ನವದೆಹಲಿ,ಮಾ.23- ದೆಹಲಿ ಹೈಕೋರ್ಟ್ ನ ನ್ಯಾಯಾಧೀಶ ಯಶವಂತ್ ವರ್ಮಾ ಮನೆಯಲ್ಲಿ ಪತ್ತೆಯಾದ ಅಪಾರ ಪ್ರಮಾಣದ ಹಣದ ಬಗ್ಗೆ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದೇವೇಂದ್ರಕುಮಾರ್ ಉಪಾಧ್ಯಾಯ ಅವರು ಸುಪ್ರೀಂಕೋರ್ಟ್‌ಗೆ 25 ಪುಟಗಳ ತನಿಖಾ ವರದಿ ಸಲ್ಲಿಸಿದ್ದಾರೆ.
ದೆಹಲಿ ಹೈಕೋರ್ಟ್ ಸಿಜೆ ದೇವೇಂದ್ರಕುಮಾರ್ ಉಪಾಧ್ಯಾಯ ನೀಡಿದ ದೆಹಲಿ ಹೈಕೋರ್ಟ್‌ನ ತನಿಖಾ ವರದಿಯನ್ನು ಸುಪ್ರೀಂ ಕೋರ್ಟ್ ತಡರಾತ್ರಿ ತನ್ನ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ.
ನ್ಯಾಯಮೂರ್ತಿ ವರ್ಮಾ ತಮ ಉತ್ತರದಲ್ಲಿ, ತಾವು ಮತ್ತು ತಮ ಕುಟುಂಬವು ವಾಸಿಸುವ ಆವರಣದಿಂದ ಯಾವುದೇ ಕರೆನ್ಸಿಯನ್ನು ವಶಪಡಿಸಿಕೊಳ್ಳಲಾಗಿಲ್ಲ. ಆವರಣದ ಆ ಭಾಗವನ್ನು ವಾಸಸ್ಥಳದಿಂದ ತೆಗೆದುಹಾಕಲಾಗಿದೆ ಎಂದು ಸೂಚಿಸಲಾಗಿದೆ.
ಈ ಆಧಾರರಹಿತ ಆರೋಪಗಳಿಂದ ನನ್ನನ್ನು ಮುಕ್ತಗೊಳಿಸಬೇಕೆಂದು ನಾನು ನಿಮನ್ನು ಒತ್ತಾಯಿಸುತ್ತೇನೆ.ನನ್ನ ವಿರುದ್ಧ ಹೊರಿಸಲಾದ ಆಧಾರರಹಿತ ಆರೋಪಗಳು ಮತ್ತು ಪತ್ತೆಯಾದ ನಗದು ನನಗೆ ಸೇರಿದ್ದು ಎಂಬುದು ಕೇವಲ ಊಹಾಪೋಹ ಅಷ್ಟೇ ಎಂದು ನ್ಯಾಯಮೂರ್ತಿ ವರ್ಮಾ ಉತ್ತರಿಸಿದ್ದಾರೆ. ಒಂದು ದಶಕಕ್ಕೂ ಹೆಚ್ಚು ಕಾಲ ಹೈಕೋರ್ಟ್‌ನ ನ್ಯಾಯಾಧೀಶರಾಗಿ ನಾನು ಕರ್ತವ್ಯ ನಿರ್ವಹಿಸಿದ್ದೇನೆ. ಈ ಘಟನೆಯಿಂದ ನನ್ನ ಖ್ಯಾತಿಗೆ ಧಕ್ಕೆ ತಂದಿದೆ. ತಮನ್ನು ತಾವು ಸಮರ್ಥಿಸಿಕೊಳ್ಳಲು ಯಾವುದೇ ಮಾರ್ಗವಿಲ್ಲದಾಗಿದೆ ಎಂದು ಹೇಳಿದ್ದಾರೆ.
ಹೈಕೋರ್ಟ್‌ನ ನ್ಯಾಯಾಧೀಶರಾಗಿರುವ ನನ್ನ ಮೇಲೆ ಈ ಹಿಂದೆ ಈ ರೀತಿಯ ಯಾವುದೇ ಆರೋಪವನ್ನು ಮಾಡಲಾಗಿಲ್ಲ, ಹೀಗಾಗಿ ನನ್ನ ಸಮಗ್ರತೆಯ ಮೇಲೆ ಯಾವುದೇ ಸಂದೇಹವಿಲ್ಲ ಎಂಬುದನ್ನು ಪರಿಗಣಿಸಲು ನಾನು ನಿಮನ್ನು ಬೇಡಿಕೊಳ್ಳುತ್ತೇನೆ. ನ್ಯಾಯಾಧೀಶರಾಗಿ ನನ್ನ ಕಾರ್ಯನಿರ್ವಹಣೆಯ ಬಗ್ಗೆ ಮತ್ತು ನನ್ನ ನ್ಯಾಯಾಂಗ ಕಾರ್ಯ ನಿರ್ವಹಣೆಯ ಸಮಗ್ರತೆ ಮತ್ತು ಪ್ರಾಮಾಣಿಕತೆಯ ಬಗ್ಗೆ ಕಾನೂನು ಭ್ರಾತೃತ್ವದ ಗ್ರಹಿಕೆ ಏನು ಎಂಬುದರ ಕುರಿತು ವಿಚಾರಣೆ ನಡೆಸಿದರೆ ನಾನು ಕೃತಜ್ಞ ಎಂದು ವರ್ಮಾ ತಿಳಿಸಿದ್ದಾರೆ.
ಸ್ಟೋರ್ ರೂಮ್ ಅನ್ನು ತಮ ನಿವಾಸದಿಂದ ತೆಗೆದುಹಾಕಲಾಗಿದೆ ಮತ್ತು ಬಳಕೆಯಾಗದ ವಸ್ತುಗಳು ಮತ್ತು ಇತರ ಗೃಹೋಪಯೋಗಿ ವಸ್ತುಗಳನ್ನು ಸಂಗ್ರಹಿಸಲು ಸಾಮಾನ್ಯ ಡಂಪ್ ರೂಮ್ ಆಗಿ ಬಳಸಲಾಗುತ್ತಿತ್ತು ಎಂದು ಹೇಳಿದ್ದಾರೆ.
ವರ್ಮಾ ಅವರ ನಿವಾಸದಲ್ಲಿ ಹೊತ್ತಿಕೊಂಡ ಬೆಂಕಿಯಲ್ಲಿ ಹಣದ ಕಂತೆಗಳು ಸುಟ್ಟು ಹೋಗಿವೆ. ಅವುಗಳ ಕುರುಹುಗಳು ಪತ್ತೆಯಾಗಿವೆ. ಹಣ ಇದ್ದ ಕೋಣೆಯಲ್ಲಿ ಮನೆ ಕೆಲಸಗಾರರು ಇದ್ದರು. ಬೇರೆಯವರಿಗೆ ಪ್ರವೇಶವೇ ಇರಲಿಲ್ಲ. ಹೀಗಾಗಿ, ಪ್ರಕರಣ ಹೆಚ್ಚಿನ ತನಿಖೆಗೆ ಅರ್ಹವಾಗಿದೆ ಎಂದು ನ್ಯಾಯಮೂರ್ತಿ ಉಪಾಧ್ಯಾಯ ಅವರು ಮಾರ್ಚ್ 21ರಂದು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು, ಹಿಮಾಚಲ ಪ್ರದೇಶದ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜಿ.ಎಸ್.ಸಂಧವಾಲಿಯಾ ಮತ್ತು ಕರ್ನಾಟಕ ಹೈಕೋರ್ಟ್‌ನ ನ್ಯಾಯಾಧೀಶರಾದ ಅನು ಶಿವರಾಮನ್ ಅವರನ್ನೊಳಗೊಂಡ ತ್ರಿಸದಸ್ಯ ತನಿಖಾ ಸಮಿತಿಯನ್ನು ಸುಪ್ರೀಂ ಕೋರ್ಟ್ ರಚಿಸಿದೆ.ಗಂಭೀರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ, ನ್ಯಾಯಮೂರ್ತಿ ಯಶವಂತ್ ವರ್ಮಾ ಅವರಿಗೆ ಯಾವುದೇ ನ್ಯಾಯಾಂಗ ಕೆಲಸ ನೀಡದಂತೆ ಸೂಚಿಸಲಾಗಿದೆ. ಜೊತೆಗೆ, ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ ವರ್ಗ ಮಾಡಲು ಕೊಲಿಜಿಯಂ ತೀರ್ಮಾನಿಸಿದೆ ಎಂದು ಸುಪ್ರೀಂ ಕೋರ್ಟ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ನ್ಯಾಯಾಧೀಶರ ಮನೆಯಲ್ಲಿ ಆಗಿದ್ದೇನು?:
ಮಾರ್ಚ್ 14ರಂದು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಮನೆಯ ಸ್ಟೋರ್ ರೂಂನಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಾಗ, ಹಣದ ನೋಟುಗಳ ಕಂತೆಗಳು ಪತ್ತೆಯಾಗಿದ್ದವು. ಅವುಗಳಿಗೆ ಬೆಂಕಿ ಹೊತ್ತಿಕೊಂಡು ಸುಟ್ಟು ಹೋಗಿದ್ದವು. ಈ ಬಗ್ಗೆ ಅವರು ತಮ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದರು. ಬಳಿಕ ಹೈಕೋರ್ಟ್‌ಗೆ ಮಾಹಿತಿ ರವಾನಿಸಲಾಗಿತ್ತು.
ಮನೆಯಲ್ಲಿ ಬೆಂಕಿ ಹೊತ್ತಿಕೊಂಡ ವೇಳೆ ನ್ಯಾಯಮೂರ್ತಿ ಮನೆಯಲ್ಲಿ ಇರಲಿಲ್ಲ. ನ್ಯಾಯಾಧೀಶರು ತಮ ಮೇಲೆ ಕೇಳಿಬಂದಿರುವ ಆರೋಪಗಳನ್ನು ನಿರಾಕರಿಸಿದ್ದಾರೆ. ನನ್ನ ಮನೆಯಲ್ಲಿ ಹಣ ಪತ್ತೆಯಾಗಿದೆ ಎಂಬ ಆರೋಪ ಸುಳ್ಳು ಮತ್ತು ಅಪಪ್ರಚಾರ. ಇದೊಂದು ಪಿತೂರಿ. ಸ್ಟೋರ್‌ರೂಮ್‌ನಲ್ಲಿ ಹಣ ಸಂಗ್ರಹಿಸಿದ್ದೆವು ಎಂಬುದೇ ಅಸಂಬದ್ಧ ಎಂದು ಹೇಳಿದ್ದಾರೆ.