Friday, January 10, 2025
Homeರಾಜ್ಯಸಿ.ಟಿ.ರವಿ ಬಂಧನ ಪ್ರಕರಣದಲ್ಲಿ ಹಕ್ಕುಚ್ಯುತಿ ಉಲ್ಲಂಘನೆ : ಸಿಎಂಗೆ ಗೌರ್ನರ್ ಪತ್ರ

ಸಿ.ಟಿ.ರವಿ ಬಂಧನ ಪ್ರಕರಣದಲ್ಲಿ ಹಕ್ಕುಚ್ಯುತಿ ಉಲ್ಲಂಘನೆ : ಸಿಎಂಗೆ ಗೌರ್ನರ್ ಪತ್ರ

Violation of privilege in C.T. Ravi arrest case: Governor's letter to CM

ಬೆಂಗಳೂರು,ಜ.8- ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಬಂಧನ ಪ್ರಕರಣದಲ್ಲಿ ಹಕ್ಕುಚ್ಯುತಿ ಉಲ್ಲಂಘನೆ ಮಾಡಿರುವ ಪೊಲೀಸರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂದು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಮುಖ್ಯ ಮಂತ್ರಿಗೆ ಪತ್ರ ಬರೆದಿದ್ದಾರೆ.

ಈ ಪ್ರಕರಣವು ಒಬ್ಬ ಜನಪ್ರತಿನಿಧಿಗೆ ಸಂಬಂಧಿಸಿದ ವಿಷಯವಾಗಿದೆ. ಮುಖ್ಯಮಂತ್ರಿಗಳ ಮಧ್ಯಪ್ರವೇಶ ಅಗತ್ಯವಾಗಿದ್ದು, ಹಕ್ಕುಚ್ಯುತಿ ಉಲ್ಲಂಘನೆ ಮಾಡಿರುವ ಪೊಲೀಸರ ವಿರುದ್ಧ ಕಾನೂನು ಕ್ರಮದ ಜೊತೆಗೆ ಶಿಸ್ತುಕ್ರಮದ ಅಗತ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಳೆದ ಡಿಸೆಂಬರ್ 31ರಂದು ರಾಜ್ಯಪಾಲರು ಬರೆದ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

ರಾಜಭವನಕ್ಕೆ ಬಂದಿದ್ದ ಸಿ.ಟಿ.ರವಿ ನೇತೃತ್ವದ ನಿಯೋಗವು ನನಗೆ ಲಿಖಿತ ದೂರು ಸಲ್ಲಿಸಿದ್ದು ಜನಪ್ರತಿನಿಧಿಯಾಗಿರುವ ನನ್ನನ್ನು ಅತ್ಯಂತ ಅಗೌರವ ಮತ್ತು ಅಮಾನವೀಯವಾಗಿ ಪೊಲೀಸರು ನಡೆಸಿಕೊಂಡಿದ್ದಾರೆ. ಅವರನ್ನು ರಾಜ್ಯ ಸರ್ಕಾರ ರಕ್ಷಣೆ ಮಾಡುವ ಕೆಲಸ ಮಾಡುತ್ತಿದೆ ಎಂದು ದೂರು ನೀಡಿದ್ದಾರೆ. ನಾನು ದೂರಿನ ಪ್ರತಿಯನ್ನು ತಮಗೆ ಕಳುಹಿಸಿಕೊಡುತ್ತೇನೆ ಎಂದು ರಾಜ್ಯಪಾಲರು ಹೇಳಿದ್ದಾರೆ.

ನನ್ನನ್ನು ಬಂಧಿಸಿದ ನಂತರ ಪೊಲೀಸರು ಒಂದು ರಾತ್ರಿ ಅಪಾಯಕಾರಿ ಪ್ರದೇಶದಲ್ಲಿ ತಿರುಗಾಡಿಸಿದರು. ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೇವೆ ಎಂಬ ಸಣ್ಣ ಸುಳಿವನ್ನೂ ಸಹ ನನಗೆ ನೀಡಲಿಲ್ಲ. ಪ್ರಭಾವಿ ಸಚಿವರ ನಿರ್ದೇಶನದ ಮೇರೆಗೆ ಪೊಲೀಸರು ಕಾರ್ಯ ನಿರ್ವಹಿಸಿದ್ದಾರೆ. ನನ್ನನ್ನು ದೈಹಿಕ ಹಾಗೂ ಮಾನಸಿಕವಾಗಿಯೂ ಹಿಂಸೆ ನೀಡಿ ಹಲ್ಲೆ ಮಾಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಹೀಗಾಗಿ ಪ್ರಕರಣವು ಗಂಭೀರ ಸ್ವರೂಪವಾಗಿರುವುದರಿಂದ ಕ್ರಮ ಜರುಗಿಸಬೇಕೆಂದು ಸೂಚಿಸಿದ್ದಾರೆ. ಉತ್ತರ ವಲಯ ಐಜಿಪಿ ಹಾಗೂ ಪ್ರಸ್ತುತ ಬೆಂಗಳೂರು ಪಶ್ಚಿಮ ವಲಯದ ಪೊಲೀಸ್ ಆಯುಕ್ತ ವಿಕಾಸ್ಕುಮಾರ್, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಹಿತೇಂದ್ರ, ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾಮಾರ್ಟಿನ್, ಬೆಳಗಾವಿ ಎಸ್ಪಿ ಭೀಮಾಶಂಕರ್ ಗುಳೇದ, ಇನ್ಸ್ಪೆಕ್ಟರ್ ಸೇರಿದಂತೆ ಹಲವರ ವಿರುದ್ಧ ಗಂಭೀರ ಸ್ವರೂಪದ ದೂರನ್ನು ಕೊಟ್ಟಿದ್ದಾರೆ.

ಮೇಲ್ಕಂಡ ಅಧಿಕಾರಿಗಳ ಮೇಲೆ ರಾಜ್ಯ ಸರ್ಕಾರ ಶಿಸ್ತು ಕ್ರಮ ಏಕೆ ಜರುಗಿಸಬಾರದೆಂದು ರಾಜ್ಯಪಾಲರು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ಪ್ರಶ್ನೆ ಮಾಡಿದ್ದಾರೆ. ನನ್ನ ಜೀವಕ್ಕೂ ಅಪಾಯವಿದೆ ಎಂದು ರವಿ ನನ್ನ ಬಳಿ ಆತಂಕ ವ್ಯಕ್ತಪಡಿಸಿದ್ದಾರೆ. ಒಬ್ಬ ಜನಪ್ರತಿನಿಧಿಗೆ ಭದ್ರತೆ ಒದಗಿಸುವುದು ಸರ್ಕಾರದ ಕರ್ತವ್ಯ.

ಸುವರ್ಣಸೌಧದ ಒಳಗೆಯೇ ಅವರ ಮೇಲೆ ಕೆಲವರು ಹಲ್ಲೆ ನಡೆಸಲು ಮುಂದಾಗಿದ್ದರು ಎಂಬುದನ್ನು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸರ್ಕಾರವು ಯಾವುದೇ ಪಕ್ಷದ ಜನಪ್ರತಿನಿಧಿಗೆ ಅಪಾಯವಿದೆ ಎಂದಾಗ ಭದ್ರತೆ ನೀಡಬೇಕು. ಇದನ್ನು ನಿರ್ಲಕ್ಷಿಸುವುದು ಸರಿಯಾದ ಕ್ರಮವಲ್ಲ ಎಂದು ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ವ್ಯಕ್ತವಾಗದ ಪ್ರತಿಕ್ರಿಯೆ: ರಾಜ್ಯಪಾಲರು ಪತ್ರ ಬರೆದು ಒಂದು ವಾರ ಕಳೆಯುತ್ತಾ ಬಂದರೂ ಮುಖ್ಯಮಂತ್ರಿ ಕಚೇರಿಯಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕೆಂದು ಸೂಚನೆ ಕೊಟ್ಟಿದ್ದರೂ ಈವರೆಗೂ ಯಾವುದೇ ಕ್ರಮ ಜರುಗಿಸದೆ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಈ ಪ್ರಕರಣದಲ್ಲಿ ಖಾನಾಪುರದ ಇನ್ಸ್ಪೆಕ್ಟರ್ ಅಮಾನತುಪಡಿಸಿದ್ದನ್ನು ಹೊರತುಪಡಿಸಿದರೆ ಉತ್ತರವಲಯದ ಐಜಿಪಿಯಾಗಿದ್ದ ವಿಕಾಸ್ಕುಮಾರ್ ಅವರನ್ನು ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

ಪ್ರಕರಣವು ದಿನದಿಂದ ದಿನಕ್ಕೆ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಪ್ರಕರಣವು ಮುಗಿದ ಅಧ್ಯಾಯ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ. ಆದರೆ ಸರ್ಕಾರ ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಸಿಐಡಿ ತನಿಖೆಗೆ ಆದೇಶ ನೀಡಿದೆ.

ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದಿದ್ದ ಚಳಿಗಾಲದ ಅಧಿವೇಶನದ ಕೊನೆಯ ದಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಸಿ.ಟಿ.ರವಿ ಅಶ್ಲೀಲ ಪದ ಬಳಕೆ ಮಾಡಿ ನಿಂದಿಸಿದ್ದಾರೆ ಎಂಬ ಆರೋಪವು ರಾಜ್ಯರಾಜಕಾರಣದಲ್ಲಿ ಭಾರೀ ಸದ್ದು ಮಾಡಿದೆ.

RELATED ARTICLES

Latest News