ಬೆಂಗಳೂರು,ಏ.7- ಬೆಂಗಳೂರಿನಂತಹ ಬೃಹತ್ ನಗರದಲ್ಲಿ ಸಣ್ಣಪುಟ್ಟ ಅಹಿತಕರ ಘಟನೆಗಳು ನಡೆಯುತ್ತಿರುತ್ತವೆ. ಪರಿಸ್ಥಿತಿಯನ್ನು ಸರಿಪಡಿಸಲು ಸೂಚನೆಗಳನ್ನು ನೀಡಲಾಗಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ನಗರದಲ್ಲಿ ಮಹಿಳೆ ಮೇಲೆ ನಡೆದ ದೌರ್ಜನ್ಯ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಅವರು, ಇಂತಹ ಯಾವುದೇ ಘಟನೆಗಳೂ ನಡೆಯಬಾರದು. ಈ ನಿಟ್ಟಿನಲ್ಲಿ ಗಸ್ತನ್ನು ಬಿಗಿಗೊಳಿಸುವುದೂ ಸೇರಿದಂತೆ ಅಗತ್ಯ ಸುಧಾರಣೆ ತರಲು ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದೇವೆ. ಇಂದು ಬೆಳಿಗ್ಗೆ ಕೂಡ ಎಚ್ಚರಿಕೆಯಿಂದ ಇರಲು ತಾಕೀತು ಮಾಡಲಾಗಿದೆ ಎಂದರು.
ಅಲ್ಲೊಂದು ಇಲ್ಲೊಂದು ಅಹಿತಕರ ಘಟನೆಗಳು ನಡೆದಾಗ ಜನರ ಗಮನ ಸೆಳೆಯುವುದು ಸಾಮಾನ್ಯ. ಅಷ್ಟಕ್ಕೇ ನಾವು ಬಿಟ್ಟುಬಿಡುವುದಿಲ್ಲ. ನಮ್ಮ ಪೊಲೀಸರು ಮಳೆ, ಬಿಸಿಲು ಎನ್ನದೆ ಹಗಲಿರುಳು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.ಇಷ್ಟು ದೊಡ್ಡ ಪಟ್ಟಣದಲ್ಲಿ ಒಂದೆರೆಡು ಘಟನೆಗಳಾಗುವುದು ಸಾಮಾನ್ಯ. ಅದಕ್ಕೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದರು.
ಕರ್ನಾಟಕದಲ್ಲಿ ಪಂಚಖಾತ್ರಿ ಯೋಜನೆಗಳನ್ನು ಅತ್ಯಂತ ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ಅದಕ್ಕಾಗಿಯೇ ಬೇರೆಬೇರೆ ರಾಜ್ಯಗಳಿಂದ ಇಲ್ಲಿಗೆ ಬಂದು ಅಧ್ಯಯನ ಮಾಡುತ್ತಿದ್ದಾರೆ. ತೆಲಂಗಾಣದಲ್ಲಿ ಗ್ಯಾರಂಟಿಗೆ ವಿರೋಧ ವ್ಯಕ್ತವಾಗಿರುವ ಕುರಿತು ಹೈಕಮಾಂಡ್ ಗಮನಿಸುತ್ತದೆ. ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ವಾತಾವರಣವಿರುತ್ತದೆ ಎಂದು ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್ ನಡುವೆ ಮಾತುಕತೆ ವಿಚಾರವಾಗಿ ತಾವು ಪ್ರತಿಕ್ರಿಯೆ ನೀಡುವುದಿಲ್ಲ. ಹೈಕಮಾಂಡ್ ಗಮನಿಸುತ್ತದೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತಂತೆ ಸಮಯ ಬಂದಾಗ ನಾನು ನನ್ನ ಅಭಿಪ್ರಾಯವನ್ನು ಹೇಳುತ್ತೇನೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರಿದ್ದಾರೆ. ಅವರು ಇಂತಹ ವಿಚಾರಗಳನ್ನು ನೋಡಿಕೊಳ್ಳುತ್ತಾರೆ. ಹೈಕಮಾಂಡ್ ಕೂಡ ತನ್ನದೇ ಆದ ಮೂಲಗಳಿಂದ ಮಾಹಿತಿ ಪಡೆದುಕೊಳ್ಳುತ್ತದೆ ಎಂದರು.
ಕಳೆದೆರಡು ವರ್ಷಗಳಿಂದ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡುತ್ತಿರುವುದನ್ನು ಬಿಜೆಪಿಯಿಂದ ಸಹಿಸಿಕೊಳ್ಳಲಾಗುತ್ತಿಲ್ಲ. 5 ಗ್ಯಾರಂಟಿಗಳನ್ನು ಯಶಸ್ವಿಗೊಳಿಸಿದ್ದೇವೆ. ಮುಖ್ಯಮಂತ್ರಿ ಸಮತೋಲಿತ ಬಜೆಟ್ ಮಂಡಿಸಿದ್ದಾರೆ. ಇದರಿಂದ ಬಿಜೆಪಿಯವರಿಗೆ ಹೊಟ್ಟೆ ಉರಿ ಹೆಚ್ಚಾಗಿದೆ. ಹೀಗೇ ಸುಮನಿದ್ದರೆ ನಾವು ಜನರ ಮನಸ್ಸಿನಿಂದ ಕಳೆದುಹೋಗುತ್ತೇವೆ ಎಂಬ ಕಾರಣಕ್ಕೆ ಪ್ರತಿಭಟನೆಗೆ ಮುಂದಾಗಿದ್ದಾರೆ ಎಂದು ಲೇವಡಿ ಮಾಡಿದರು. ಜನಾಕ್ರೋಶ ಎಂದರೆ ಹಾದಿಬೀದಿಯಲ್ಲಿ ಜನ ನಮನ್ನು ಬಯ್ಯಬೇಕು. ಈಗ ಅಂತಹ ವಾತಾವರಣವಿಲ್ಲ ಎಂದರು.
ಸಮಾಜದ ಪ್ರತಿಯೊಂದು ಸಮುದಾಯದ ಅಭಿವೃದ್ಧಿಗೂ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸುತ್ತದೆ. ಎಸ್‌ಸಿ/ಎಸ್‌ಟಿ, ಓಬಿಸಿ ಸೇರಿದಂತೆ ಈ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಮೀಸಲಾತಿಯನ್ನು ನೀಡಲಾಗಿದೆ. ರಾಜ್ಯದಲ್ಲಿ ಶೇ.16 ರಷ್ಟು ಜನಸಂಖ್ಯೆ ಅಲ್ಪಸಂಖ್ಯಾತರಿದ್ದಾರೆ. ಅವರನ್ನು ಅಭಿವೃದ್ಧಿಯಿಂದ ಹಿಂದೆ ಬಿಡಲು ಸಾಧ್ಯವಿಲ್ಲ. ಹೀಗಾಗಿ ನಮ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.