Friday, March 21, 2025
Homeಜಿಲ್ಲಾ ಸುದ್ದಿಗಳು | District Newsಹಾಸನ / Hassanಅರಣ್ಯ ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸುತ್ತಿರುವ ವಿಕ್ರಾಂತ್ ಆನೆ

ಅರಣ್ಯ ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸುತ್ತಿರುವ ವಿಕ್ರಾಂತ್ ಆನೆ

Vikrant elephant catch operation

ಬೇಲೂರು, ಮಾ.20- ಕಾಡಾನೆ ವಿಕ್ರಾಂತ್‌ನನ್ನು ಹಿಡಿಯಲು ಪ್ರಥಮ ಬಾರಿಗೆ ಎರಡು ಥರ್ಮಲ್ ಡೋನ್‌ನ ಸುಳಿವು ಆಧರಿಸಿ ಸೆರೆಗೆ ಯತ್ನಿಸಿದ ಸಂದರ್ಭಸ್ಥಳಕ್ಕೆ ಭೀಮಾ ಆನೆ ಆಗಮಿಸಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಅಕಾರಿಗಳು ಕಾರ್ಯಾಚರಣೆ ಸ್ಥಗಿತಗೊಳಿಸಿ ಕ್ಯಾಂಪ್‌ಗೆ ವಾಪಸ್ ಬಂದಿದ್ದಾರೆ.

ಸತತ ಆರು ಗಂಟೆಗಳ ಕಾಲ ಸಾಕಾನೆಗಳೊಂದಿಗೆ ಕಾಡಾನೆ ಸೆರೆ ಕಾರ್ಯಾಚರಣೆ ಸಂದರ್ಭ ಪದೇ ಪದೇ ತಪ್ಪಿಸಿಕೊಂಡು ಹೋಗುತ್ತಿದ್ದರಿಂದ ನಿನ್ನೆ ಬೆಳಗ್ಗೆ 8.30ರಿಂದಲೇ ಏಳು ಸಾಕಾನೆಗಳೊಂದಿಗೆ ಸಿಬ್ಬಂದಿ ಹೊಸ ತಂತ್ರಗಾರಿಕೆಯೊಂದಿಗೆ ಥರ್ಮಲ್ ಡೋನ್‌ನ ಸುಳಿವು ಆಧರಿಸಿ ಅಪರೇಷನ್ ವಿಕ್ರಾಂತ್ ಹೆಸರಿನಲ್ಲಿ ಕಾರ್ಯಚರಣೆ ಪ್ರಾರಂಭಿಸಿದ್ದರು.

ಆದರೆ, ಸತತವಾಗಿ ಆರು ಗಂಟೆಗಳ ಕಾಲ ಕಾಡಿನಲ್ಲಿ ಅತ್ತಿಂದಿತ್ತ ಓಡಾಡಿ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಕಾಡಿದ ಪುಂಡಾನೆಯನ್ನು ಹುಡುಕುವುದಕ್ಕೆ ಥರ್ಮಲ್‌ಡೋನ್ ಬಳಸಿದಾಗ ಮೂರು ಆನೆಗಳಿರುವುದನ್ನು ಪತ್ತೆಹಚ್ಚಿವಿಕ್ರಾಂತ್ ಪುಂಡಾನೆಯನ್ನು ಪ್ರತ್ಯೇಕಿಸುವಲ್ಲಿ ಸಿಬ್ಬಂದಿ ಯಶಸ್ವಿಯಾದರು.

ಜತೆಗೆ ಪುಂಡಾನೆಗೆ ಇನ್ನೇನು ಅರಿವಳಿಕೆ ಚುಚ್ಚುಮದ್ದು ನೀಡಬೇಕೆನ್ನುವಷ್ಟರಲ್ಲಿ ತಾಲೂಕಿನ ಬಕ್ರವಳ್ಳಿಯಲ್ಲಿ ಕೂಲಿ ಕಾರ್ಮಿಕರನ್ನು ಅಟ್ಟಾಡಿಸಿದ್ದ ಭೀಮಾ ಆನೆಯೂ, ಕುಮ್ಮಿ ಆನೆಗಳು ಬಂದಿರುವ ವಾಸನೆಯ ಜಾಡು ಹಿಡಿದು ನೇರವಾಗಿ ಕಾನನಹಳ್ಳಿ ಅರಣ್ಯದಲ್ಲಿ ವಿಕ್ರಾಂತ್ ಆನೆ ಸೆರೆ ಕಾರ್ಯಚರಣೆ ಸ್ಥಳಕ್ಕೆ ದಿಡೀರೆಂದು ಬಂದಿದೆ.

ಸಾಕಾನೆಗಳನ್ನು ಕಂಡರೆ ಕಾಳಗಕ್ಕೆ ಇಳಿಯುವ ಭೀಮಾನಿಂದ ತಪ್ಪಿಸಿಕೊಳ್ಳಲು ಸಾಕಾನೆಗಳು ಹೆದರಿ ಓಡುತ್ತವೆ. ಆದ್ದರಿಂದ ಅರಣ್ಯ ಇಲಾಖೆಯ ಇಟಿಎಫ್ ಸಿಬ್ಬಂದಿ ಭೀಮಾನನ್ನು ಅಲ್ಲಿಂದ ಓಡಿಸಲು ಇನ್ನಿಲ್ಲದಂತೆ ಕಸರತ್ತು ನಡೆಸಿದರೂ ಪ್ರಯೋಜನವಾಗಲಿಲ್ಲ.

ಅಷ್ಟರಲ್ಲಿ ವಿಕ್ರಾಂತ್ ಆನೆ ತಪ್ಪಿಸಿಕೊಂಡು ಕಾಡಿನೊಳಕ್ಕೆ ನುಸುಳಿದ್ದರಿಂದ ಏಳು ಸಾಕಾನೆಗಳೊಂದಿಗೆ ಸತತವಾಗಿ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ನಡೆಸಿದ ಕಾರ್ಯಚರಣೆ ವಿಫಲವಾದಂತಾಗಿದೆ. ಇದರಿಂದಾಗಿ ಬೆಳಗ್ಗೆಯಿಂದಲೇ ಪುಂಡಾನೆ ಸೆರೆಕಾರ್ಯಚರಣೆಯಲ್ಲಿ ತೊಡಗಿದ್ದ ಅಕಾರಿಗಳು ಮತ್ತು ಸಿಬ್ಬಂದಿ ತಂಡ ಕಾಡಾನೆ ಸೆರೆ ಕಾರ್ಯಚರಣೆ ಸ್ಥಗಿತಗೊಳಿಸಿ, ಸಿಬ್ಬಂದಿಯೊಂದಿಗೆ ಎಲ್ಲ ಸಾಕಾನೆಗಳನ್ನು ವಾಪಸ್ ಆನೆ ಕ್ಯಾಂಪಿಗೆ ಕರೆತರಲಾಗಿದೆ.

ಕಾರ್ಯಚರಣೆಯಲ್ಲಿ ಡಿಎಫ್‌ಒ ಸೌರಭ್ ಕುಮಾರ್.ಎಸಿಎಫ್ ಮೋಹನ್‌ಕುಮಾರ್, ಖಲಂದರ್. ಮಧುಸೂದನ್, ವಲಯ ಅರಣ್ಯಾಧಿಕಾರಿಗಳಾದ ಯತೀಶ್, ಹೇಮಂತ್, ಇಟಿಎಫ್ ಆರ್‌ಎಫ್‌ಒ ಸುನೀಲ್ ಸೇರಿದಂತೆ ಪಶು ಇಲಾಖೆ ಅಧಿಕಾರಿಗಳು, ಮಾವುತರು, ಪೊಲೀಸರು ಸೇರಿದಂತೆ ಸಿಬ್ಬಂದಿ ಇದ್ದರು.

ಹೊಸ ತಂತ್ರಜ್ಞಾನ ಥರ್ಮಲ್ ಡೋನ್ನ ಸುಳಿವು ಆಧರಿಸಿ ಕಾಡಾನೆ ಪ್ರತ್ಯೇಕಿಸಿ ಸೆರೆ ಕಾರ್ಯಚರಣೆ ನಡೆಯುತಿತ್ತು. ಆದರೆ, ಸ್ಥಳಕ್ಕೆ ಭೀಮಾ ಆನೆ ಬಂದಿದ್ದರಿಂದ ಕಾರ್ಯಚರಣೆ ಸ್ಥಗಿತಗೊಳಿಸಿ ಸಾಕಾನೆಗಳನ್ನು ವಾಪಸ್‌ ಕ್ಯಾಂಪಿಗೆ ಕರೆತರಲಾಗಿದ್ದು, ಹೆಚ್ಚಿನ ಸಿದ್ಧತೆಯೊಂದಿಗೆ ಕಾರ್ಯಾಚರಣೆ ಮುಂದುವರಿಸಿ ವಿಕ್ರಾಂತ್ ಆನೆಯನ್ನು ಹಿಡಿದೇ ಹಿಡಿಯುತ್ತೇವೆ ಎಂದು ಸಿಸಿಎ ಏಡುಕೊಂಡಲ ಅವರು ಪ್ರತಿಕ್ರಿಯಿಸಿದ್ದಾರೆ.

RELATED ARTICLES

Latest News