ಪರ್ತ್, ನ.24- ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ ನಲ್ಲಿ ಡಕ್ ಔಟ್ ಆಗಿದ್ದ ಯುವ ಎಡಗೈ ಆಟಗಾರ ಯಶಸ್ವಿ ಜೈಸ್ವಾಲ್ ದ್ವಿತೀಯ ಇನಿಂಗ್ಸ್ ನಲ್ಲಿ ಶತಕ (161ರನ್)ಸಿಡಿಸುವ ಮೂಲಕ ಕ್ರಿಕೆಟ್ ದಿಗ್ಗಜರಾದ ಸುನೀಲ್ ಗಾವಸ್ಕರ್ ಹಾಗೂ ವೀರೇಂದ್ರ ಸೆಹ್ವಾಗ್ ಇರುವ ಎಲೈಟ್ ಗುಂಪಿಗೆ ಸೇರ್ಪಡೆಗೊಂಡಿದ್ದಾರೆ.
ಕಾಂಗರೂ ನಾಡಿನಲ್ಲಿ ಆಸ್ಟ್ರೇಲಿಯಾ ವಿರುದ್ಧ 150ಕ್ಕೂ ಹೆಚ್ಚು ರನ್ ಗಳಿಸಿದ 5ನೇ ಭಾರತೀಯ ಆಟಗಾರ ಎಂಬ ದಾಖಲೆಗೆ ಯುವ ಎಡಗೈ ಆಟಗಾರ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ರವಿಶಾಸ್ತ್ರಿ, ವೀರೇಂದ್ರ ಸೆಹ್ವಾಗ್ (2003 ಮತ್ತು 2008), ಸುನೀಲ್ ಗಾವಸ್ಕರ್ (1985 ಮತ್ತು 1986) ಹಾಗೂ ವಿವಿಎಸ್ ಲಕ್ಷ್ಮಣ್ ಅವರು ಈ ಸಾಧನೆ ಮಾಡಿದ್ದರು.
ಅಲ್ಲದೆ ಆಸ್ಟ್ರೇಲಿಯಾ ನೆಲದಲ್ಲಿ ಶತಕ ಸಿಡಿಸಿದ 4ನೇ ಅತ್ಯಂತ ಟೀಮ್ ಇಂಡಿಯಾ ಆಟಗಾರರಾಗಿಯೂ ಯಶಸ್ವಿ ಜೈಸ್ವಾಲ್ (22 ವರ್ಷ 330 ದಿನ) ಗುರುತಿಸಿಕೊಂಡಿದ್ದಾರೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ (18 ವರ್ಷ 253 ವರ್ಷ) 1992ರಲ್ಲಿ ಶತಕ ಸಿಡಿಸಿದ ಭಾರತದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.
ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಸಿಕ್‌್ಸ ಸಿಡಿಸಿದ ಆಟಗಾರ ಎಂಬ ದಾಖಲೆಗೂ ಜೈಸ್ವಾಲ್ (91) ಪಾತ್ರರಾಗುವ ಮೂಲಕ ನ್ಯೂಜಿಲೆಂಡ್ ನ ಮಾಜಿ ನಾಯಕ ಬ್ರೆಡಂ ಮೆಕುಲಂ ದಾಖಲೆ ಮುರಿದಿದ್ದಲ್ಲದೆ, ಒಂದೇ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎಡಗೈ ಆಟಗಾರರಾಗಿ ಟೀಮ್ ಇಂಡಿಯಾದ ಹಾಲಿ ಕೋಚ್ ಗೌತಮ್ ಗಂಭೀರ್ ಅವರ ದಾಖಲೆ ಹಿಂದಿಕ್ಕಿದ್ದಾರೆ.
ಕನ್ನಡಿಗ ಕೆ.ಎಲ್.ರಾಹುಲ್ (75ರನ್) ಜೊತೆಗೂಡಿ ಮೊದಲ ವಿಕೆಟ್‌ಗೆ 201 ರನ್ ಕಾಣಿಕೆ ನೀಡಿದ್ದ ಜೈಸ್ವಾಲ್, 297 ಎಸೆತಗಳನ್ನು ಎದುರಿಸಿ 15 ಬೌಂಡರಿ, 3 ಸಿಕ್ಸರ್ ಗಳ ಸಹಿತ 161 ರನ್ ಗಳಿಸಿ ಮಿಚೆಲ್ ಮಾರ್ಷ್ ಬೌಲಿಂಗ್ ನಲ್ಲಿ ಸಿತ್ ಗೆ ವಿಕೆಟ್ ಒಪ್ಪಿಸಿದರು.