ನವದೆಹಲಿ,ಜ.9- ಭಾರತೀಯ ಕ್ರಿಕೆಟ್ ತಂಡದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಭಾರಿ ಕುಸಿತ ಕಂಡಿದ್ದಾರೆ. ಬಾರ್ಡರ್ -ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದ ಕೊಹ್ಲಿ 5 ಪಂದ್ಯಗಳಲ್ಲಿ 9 ಇನಿಂಗ್‌್ಸನಲ್ಲಿ ಕೇವಲ 190 ರನ್‌ಗಳಿಸಲಷ್ಟೇ ಶಕ್ತರಾಗಿದ್ದರು. ಅಂದರೆ 23.75 ರ ಸರಾಸರಿಯಲ್ಲಿ ರನ್ ಕಲೆಹಾಕಿದ್ದರು. ಈ ಕಳಪೆ ಪ್ರದರ್ಶನದ ಫಲವಾಗಿ ಇದೀಗ ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಭಾರಿ ಕುಸಿತ ಕಂಡಿದ್ದಾರೆ. ಅದು ಕೂಡ ಕಳೆದ 12 ವರ್ಷಗಳಲ್ಲೇ ಅತ್ಯಂತ ಕಡಿಮೆ ಶ್ರೇಯಾಂಕಕ್ಕೆ ದೂಡಲ್ಪಟ್ಟಿರುವುದು ಈ ಬಾರಿಯ ವಿಶೇಷವಾಗಿದೆ.
ವಿರಾಟ್ ಕೊಹ್ಲಿ ಕಳೆದ 12 ವರ್ಷಗಳಲ್ಲಿ ಒಮೆಯೂ ಟೆಸ್ಟ್ ಬ್ಯಾಟರ್‌ಗಳ ಟಾಪ್-25 ಪಟ್ಟಿಯಿಂದ ಹೊರಬಿದ್ದಿರಲಿಲ್ಲ. ಆದರೆ ಈ ಬಾರಿ ಅವರು 27ನೇ ಸ್ಥಾನಕ್ಕೆ ಕುಸಿದಿದ್ದಾರೆ. ಈ ಮೂಲಕ ದಶಕದ ಬಳಿಕ ಅತ್ಯಂತ ಕಡಿಮೆ ಶ್ರೇಯಾಂಕದಲ್ಲಿ ಕಾಣಿಸಿಕೊಂಡಿದ್ದಾರೆ. 2011 ರಲ್ಲಿ ಟೆಸ್ಟ್ ಕೆರಿಯರ್ ಆರಂಭಿಸಿದ್ದ ವಿರಾಟ್ ಕೊಹ್ಲಿ 2012 ರಲ್ಲಿ ಐಸಿಸಿ ಟೆಸ್ಟ್ ಬ್ಯಾಟರ್‌ಗಳ ಪಟ್ಟಿಯಲ್ಲಿ 36ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಅವರ ರ್ಯಾಂಕಿಂಗ್ ಏರುಮುಖದತ್ತ ಸಾಗಿತ್ತು. ಇದರ ನಡುವೆ ಆಗಸ್ಟ್ 2018 ರಲ್ಲಿ ತಮ ವತ್ತಿಜೀವನದ ಅತ್ಯುತ್ತಮ ಟೆಸ್ಟ್ ರೇಟಿಂಗ್ (937) ಪಡೆದುಕೊಂಡಿದ್ದರು.
ಆ ಬಳಿಕ ಟಾಪ್-10 ನಲ್ಲೇ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದ ವಿರಾಟ್ ಕೊಹ್ಲಿ ಈ ವರ್ಷ ಅಗ್ರ ಹತ್ತರಿಂದ ಹೊರಬಿದ್ದಿದ್ದರು. ಇದೀಗ ಟಾಪ್-25 ಯಿಂದಲೂ ಔಟ್ ಆಗಿದ್ದಾರೆ. ಈ ಮೂಲಕ ಕಳೆದ 12 ವರ್ಷಗಳಲ್ಲೇ ಅತ್ಯಂತ ಕೆಳಸ್ತರದ ರ್ಯಾಂಕಿಂಗ್ ಪಡೆದುಕೊಂಡಿದ್ದಾರೆ. ಈ ಶ್ರೇಯಾಂಕದಲ್ಲಿ ಮೇಲೇರಲು ವಿರಾಟ್ ಕೊಹ್ಲಿ ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಲೇಬೇಕಾಗಿದೆ.
ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಇಂಗ್ಲೆಂಡ್‌ನ ಜೋ ರೂಟ್ ಅಗ್ರಸ್ಥಾನದಲ್ಲಿದ್ದರೆ, ಹ್ಯಾರಿ ಬ್ರೂಕ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಇನ್ನು ಮೂರನೇ ಸ್ಥಾನದಲ್ಲಿ ನ್ಯೂಝಿಲೆಂಡ್‌ನ ಕೇನ್ ವಿಲಿಯಮ್ಸನ್ ಇದ್ದರೆ, ನಾಲ್ಕನೇ ಸ್ಥಾನದಲ್ಲಿ ಟೀಮ್ ಇಂಡಿಯಾದ ಯುವ ಎಡಗೈ ದಾಂಡಿಗ ಯಶಸ್ವಿ ಜೈಸ್ವಾಲ್ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಐದನೇ ಸ್ಥಾನವನ್ನು ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಅಲಂಕರಿಸಿದ್ದಾರೆ.