ನವದೆಹಲಿ,ಆ.19- ಮುಂದಿನ ಸೆ.19 ರಂದು ನಡೆಯುವ ಉಪರಾಷ್ಟ್ರಪತಿ ಚುನಾವಣೆಗೆ ಪ್ರತಿಪಕ್ಷಗಳ ನೇತೃತ್ವದ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸುದರ್ಶನ್ ರೆಡ್ಡಿ ಅವರು ಅಭ್ಯರ್ಥಿಯಾಗಿದ್ದಾರೆ.
ಇದರಿಂದಾಗಿ ದೇಶದ 2ನೇ ಅತೀ ಉನ್ನತ ಹುದ್ದೆಯಾದ ಉಪರಾಷ್ಟ್ರಪತಿ ಆಯ್ಕೆಗೆ ಚುನಾವಣೆ ನಡೆಯಲು ವೇದಿಕೆ ಬಹುತೇಕ ಸಿದ್ಧಗೊಂಡಂತಾಗಿದೆ.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಇಂಡಿಯಾ ಮೈತ್ರಿಕೂಟಗಳ ಸಭೆಯಲ್ಲಿ ಸುಪ್ರೀಂಕೋರ್ಟ್‌ನ ಮಾಜಿ ನ್ಯಾಯಾಧೀಶರಾಗಿರುವ ಸುದರ್ಶನ್ ರೆಡ್ಡಿ ಅವರನ್ನು ಕಣಕ್ಕಿಳಿಸಲು ಸಭೆ ಒಮತದ ತೀರ್ಮಾನವನ್ನು ಕೈಗೊಂಡಿತು.
ಇನ್ನೊಂದು ವಿಶೇಷವೆಂದರೆ ಈ ಬಾರಿಯ ಉಪರಾಷ್ಟ್ರಪತಿ ಚುನಾವಣೆ ದಕ್ಷಿಣ ಭಾರತದ ಇಬ್ಬರು ಅಭ್ಯರ್ಥಿಗಳ ನಡುವೆ ನಡೆಯುತ್ತಿರುವುದು ವಿಶೇಷವಾಗಿದೆ.ಈಗಾಗಲೇ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಮಹಾರಾಷ್ಟ್ರದ ಹಾಲಿ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಅವರನ್ನು ಕಣಕ್ಕಿಳಿಸಲಾಗಿದೆ.
ಈವರೆಗೂ ಪ್ರತಿಪಕ್ಷಗಳು ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಅವಿರೋಧವಾಗಿ ಆಯ್ಕೆ ಮಾಡಲು ಬೆಂಬಲ ನೀಡಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಇಂಡಿಯಾ ಕೂಟ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಚುನಾವಣಾ ಕಾವು ರಂಗೇರುವಂತೆ ಮಾಡಿದೆ.