ಬೆಂಗಳೂರು, ಅ. 28- ಸ್ಪಿನ್ ಬೌಲಿಂಗ್ ವಿರುದ್ಧ ಸತತವಾಗಿ ಎಡವುತ್ತಿರುವ ಟೀಮ್ ಇಂಡಿಯಾದ ಮಾಜಿ ನಾಯಕ, ಕ್ಲಾಸ್ ಆಟಗಾರ ವಿರಾಟ್ ಕೊಹ್ಲಿ ಅವರು ತಮ ಗತಕಾಲದ ಬ್ಯಾಟಿಂಗ್ ಲಯಕ್ಕೆ ಮರಳಬೇಕಾದರೆ ದೇಶಿ ಕ್ರಿಕೆಟ್ ಆಡಬೇಕೆಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಆಗ್ರಹಿಸಿದ್ದಾರೆ.
ಪುಣೆಯಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಎರಡು ಇನಿಂಗ್ಸ್ ನಲ್ಲೂ 1 ಹಾಗೂ 17 ರನ್ ಗಳಿಸಿ ಅಲ್ಪಮೊತ್ತಕ್ಕೆ ಕಿವೀಸ್ ಸ್ಪಿನ್ನರ್ ಮಿಚೆಲ್ ಸ್ಯಾಂಟರ್ಗೆ ವಿಕೆಟ್ ಒಪ್ಪಿಸಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರೆ, ಕನ್ನಡಿಗ ಅನಿಲ್ ಕುಂಬ್ಳೆ ಸೇರಿದಂತೆ ಹಲವು ಮಾಜಿ ಕ್ರಿಕೆಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ವಿರಾಟ್ ಕೊಹ್ಲಿ ಅವರು ಇತ್ತೀಚೆಗೆ ಟೆಸ್ಟ್ ಕ್ರಿಕೆಟ್ನಲ್ಲಿ ರನ್ ಗಳಿಸಲು ಪರದಾಟ ನಡೆಸುತ್ತಿದ್ದಾರೆ. ಅಲ್ಲದೆ ಕಿವೀಸ್ ಸರಣಿಯು ಕೂಡ ಅವರಿಗೆ ಕೆಟ್ಟ ಅನುಭವ ನೀಡಿದೆ. ಕಳೆದ 4 ಇನಿಂಗ್‌್ಸನಲ್ಲಿ ಮೂರು ಪಂದ್ಯಗಳಲ್ಲಿ ಸ್ಪಿನ್ನರ್ಗಳಿಗೆ ವಿಕೆಟ್ ಒಪ್ಪಿಸಿದ್ದಾರೆ. ಆದ್ದರಿಂದ ವಿರಾಟ್ ಕೊಹ್ಲಿ ಅವರು ತಮ ವೈಫಲ್ಯವನ್ನು ಮೆಟ್ಟಿನಿಂತು ಸ್ಪಿನ್ನರ್ಗಳ ವಿರುದ್ಧ ಹೆಚ್ಚಿನ ರನ್ ಗಳಿಸಬೇಕಾಗಿದೆ’ ಎಂದು ಆರ್ಸಿಬಿ ಬ್ಯಾಟಿಂಗ್ ಕೋಚ್ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಕೂಡ ಒಬ್ಬ ಸಾಮಾನ್ಯ ಮನುಷ್ಯನಾಗಿದ್ದು, ಆತ ಸದಾ ತನಗೆ ಎದುರಾಗುವ ಪ್ರಶ್ನೆಗಳಿಗೆ ಉತ್ತರ ಹುಡುಕಲು ಪ್ರಯತ್ನಿಸುತ್ತಾನೆ. ಒಬ್ಬ ಆಟಗಾರ ಉತ್ತುಂಗಮಟ್ಟಕ್ಕೆ ಏರಿದಾಗ ಆತನಿಗೆ ಸಹಜವಾಗಿಯೇ ಸವಾಲುಗಳು ಎದುರಾಗುತ್ತವೆ. ಈಗ ಆತ (ವಿರಾಟ್ ಕೊಹ್ಲಿ ) ಮತ್ತೊಂದು ಸವಾಲನ್ನು ಎದುರಿಸುತ್ತಿದ್ದಾನೆ. ಭಾರತದಲ್ಲಿ ಇತ್ತೀಚೆಗೆ ಹೆಚ್ಚಾಗಿ ಸ್ಪಿನ್ ಪಿಚ್ಗಳನ್ನೇ ರೂಪಿಸುತ್ತಿದ್ದು, ಅದಕ್ಕೆ ತಕ್ಕಂತೆ ರಣತಂತ್ರ ಹೂಡುವುದು ಅನಿವಾರ್ಯವಾಗಿದೆ’ ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.
2021ರಿಂದ ವಿರಾಟ್ ಕೊಹ್ಲಿ ಸ್ಪಿನ್ ಬೌಲಿಂಗ್ ಎದುರಿಸುವಲ್ಲಿ ಎಡವುತ್ತಿದ್ದು, 50 ಇನಿಂಗ್ಸ್ ನಲ್ಲಿ 24 ಇನಿಂಗ್ಸ್ ನಲ್ಲಿ ವಿಕೆಟ್ ಒಪ್ಪಿಸಿದ್ದಾರೆ. ಅಲ್ಲದೆ 2023ರ ಜುಲೈ ನಂತರ ಕೊಹ್ಲಿ ಟೆಸ್ಟ್ ಶತಕ ಸಿಡಿಸುವಲ್ಲೂ ವಿಫಲರಾಗಿದ್ದು, ಈ ಮಾದರಿಯಲ್ಲಿ ಲಯ ಕಂಡುಕೊಳ್ಳಬೇಕಾದರೆ ಆತ ರಣಜಿ ಸೇರಿದಂತೆ ಹಲವು ದೇಶಿ ಕ್ರಿಕೆಟ್ಗಳಲ್ಲಿ ಆಡಬೇಕೆಂದು ದಿನೇಶ್ ಕಾರ್ತಿಕ್ ಸಲಹೆ ನೀಡಿದ್ದಾರೆ.