ನವದೆಹಲಿ, .ಜ.31- ರಾಷ್ಟ್ರೀಯ ತಂಡದಂತೆ ದೇಶಿ ಕ್ರಿಕೆಟ್ ನಲ್ಲೂ ವಿರಾಟ್ ಕೊಹ್ಲಿ ಘರ್ಜಿಸದೆ ಅಭಿಮಾನಿಗಳನ್ನು ನಿರಾಸೆಯ ಕಡಲಲ್ಲಿ ತೇಲಿಸಿದೆ . ಹನ್ನೆರಡು ವರ್ಷಗಳ ನಂತರ ದೇಶಿ ಕ್ರಿಕೆಟ್ ಮರಳಿದ ಕಿಂಗ್ ಕೊಹ್ಲಿಯನ್ನು ನೋಡಲು ಬಂದಿದ್ದ ಅಭಿಮಾನಿಗಳಿಂದ ಮೈದಾನವು ಕಿಕ್ಕಿರಿದು ತುಂಬಿತ್ತು. ನಮ ನೆಚ್ಚಿನ ಆಟಗಾರ ಗಳಿಸುವ ದೊಡ್ಡ ಮೊತ್ತವನ್ನು ಕಣ್ತುಂಬಿಕೊಳ್ಳಲು ಕಾತರಿಸುತ್ತಿದ್ದರು.
ಅದಕ್ಕೆ ತಕ್ಕಂತೆ ವಿರಾಟ್ ಕೊಹ್ಲಿ ಅವರು ಬೌಂಡರಿ ಗಳಿಸುವ ಮೂಲಕ ಅಭಿಮಾನಿಗಳನ್ನು ರಂಜಿಸಿದರಾದರೂ ರೈಲ್ವೇಸ್ ನ ವೇಗಿ ಹಿಂಮಾಸು ಸಾಂಗ್ವಾನ್ ಅವರ ಚೆಂಡಿನ ಗತಿಯನ್ನು ಅರಿಯದೆ 6 ರನ್ ಗಳಿಗೆ ಕ್ಲೀನ್ ಬೋಲ್ಡ್ ಆಗಿ ಬೇಸರದಿಂದಲೇ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದ್ದರು. ವಿರಾಟ್ ಕೊಹ್ಲಿ ಔಟಾಗುತ್ತಿದ್ದಂತೆ ಬಹುತೇಕ ಅಭಿಮಾನಿಗಳು ಬೇಸರದಿಂದ ಕ್ರೀಡಾಂಗಣದಿಂದ ಹೊರಹೋಗುತ್ತಿದ್ದ ದೃಶ್ಯಗಳು ಕೂಡ ಸಾಮಾನ್ಯವಾಗಿತ್ತು.
ಸಾಂಗ್ವಾನ್ ಹರ್ಷ:
ಕ್ಲಾಸ್ ಆಟಗಾರ ವಿರಾಟ್ ಕೊಹ್ಲಿ ಅವರು ರೈಲ್ವೇಸ್ ಬೌಲರ್ಸ್ ಗಳನ್ನು ತುಂಬಾ ಕಾಡುತ್ತಾರೆ ಎಂದು ಅಂದಾಜಿಸಲಾಗಿತ್ತು. ಕೊಹ್ಲಿ ವಿಕೆಟ್ ಪಡೆಯುವುದು ಕೂಡ ತಂಡಕ್ಕೆ ಹೆಚ್ಚು ಪ್ರಮುಖವಾಗಿತ್ತು. ಯಾವಾಗ ಚೆಂಡು ಬೇಲ್್ಸ ಗೆ ತಗುಲಿ ಅದು ಗಾಳಿಯಲ್ಲಿ ತೇಲುತ್ತಿದ್ದಂತೆ ಬೌಲರ್ ಹಿಂಮಾಸು ಸಾಂಗ್ವಾನ್ ಹಾಗೂ ಇತರ ಆಟಗಾರರು ಹರ್ಷದ ಅಲೆಯಲ್ಲಿ ತೇಲಿದರು.