ಬೆಂಗಳೂರು,ಡಿ.21- ಕನ್ನಡ ಚಿತ್ರರಂಗದ ಮೇರುನಟ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ಸ್ಮಾರಕ ಕುರಿತಂತೆ ಅವರ ಕುಟುಂಬದ ಸದಸ್ಯರು ತೆಗೆದುಕೊಳ್ಳುವ ನಿರ್ಧಾರದ ಆಧಾರದ ಮೇಲೆ ಎಲ್ಲವೂ ಅವಲಂಬಿತವಾಗಿದೆ ಎಂದು ಹ್ಯಾಟ್ರಿಕ್ ಹೀರೊ ಶಿವರಾಜ್‍ಕುಮಾರ್ ತಿಳಿಸಿದರು.
ಮುಖ್ಯಮಂತ್ರಿ ಗೃಹಕಚೇರಿ ಕೃಷ್ಣಾದಲ್ಲಿ ಕೆಎಂಎಫ್ ಉತ್ಪನ್ನಗಳ ಬಿಡುಗಡೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಷ್ಣು ಸರ್ ಮೇಲೆ ಎಲ್ಲರಿಗೂ ಅಭಿಮಾನವಿದೆ. ಒಂದು ಜಾಗದಿಂದಾಗಿ ಪ್ರೀತಿ ಹುಟ್ಟುವುದಿಲ್ಲ. ಅವರ ಬಗ್ಗೆ ಎಲ್ಲರಿಗೂ ಹೃದಯದಲ್ಲೇ ಪ್ರೀತಿ ಹುಟ್ಟುತ್ತದೆ, ಅದೇ ದೊಡ್ಡದು. ಬೆಂಗಳೂರಿನಲ್ಲೇ ಸ್ಮಾರಕ ನಿರ್ಮಾಣ ಕುರಿತಂತೆ ಭಾರತಿ ವಿಷ್ಣುವರ್ಧನ್ , ವಿಷ್ಣುವರ್ಧನ್‍ರ ಅಳಿಯಂದಿರು, ಇಬ್ಬರು ಹೆಣ್ಣುಮಕ್ಕಳು ನಿರ್ಧಾರ ತೆಗೆದುಕೊಳ್ಳಬೇಕು. ಮೊದಲು ಅವರ ಕುಟುಂಬ ನಿರ್ಧಾರ ತೆಗೆದುಕೊಳ್ಳಬೇಕು. ನಂತರ ಅಭಿಮಾನಿಗಳ ಅಭಿಪ್ರಾಯ ಪರಿಗಣನೆಯಾಗುತ್ತದೆ ಎಂದರು.
ಸ್ಮಾರಕದ ವಿಷಯವಾಗಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ನೀಡುವುದು ದೊಡ್ಡ ವಿಷಯವೇ ಅಲ್ಲ. ಮೊದಲು ಕುಟುಂಬದ ಸದಸ್ಯರ ಅಭಿಪ್ರಾಯಗಳಿಗೆ ಗೌರವ ನೀಡಬೇಕಿದೆ. ಹೋರಾಟಕ್ಕೆ ಬೆಂಬಲ ನೀಡುವುದರಿಂದ ಮಾತ್ರವೇ ವಿಷ್ಣುವರ್ಧನ್‍ರವರ ಮೇಲೆ ಪ್ರೀತಿ ಇರುತ್ತದೆ ಎಂದರ್ಥವಲ್ಲ. ನಾನು ಚಿತ್ರರಂಗಕ್ಕೆ ಬರುವುದಕ್ಕೆ ಮೊದಲೇ ವಿಷ್ಣು ಸರ್ ಅವರೊಂದಿಗೆ ಒಡನಾಟ ಹೊಂದಿದ್ದೆ. 1976 ರಿಂದಲೂ ಅವರ ಕೈ ಹಿಡಿದು ಓಡಾಡಿದ್ದೇನೆ. ಆ ಬಗ್ಗೆ ಹೇಳಲು ದಿನಪೂರ್ತಿ ಸಾಲುವುದಿಲ್ಲ. ಪ್ರೀತಿಯನ್ನು ಯಾವ ರೀತಿಯಾದರೂ ತೋರಿಸಬಹುದು ಎಂದರು.
ವಿಷ್ಣು ಸ್ಮಾರಕ ಆಗಿಯೇ ಆಗುತ್ತದೆ. ಅಭಿಮಾನಿಗಳು ಚಿಂತೆ ಮಾಡುವುದು ಬೇಡ, ಈ ವಿಚಾರವಾಗಿ ಬಹಿರಂಗವಾಗಿ ಚರ್ಚೆ ಮಾಡುವುದು ಅನಗತ್ಯ. ಅದು ಬೇರೆ ರೀತಿಯ ಸ್ವರೂಪ ಪಡೆದುಕೊಳ್ಳುತ್ತದೆ. ಹೀಗಾಗಿ ಮೊದಲು ವಿಷ್ಣುವರ್ಧನ್‍ರ ಕುಟುಂಬದ ಅಭಿಪ್ರಾಯ ಮುಖ್ಯವಾಗುತ್ತದೆ. ಚಿತ್ರರಂಗದ ನಾಯಕತ್ವ ಮುಖ್ಯವಲ್ಲ ಎಂದರು.
ನಿಗಮ-ಮಂಡಳಿಗಳ ನೇಮಕಾತಿ ವಿಷಯದಲ್ಲಿ ಕಾಂಗ್ರೆಸ್ ಶಾಸಕರಿಗೆ ಮತ್ತೆ ನಿರಾಸೆ
ಯಲಹಂಕದಲ್ಲಿ ವರನಟ ಡಾ.ರಾಜ್‍ಕುಮಾರ್ ಅಧ್ಯಯನ ಕೇಂದ್ರಕ್ಕೆ ಎರಡು ಎಕರೆ ಭೂಮಿ ಮಂಜೂರಾಗಿರುವುದರ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದರು.
ಕೆಎಂಎಫ್‍ನ ಉತ್ಪನ್ನಗಳು ಹೆಚ್ಚು ರುಚಿಕರವಾಗಿವೆ. ಇಂದು ಎಮ್ಮೆಹಾಲು ಸೇರಿದಂತೆ ಹಲವು ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದೆ ಎಂದರು. ಕೆಎಂಎಫ್‍ಗೆ ಈ ಹಿಂದೆ ತಮ್ಮ ತಂದೆ ಡಾ.ರಾಜ್‍ಕುಮಾರ್ ಪ್ರಚಾರ ರಾಯಭಾರಿಯಾಗಿದ್ದರು. ಅನಂತರ ಸಹೋದರ ಪುನೀತ್ ರಾಜ್‍ಕುಮಾರ್ ಕೂಡ ರಾಯಭಾರಿಯಾಗಿ ಕೆಲಸ ಮಾಡಿದ್ದಾರೆ. ಮುಂದುವರೆದ ಪರಂಪರೆಯಾಗಿ ನಾನು ರಾಯಭಾರಿಯಾಗಿ ಕೆಲಸ ಮಾಡಿದ್ದೇನೆ. ಅದರ ಮೊದಲ ಟೀಸರ್ ಇಂದು ಬಿಡುಗಡೆ ಮಾಡಲಾಯಿತು ಎಂದು ಹೇಳಿದರು.
ಕೆಎಂಎಫ್‍ನ ಜಾಹೀರಾತಿನಲ್ಲಿ ಭಾಗವಹಿಸುವುದು ಉತ್ತಮ ಅನುಭವ. ಏನನ್ನೂ ಬಯಸದೇ ರೈತರಿಗಾಗಿ ಪ್ರೀತಿಯಿಂದ ಕೆಲಸ ಮಾಡುವುದು ಖುಷಿ ಕೊಟ್ಟಿದೆ. ಕನ್ನಡ ಚಿತ್ರರಂಗದ ಸಿಸಿಎಲ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆಗೆ ಮುಖ್ಯಮಂತ್ರಿಯವರನ್ನು ಆಹ್ವಾನ ಮಾಡಿದ್ದೇನೆ ಎಂದು ತಿಳಿಸಿದರು.