ಬೆಂಗಳೂರು, ನ.20- ರಾಜ್ಯ ಚುನಾವಣಾ ಆಯೋಗ ಘೋಷಿಸಿರುವ ವೇಳಾಪಟ್ಟಿಯಂತೆ ವಿವಿಧ ಕಾರಣಗಳಿಂದ ತೆರವಾಗಿದ್ದ ರಾಜ್ಯದ ವಿವಿಧ ನಗರ ಸ್ಥಳೀಯ ಸಂಸ್ಥೆಗಳ 43 ವಾರ್ಡ್‌ಗಳ ಸದಸ್ಯ ಸ್ಥಾನಗಳಿಗೆ ನವೆಂಬರ್ 23ರಂದು ಉಪ ಚುನಾವಣೆಯ ಮತದಾನ ನಡೆಯಲಿದೆ.
ಬೆಳಿಗ್ಗೆ 7ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ನ.26ರಂದು ಮತ ಎಣಿಕೆ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ.ಬೆಂಗಳೂರಿನ ಹೆಬ್ಬಗೋಡಿ, ಚಂದಾಪುರ, ಚಿತ್ರದುರ್ಗ, ಚಳ್ಳಕೆರೆ, ಅರಸೀಕರೆ, ನಿಪ್ಪಾಣಿ, ಇಳಕಲ್, ಶಹಾಬಾದ್, ರಾಯಚೂರು, ಸಿಂಧನೂರು, ಕೊಪ್ಪಳ ನಗರಸಭೆಗಳಲ್ಲಿ ತೆರವಾಗಿದ್ದ ವಾರ್ಡ್‌ಗಳ ಸದಸ್ಯ ಸ್ಥಾನಗಳಿಗೆ ಮತದಾನ ನಡೆಯಲಿದೆ.
ಆನೇಕಲ್, ಶಿಕಾರಿಪುರ, ಶಿರಾಳಕೊಪ್ಪ, ಬಂಟ್ವಾಳ, ಸಂಕೇಶ್ವರ, ಲಕ್ಷ್ಮೀಶ್ವರ, ಅಂಕೋಲ, ಅಫ್‌ಜಲಪುರ, ಮಸ್ಕಿ, ಕಾರಟಗಿ ಪುರಸಭೆಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ ವಾರ್ಡ್‌ಗಳ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ನಾಯಕನಹಟ್ಟಿ, ಜಗಳೂರು, ಸರಗೂರು, ಆಲೂರು, ಯಳಂದೂರು, ಹನೂರು, ಬೀಳಗಿ, ಕಲಘಟಗಿ, ನಾಗನೂರು, ಯಲ್ಲಾಪುರ, ಹಟ್ಟಿ, ಪಂಚಾಯ್ತಿಗಳಲ್ಲಿ ತೆರವಾಗಿರುವ ವಾರ್ಡ್‌ಗಳ ಸದಸ್ಯ ಸ್ಥಾನಗಳಿಗೆ ನ.23ರಂದು ಮತದಾನ ನಡೆಯಲಿದೆ.
ದಾವಣಗೆರೆ, ವಿಜಯಪುರ ಮಹಾನಗರ ಪಾಲಿಕೆಗಳ ತಲಾ ಒಂದು ವಾರ್ಡ್‌ನ ಉಪ ಚುನಾವಣೆಗೆ ಅಂದೇ ಮತದಾನ ನಡೆಯಲಿದೆ.ಮತದಾರರು ಮತದಾನ ಮಾಡಲು ಅನುಕೂಲವಾಗುವಂತೆ ಉಪ ಚುನಾವಣೆ ನಡೆಯುವ ಆಯಾ ನಗರ ಸ್ಥಳೀಯ ಸಂಸ್ಥೆಯ ಆಯಾ ವಾರ್ಡಿನ ವ್ಯಾಪ್ತಿಯಲ್ಲಿರುವ ಎಲ್ಲಾ ಕಚೇರಿ, ಶಾಲಾ-ಕಾಲೇಜುಗಳಿಗೆ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಅಂದು ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ಅಲ್ಲದೆ, ದಿನಗೂಲಿ ನೌಕರರು, ಖಾಸಗಿ ಸಂಸ್ಥೆ ಹಾಗೂ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೂ ವೇತನ ಸಹಿತಿ ರಜೆ ನೀಡಲಾಗಿದೆ.
ಗ್ರಾಮ ಪಂಚಾಯ್ತಿಗಳಿಗೆ ಉಪ ಚುನಾವಣೆ : ರಾಜ್ಯದ 31ಜಿಲ್ಲೆಗಳೂ 195 ತಾಲ್ಲೂಕುಗಳ 531 ಗ್ರಾಮ ಪಂಚಾಯ್ತಿಗಳ 641 ಸದಸ್ಯ ಸ್ಥಾನಗಳಿಗೂ ನ.23ರಂದೇ ಮತದಾನ ನಡೆಯಲಿದೆ. ನ.26ರಂದು ಮತ ಎಣಿಕೆ ನಡೆದು ಅಂದೇ ಫಲಿತಾಂಶ ಪ್ರಕಟವಾಗಲಿದೆ.