ಚಿಕ್ಕಮಗಳೂರು, ಏ.5- ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮದುವೆ ಮಂಟಪದಲ್ಲಿ ಮತದಾನ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಪಂಚಾಯಿತಿಯ ಸಿಇಒ ಡಾ. ಗೋಪಾಲ್ ಕೃಷ್ಣ ಇಲ್ಲಿನ ಜಿಲ್ಲಾ ಪಂಚಾಯಿತಿ ಮುಂಭಾಗದಲ್ಲಿರುವ ಕನಕ ಭವನ ಕಲ್ಯಾಣ ಮಂಟಪಕ್ಕೆ ಭೇಟಿ ನೀಡಿ, ವಧು ವರರಾದ ಕಾವ್ಯ ಮತ್ತು ರಾಜೇಶ್ ಅವರಿಗೆ ಮದುವೆಯ ಶುಭಾಶಯ ಕೋರಿ, ಏ.26 ರಂದು ನಡೆಯುವ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವಂತೆ ಹಾಗೂ ಮತದಾನದ ಮಹತ್ವದ ಕುರಿತು ತಿಳಿಸಿದರು.
ಕಲ್ಯಾಣ ಮಂಟಪದಲ್ಲಿ ಮದುವೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರಿಗೂ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡುವಂತೆ ತಿಳಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಮಂಜುನಾಥ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.