ಬೆಂಗಳೂರು,ಏ.26- ಚುನಾವಣಾ ಆಯೋಗದ ಸೂಚನೆಯನ್ನು ಉಲ್ಲಂಘಿಸಿ ಕೆಲವು ಕಡೆ ಅಭ್ಯರ್ಥಿಗಳು ಮತ್ತು ಮತದಾರರು ಮತದಾನದ ನಂತರ ಮೊಬೈಲ್ ರೆಕಾರ್ಡ್ ಹಾಗೂ ಸೆಲ್ಫಿ ಕ್ಲಿಕಿಸಿಕೊಂಡಿರುವ ಘಟನೆಗಳು ನಡೆದಿವೆ. ಮತದಾನದ ವೇಳೆ ಅದರಲ್ಲೂ ವಿವಿಎಂ ಬಳಿ ಯಾರೊಬ್ಬರೂ ಸೆಲ್ಫಿ ತೆಗೆದುಕೊಳ್ಳುವುದು ಇಲ್ಲವೇ ಮತದಾನದ ವಿಡಿಯೋ ಚಿತ್ರೀಕರಣ ಮಾಡಿಕೊಳ್ಳಬಾರದೆಂದು ಆಯೋಗ ಕಟ್ಟುನಿಟ್ಟಿನ ಸೂಚನೆ ನೀಡಿತ್ತು.
ಆಯೋಗದ ಈ ಸೂಚನೆಯನ್ನು ಧಿಕ್ಕರಿಸಿ ಕೆಲವು ಕಡೆ ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದರೆ ಇನ್ನು ಕೆಲವು ಕಡೆ ಸೆಲ್ಫಿಯನ್ನು ತೆಗೆದುಕೊಂಡಿದ್ದಾರೆ.ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾರೆಡ್ಡಿ ಅವರಿಗೆ ಮತ ಹಾಕಿ ಅದನ್ನು ವಿಡಿಯೋ ಮಾಡಿಕೊಂಡಿದ್ದಾರೆ. ಜೊತೆಗೆ, ಬ್ಯಾಲೆಟ್ ಪೇಪರ್ ಮುದ್ರಣ ಆಗುವುದನ್ನೂ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಗುರುರಾಜ್ ಅಂಜನ್ ಎನ್ನುವವರು ಟ್ವಿಟರ್ನಲ್ಲಿ ಹಂಚಿಕೊಂಡು ಒಳ್ಳೆಯ ಕಾರ್ಯವನ್ನು ಶುಭ ಮುಂಜಾನೆಯೇ ಆರಂಭ ಮಾಡಿದ್ದಾರೆ ಎಂದು ಬರೆದುಕೊಂಡಿದ್ದಾನೆ.
ದಕ್ಷಿಣ ಕನ್ನಡ ಪುತ್ತೂರಿನಲ್ಲಿಯೂ ನಿಯಮ ಉಲ್ಲಂಘನೆ: ರಾಜ್ಯದ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಪುತ್ತೂರಿನ ಮತಗಟ್ಟೆಯೊಂದರಲ್ಲಿ ರಂಜಿತ್ ಬಂಗೇರ ಎಂಬ ಯುವಕ ಮತದಾನ ಮಾಡುವಾಗ ತಾನು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದೇನೆ ಎಂದು ಫೋಟೋ ತೆಗೆದುಕೊಂಡು ಶೇರ್ ಮಾಡಿಕೊಂಡಿದ್ದಾರೆ.
ತಾನು ಮತದಾನ ಮಾಡಿದ ಯುವಕ ಪುತ್ತೂರಿನ ಕೋಟಿ-ಚೆನ್ನಯ ಕಂಬಳ ಗ್ರೂಪ್ ಗೆ ಮತದಾನ ಮಾಡುವ ಫೋಟೊ ಶೇರ್ ಮಾಡಿಕೊಂಡಿದ್ದಾನೆ. ಮತಗಟ್ಟೆಯೊಳಗೆ ಮೊಬೈಲ್ ಗೆ ನಿರ್ಬಂಧ ವಿಧಿಸಿದರೂ ಕಾನೂನು ಉಲ್ಲಂಘನೆ ಮಾಡಿದ್ದಾನೆ.
ಕೋಲಾರದಲ್ಲೂ ನಿಯಮ ಉಲ್ಲಂಘನೆ: ಪ್ರಜಾಪ್ರಭುತ್ವದ ಪ್ರಮುಖ ಹಕ್ಕಾಗಿರುವ ಮತದಾನವನ್ನು ಚಲಾವಣೆ ಮಾಡಲು 18 ವರ್ಷ ಪೂರೈಸಿದ ಎಲ್ಲ ಭಾರತೀಯ ನಾಗರಿಕರಿಗೂ ಹಕ್ಕಿದೆ. ನಮ್ಮ ದೇಶದಲ್ಲಿ ಗೌಪ್ಯ ಮತದಾನ ವ್ಯವಸ್ಥೆ ಇದೆ. ಆದರೆ, ಈ ನಿಯಮ ಉಲ್ಲಂಘಿಸುವ ಮತದಾರರು ತಾವು ಮತದಾನ ಮಾಡಿದ್ದಾರೆ.
ಕೋಲಾರದಲ್ಲಿ ಮತದಾರನೊಬ್ಬ ತಾನು ಕಾಂಗ್ರೆಸ್ ಅಭ್ಯರ್ಥಿ ಕೆ.ವಿ. ಗೌತಮ್ ಅವರಿಗೆ ಮತದಾನ ಮಾಡುವುದನ್ನು ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ.
ಅದೇ ರೀತಿ ಚಿಕ್ಕಬಳ್ಳಾಪುರದಲ್ಲಿಯೂ ನಿಯಮ ಉಲ್ಲಂಘನೆ ಮಾಡಲಾಗಿದೆ. ಚುನಾವಣಾ ಆಯೋಗದಿಂದ ಮತದಾನ ಕೇಂದ್ರದೊಳಗೆ ಮೊಬೈಲ್ ತೆಗೆದುಕೊಂಡು ಹೋಗಿ, ಫೋಟೋ ಮತ್ತು ವಿಡಿಯೋ ಮಾಡುವಂತಿಲ್ಲ ಎಂಬ ನಿಯಮವಿದೆ. ಆದರೆ, ಈ ನಿಯಮ ಉಲ್ಲಂಘಿಸಿ ಚಿಕ್ಕಬಳ್ಳಾಪುರ ಲೋಕಸಭಾ ವ್ಯಯಾಪ್ತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಅವರಿಗೆ ಮತ ಹಾಕುವುದನ್ನು ವಿಡಿಯೋ ಮಾಡಿಕೊಂಡಿದ್ದಾನೆ. ಜೊತೆಗೆ, ಮತದಾನ ಮಾಡುವ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಹಂಚಿಕೊಂಡಿದ್ದಾನೆ.