಗಟ್ಟಿಗೊಳಿಸಿದೆ. ವಿಧಾನಸಭೆ ಚುನಾವಣೆಯಲ್ಲಿ ಭಾರೀ ಮುಖಭಂಗ ಅನುಭವಿಸಿದ್ದ ಬಿಜೆಪಿ ಆರು ತಿಂಗಳ ನಂತರ ರಾಜ್ಯಾಧ್ಯಕ್ಷರ ಸ್ಥಾನವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್‌‍.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರಗೆ ನೀಡಿದ್ದರು.

ಸೋತು ಸುಣ್ಣವಾಗಿದ್ದ ಪಕ್ಷವನ್ನು ಮುನ್ನಡೆಸುವ ಸವಾಲಿದ್ದ ವಿಜಯೇಂದ್ರ ಪ್ರಾರಂಭದಲ್ಲಿ ಎಲ್ಲಾ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಲೋಕಸಭಾ ಚುನಾವಣೆಗೆ ಮುನ್ನಡೆಸುವ ಜವಾಬ್ದಾರಿಯನ್ನು ತೆಗೆದುಕೊಂಡರು. ಒಂದು ಕಡೆ ಕಾಂಗ್ರೆಸ್‌‍ ಪಂಚ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ಜನರ ಒಲವು ಗಳಿಸುವತ್ತ ಮುನ್ನಡೆಯುತ್ತಿರುವಾಗ ವಿಜಯೇಂದ್ರಗೆ ಪಕ್ಷದೊಳಗೆ ಸಾಕಷ್ಟು ಸವಾಲುಗಳು ಎದುರಾಗಿದ್ದವು.

ಇಂಥ ಸಂದರ್ಭದಲ್ಲೇ ಬೆಟ್ಟದಷ್ಟು ಸವಾಲಿನಂತಿದ್ದ ಲೋಕಸಭೆ ಚುನಾವಣೆಯಲ್ಲಿ 16 ಸ್ಥಾನಗಳನ್ನು ಗೆದ್ದಿರುವುದು ಸುಲಭದ ಮಾತಲ್ಲ. ಕಳೆದ ಬಾರಿ ಪ್ರಧಾನಿ ನರೇಂದ್ರಮೋದಿ ಅಲೆಯಲ್ಲಿ 25 ಸ್ಥಾನಗಳನ್ನು ಗೆದ್ದಿತ್ತಾದರೂ ಈ ಬಾರಿ ಕನಿಷ್ಟಪಕ್ಷ 18 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಕೇಂದ್ರ ವರಿಷ್ಠರು ನೀಡಿದ್ದರು.

ಬಿಜೆಪಿಗೆ ಬೆನ್ನೆಲುಬಾಗಿ ನಿಂತಿದ್ದ ವೀರಶೈವ ಲಿಂಗಾಯಿತ ಸಮುದಾಯವನ್ನು ತನ್ನತ್ತ ಸೆಳೆಯುವಲ್ಲಿ ಅವರ ತಂದೆ ಯಡಿಯೂರಪ್ಪನವರ ಮಾರ್ಗದರ್ಶನದಂತೆ ಪಕ್ಷವನ್ನು ಮುನ್ನಡೆಸಿಕೊಂಡರು.

ಪಕ್ಷದಿಂದ ದೂರವಾಗಿದ್ದ ಜಗದೀಶ್‌ ಶೆಟ್ಟರ್‌ ಹಾಗೂ ಕೆಳಹಂತದ ನಾಯಕನನ್ನು ಪಕ್ಷಕ್ಕೆ ಕರೆತರುವಲ್ಲಿ ಯಶಸ್ವಿಯಾದರು. ವೀರಶೈವ ಲಿಂಗಾಯಿತ ಸಮುದಾಯಕ್ಕೆ ಒಬ್ಬ ಪ್ರಬಲ ನಾಯಕನ ಅಗತ್ಯ ಇರುವಾಗಲೇ ವಿಜಯೇಂದ್ರ ಅವರಲ್ಲಿ ಅದನ್ನು ಸಮುದಾಯ ಕಂಡುಕೊಂಡಿರುವುದು ಫಲಿತಾಂಶದಿಂದಲೇ ಸ್ಪಷ್ಟವಾಗಿದೆ.

ಕಾಂಗ್ರೆಸ್‌‍ನ ಪ್ರಬಲ ನಾಯಕತ್ವದ ನಡುವೆಯೂ ಬಿಜೆಪಿಗೆ 16 ಸ್ಥಾನ ಬಂದಿದೆ ಎಂದರೆ ಸಾಮಾನ್ಯ ಮಾತಲ್ಲ. ಒಂದು ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮತ್ತೊಂದು ಕಡೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಂತಹ ಪ್ರಬಲ ನಾಯಕತ್ವದ ನಡುವೆಯೂ ಬಿಜೆಪಿ ಜಯಗಳಿಸಿರುವುದು ವಿಜಯೇಂದ್ರ ಅವರ ನಾಯಕತ್ವಕ್ಕೆ ಸಿಕ್ಕ ಮನ್ನಣೆ ಎಂದು ಹೇಳಲಾಗುತ್ತಿದೆ.

20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿ ಇಟ್ಟುಕೊಳ್ಳಲಾಗಿತ್ತಾದರೂ ಸದ್ಯ ಬಿಜೆಪಿ ಇಷ್ಟು ಸ್ಥಾನವನ್ನು ಗೆದ್ದಿರುವುದರ ಹಿಂದೆ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ಪರಿಶ್ರಮ ಇದೆ ಎಂಬುದನ್ನು ಪಕ್ಷದವರು ಒಪ್ಪಿಕೊಳ್ಳುತ್ತಾರೆ.

RELATED ARTICLES

Latest News