Thursday, November 21, 2024
Homeರಾಜ್ಯವಾಲೀಕಿ ಅಭಿವೃದ್ಧಿ ನಿಗಮದ 87 ಕೋಟಿ ಲಪಟಾಯಿಸಲು ನಡೆದಿತ್ತೇ ಸಂಚು..?

ವಾಲೀಕಿ ಅಭಿವೃದ್ಧಿ ನಿಗಮದ 87 ಕೋಟಿ ಲಪಟಾಯಿಸಲು ನಡೆದಿತ್ತೇ ಸಂಚು..?

ಬೆಂಗಳೂರು, ಮೇ 29- ವಾಲ್ಮೀಕಿ ಅಭಿವೃದ್ದಿ ನಿಗಮದ ಹಣ ವರ್ಗಾವಣೆ ಪ್ರಕರಣದಲ್ಲಿ 87 ಕೋಟಿ ರೂ.ಗಳನ್ನು ಲಪಟಾಯಿಸುವ ಸಂಚು ನಡೆದಿತ್ತೇ ಎಂಬ ಶಂಕೆಯ ಕುರಿತು ಚರ್ಚೆಗಳು ಆರಂಭಗೊಂಡಿವೆ.

ಆತಹತ್ಯೆಗೆ ಶರಣಾದ ನಿಗಮದ ಅಧೀಕ್ಷಕ ಚಂದ್ರಶೇಖರನ್‌ ಪಿ. ಅವರ ಮರಣ ಹೇಳಿಕೆಯ ಪತ್ರ ಹಾಗೂ ಸಚಿವರು ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಪ್ರಯಾಸದಿಂದ ಪ್ರಸ್ತಾಪಿಸಿದ ಕೆಲ ವಿಚಾರಗಳು ಹಣಕಾಸಿನ ಅವ್ಯವಹಾರದ ಕುರಿತು ಗುಮಾನಿ ಹೆಚ್ಚಿಸಿವೆ. ಚಂದ್ರಶೇಖರನ್‌ ಅವರ ಆತಹತ್ಯೆಯಾಗದೇ ಇದ್ದರೆ ನಿಗಮದ ಕೋಟ್ಯಂತರ ರೂಪಾಯಿಗಳು ನಿರಾಯಾಸವಾಗಿ ಅನ್ಯರ ಪಾಲಾಗಬಹುದಿತ್ತೇನೋ? ಎಂಬ ಶಂಕೆಗಳು ಕೇಳಿಬರಲಾರಂಭಿಸಿವೆ.

ಈ ಮೊದಲು ಅಂತಾರಾಷ್ಟ್ರೀಯ ಹ್ಯಾಕರ್‌ ಶ್ರೀಕಿ ರಾಜ್ಯಸರ್ಕಾರದ ಇ-ಪ್ರೊಕ್ಯೂರೆಂಟ್‌ ಖಾತೆಗೆ ಕನ್ನ ಹಾಕಿ ಕೋಟ್ಯಂತರ ರೂ.ಗಳನ್ನು ಲಪಟಾಯಿಸಿದ್ದ. ಆತನನ್ನು ಬಂಧಿಸಿ ವಿಚಾರಣೆ ನಡೆಸಿದರೂ ಪೊಲೀಸರಿಗೆ ಹ್ಯಾಕಿಂಗ್‌ನ ಮೂಲ ಪತ್ತೆ ಮಾಡಲಾಗಿಲ್ಲ. ವಾಲೀಕಿ ಅಭಿವೃದ್ಧಿ ನಿಗಮದ ಹಣವನ್ನು ಅದೇ ರೀತಿ ಲಪಟಾಯಿಸಲು ಷಡ್ಯಂತ್ರವಾಗಿರುವ ಚರ್ಚೆಗಳಿವೆ.

ಅನ್ಯರ ಪಾಲಾದ ಚೆಕ್‌ಪುಸ್ತಕ :
ಇಡೀ ಹಗರಣ ಬೆಳಕಿಗೆ ಬರಲು ಚೆಕ್‌ಪುಸ್ತಕ ಅನ್ಯರ ಪಾಲಾಗಿದ್ದು ಮೂಲ ಕಾರಣ ಎಂದು ತಿಳಿದುಬಂದಿದೆ. ಒಂದು ವೇಳೆ ಎಲ್ಲವೂ ವ್ಯವಸ್ಥಿತವಾಗಿ ನಡೆದಿದ್ದರೆ ಹಗರಣವೇ ಬೆಳಕಿಗೆ ಬರದಂತೆ ಮುಚ್ಚಿ ಹೋಗುವ ಸಾಧ್ಯತೆಯಿತ್ತು. ಜೊತೆಗೆ ಹಂತಹಂತವಾಗಿ ಹಣ ಕಳ್ಳತನವಾಗಬಹುದಿತ್ತು ಅಥವಾ ಬ್ಯಾಂಕ್‌ ಖಾತೆಯಲ್ಲಿ ಕೊಳೆಯುತ್ತಾ ಅನುಪಯುಕ್ತವಾಗಿ ಉಳಿದುಹೋಗಬಹುದಿತ್ತು ಎನ್ನಲಾಗಿದೆ.

ಈಗಾಗಲೇ ಏಳೆಂಟು ಐಟಿ ಸೇರಿದಂತೆ ವಿವಿಧ ಕಂಪೆನಿಗಳ ಖಾತೆಗೆ ಹಣ ವರ್ಗಾವಣೆಯಾಗಿರುವುದು ಈ ಅನುಮಾನವನ್ನು ದೃಢಪಡಿಸಿದೆ.
ಮೃತ ಚಂದ್ರಶೇಖರನ್‌ ಅವರ ಮರಣಪತ್ರದ ಅನುಸಾರ ಸಚಿವರ ಮೌಖಿಕ ಆದೇಶದ ಮೇರೆಗೆ ಎಂ.ಜಿ.ರಸ್ತೆಯ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ನಿಗಮದ ಹೆಸರಿಗೆ ಮತ್ತೊಂದು ಉಪಖಾತೆ ತೆರೆಯಲಾಗಿದೆ.

ವಸಂತನಗರದ ಯೂನಿಯನ್‌ ಬ್ಯಾಂಕ್‌ ಶಾಖೆಯಲ್ಲಿನ ನಿಗಮದ ಸ್ವೆಪ್ಪಿಂಗ್‌-ಸೆಪ್‌ಔಟ್‌ ಉಳಿತಾಯ ಖಾತೆಯನ್ನು ಎಂ.ಜಿ.ರಸ್ತೆಯ ಶಾಖೆಗೆ ವರ್ಗಾಯಿಸಲು ಬ್ಯಾಂಕ್‌ ಮ್ಯಾನೇಜರ್‌ ಒಪ್ಪಿಕೊಂಡಿಲ್ಲ. ಹೀಗಾಗಿ ಎಂ.ಜಿ.ರಸ್ತೆ ಬ್ಯಾಂಕ್‌ನಲ್ಲಿ ಉಪಖಾತೆ ತೆರೆಯಲಾಗಿದೆ. ಮಾರ್ಚ್‌ 4 ರಂದು 25 ಕೋಟಿ, ಮಾರ್ಚ್‌ 6 ರಂದು 25, ಮಾ.21 ರಂದು 44 ಹಾಗೂ ರಾಜ್ಯ ಹುಜೂರ್‌ ಖಜಾನೆಯಿಂದ 43.33, ಮೇ 21 ರಂದು 50 ಕೋಟಿ ರೂ. ಸೇರಿ 137 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಲಾಗಿದೆ.

ಉಪಖಾತೆಗೆ ಸಂಬಂಧಪಟ್ಟಂತೆ ಎಂ.ಜಿ.ರಸ್ತೆಯ ಬ್ಯಾಂಕ್‌ನಿಂದ ನಿಗಮದ ಅಧೀಕ್ಷಕರಿಗೆ ಚೆಕ್‌ಪುಸ್ತಕ ಹಾಗೂ ಪಾಸ್‌‍ಪುಸ್ತಕಗಳನ್ನು ಕೊಟ್ಟಿಲ್ಲ. ಚಂದ್ರಶೇಖರನ್‌ ಅವರು ಕೆಲಸದ ಒತ್ತಡದಿಂದಾಗಿ ಇದನ್ನು ತೆಗೆದುಕೊಳ್ಳಲಾಗಿಲ್ಲ ಎಂದು ಬರೆದುಕೊಂಡಿದ್ದಾರೆ.
ಇತ್ತೀಚೆಗೆ ಎಲ್ಲಾ ವ್ಯವಹಾರಗಳು ಆನ್‌ಲೈನ್‌ ಬ್ಯಾಂಕಿಂಗ್‌ನಲ್ಲೇ ನಡೆಯುವುದರಿಂದಾಗಿ ಚೆಕ್‌ ಪುಸ್ತಕದ ಅವಶ್ಯಕತೆಯೂ ಇರಲಿಲ್ಲ ಎಂದು ಹೇಳಿದ್ದಾರೆ.

ಹಣ ವರ್ಗಾವಣೆಯನ್ನು ಒತ್ತಾಯಪೂರ್ವಕವಾಗಿ ಮಾಡಿಸಲಾಗಿತ್ತು. ಇದರ ಒಳಸಂಚು ತಮಗೆ ಅರಿವಾಗಲೇ ಇಲ್ಲ. ಎಂ.ಜಿ.ರಸ್ತೆಯ ಖಾತೆಯಲ್ಲಿನ ಹಣದ ಲೆಕ್ಕಾಚಾರಗಳನ್ನು ಕೇಳಿದಾಗ ಅದನ್ನು ವ್ಯವಸ್ಥಾಪಕ ನಿರ್ದೇಶಕರಿಗೆ ಕೊಡಲು ಮಾತ್ರ ಅವಕಾಶವಿದೆ ಎಂದು ಬ್ಯಾಂಕ್‌ ಮ್ಯಾನೇಜರ್‌ ತಿಳಿಸಿದ್ದರು.

ವ್ಯವಸ್ಥಾಪಕ ನಿರ್ದೇಶಕರ ಪತ್ರದೊಂದಿಗೆ ಬರುತ್ತೇನೆ ಎಂದು ತಾವು ಹೇಳಿದಾಗ, ನಾನೇ ನಿಮ ನಿಗಮದ ಕಚೇರಿಗೆ ಬರುತ್ತೇನೆ ಎಂದು ಬ್ಯಾಂಕ್‌ ಮ್ಯಾನೇಜರ್‌ ಹೇಳಿದ್ದರು ಎಂದು ವಿವರಿಸಿದ್ದಾರೆ.

ನಿಗಮದ ಕಚೇರಿಗೆ ಬಂದ ಬ್ಯಾಂಕ್‌ ಮ್ಯಾನೇಜರ್‌, ಖಾತೆಯ ಚೆಕ್‌ಪುಸ್ತಕ ಹಾಗೂ ಪಾಸ್‌‍ಪುಸ್ತಕಗಳನ್ನು ವಿತರಿಸಲಾಗಿದೆ ಎಂದು ಹೇಳಿದ್ದಾರೆ. ಇದು ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಅಧೀಕ್ಷಕರು ಮತ್ತು ಲೆಕ್ಕಾಧಿಕಾರಿಗಳನ್ನು ದಂಗುಬಡಿಸಿದೆ.
ನಾವ್ಯಾರೂ ಪಾಸ್‌‍ಪುಸ್ತಕವನ್ನಾಗಲೀ, ಚೆಕ್‌ಪುಸ್ತಕವನ್ನಾಗಲಿ ತೆಗೆದುಕೊಂಡಿಲ್ಲ ಎಂದು ನಿಗಮದ ಸಿಬ್ಬಂದಿಗಳು ಹಲವು ಸುತ್ತಿನ ಪರಿಶೀಲನೆ ಬಳಿಕ ಖಚಿತಪಡಿಸಿದ್ದಾರೆ. ಯಾವುದೋ ಗೋಲ್‌ಮಾಲ್‌ ನಡೆಯುತ್ತಿದೆ ಎಂದು ಅನುಮಾನಗೊಂಡು ನಿಗಮದ ಮೂವರು ಅಧಿಕಾರಿಗಳು ಮೇ 23 ರಂದು ಯೂನಿಯನ್‌ ಬ್ಯಾಂಕ್‌ನ ಪ್ರಾದೇಶಿಕ ಮುಖ್ಯಸ್ಥರನ್ನು ಭೇಟಿ ಮಾಡಿ ದೂರು ನೀಡಿದ್ದಾರೆ.

ಆಗ ವ್ಯವಸ್ಥಾಪಕ ನಿರ್ದೇಶಕರಿಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರ ಸಿಬ್ಬಂದಿ ನಾಗರಾಜ್‌ ಕರೆ ಮಾಡಿ, ಎಲ್ಲಾ ಮೊತ್ತ ವಾಪಸ್‌‍ ಬಂದೇ ಬರುತ್ತದೆ. ಆವರೆಗೂ ವಿಷಯವನ್ನು ಗೌಪ್ಯವಾಗಿಡಿ ಎಂದು ಸೂಚನೆ ನೀಡಿದ್ದರಂತೆ. ಅದರಂತೆ ಅಂದು ಸಂಜೆ 5 ಕೋಟಿ ರೂ.ಗಳು ನಿಗಮದ ಬ್ಯಾಂಕ್‌ ಖಾತೆಗೆ ಮರಳಿ ಬಂದಿವೆ.

ಇಲ್ಲಿ ಮೂಲಪ್ರಶ್ನೆ ಇರುವುದು ನಿಗಮದ ಬ್ಯಾಂಕ್‌ ಉಪಖಾತೆಯ ಪಾಸ್‌‍ಬುಕ್‌ ಮತ್ತು ಚೆಕ್‌ಪುಸ್ತಕಗಳನ್ನು ಅನಾಮಧೇಯ ವ್ಯಕ್ತಿಗಳು ಪಡೆದುಕೊಂಡಿದ್ದು ಹೇಗೆ? ಎಂಬುದು.
ಚಂದ್ರಶೇಖರನ್‌ ಅವರು ತಮ ಮರಣಪತ್ರದಲ್ಲಿ ತಾವು ಯಾವುದೇ ತಪ್ಪು ಮಾಡಿಲ್ಲ, ನಿಗಮಕ್ಕೆ ಮೋಸ, ವಂಚನೆ ಮಾಡಿಲ್ಲ. ಈ ಹಗರಣದಲ್ಲಿ ನನ್ನ ಪಾತ್ರ ಇಲ್ಲ. ಕೆಲಸದ ಒತ್ತಡದಿಂದಾಗಿ ಚೆಕ್‌ಪುಸ್ತಕ ಮತ್ತು ಪಾಸ್‌‍ಪುಸ್ತಕಗಳನ್ನು ತೆಗೆದುಕೊಳ್ಳದೇ ಇರುವುದೇ ನನ್ನ ದೊಡ್ಡ ಲೋಪವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ನಾನು ಹೇಡಿ ಅಲ್ಲ, ಆದರೆ ಅವಮಾನ ಸಹಿಸಲಾರೆ, ನನಗೆ ಬೇರೆ ದಾರಿ ತೋಚುತ್ತಿಲ್ಲ ಎಂದು ಉಲ್ಲೇಖಿಸಿದ್ದಾರೆ.ಮೂಲಗಳ ಪ್ರಕಾರ, ಹಣ ವರ್ಗಾವಣೆಯಾಗಿದ್ದರ ಹಿಂದೆ ದೊಡ್ಡ ಸಂಚಿತ್ತು. ಮುಂದಿನ ದಿನಗಳಲ್ಲಿ ಅದನ್ನು ಆನ್‌ಲೈನ್‌ ವಂಚನೆಯ ಹೆಸರಿನಲ್ಲಿ ಕಬಳಿಸುವ ಹುನ್ನಾರ ಅಡಗಿತ್ತು ಎನ್ನಲಾಗಿದೆ.

ಸದ್ಯದ ಪರಿಸ್ಥಿತಿಯಲ್ಲಿ ಪ್ರಭಾವಿಗಳ ಆಪ್ತರಿಗೆ ಬ್ಯಾಂಕ್‌ನಿಂದ ಸಹಾಯ ಮತ್ತು ಲಾಭವಾಗಲಿದೆ ಎಂಬ ಕಾರಣಕ್ಕೆ ಹಣ ವರ್ಗಾವಣೆಯಾಗಿದೆ ಎಂದು ತಿಳಿದುಬಂದಿದೆ.ವಾಲೀಕಿ ಅಭಿವೃದ್ಧಿ ನಿಗಮದಲ್ಲಷ್ಟೇ ಅಲ್ಲ ಹಲವಾರು ನಿಗಮಗಳಲ್ಲಿ ಇದೇ ರೀತಿ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು ನಿಶ್ಚಿತ ಠೇವಣಿ ಇರಿಸಿ ಬ್ಯಾಂಕ್‌ಗಳಿಂದ ವೈಯಕ್ತಿಕ ಲಾಭ ಪಡೆದುಕೊಳ್ಳುವುದು ಹಲವಾರು ವರ್ಷಗಳಿಂದ ನಡೆದುಬಂದಿದೆ.

ಈ ಹಿಂದೆ ಎಚ್‌.ಕೆ.ಪಾಟೀಲ್‌ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರಾಗಿದ್ದಾಗ ಈ ರೀತಿಯ ಹಗರಣವನ್ನು ಪತ್ತೆ ಹಚ್ಚಿ ಕೆಲವರ ವಿರುದ್ಧ ಕ್ರಮ ಜರುಗಿಸಿದ ಉದಾಹರಣೆಗಳಿವೆ.ವಾಲೀಕಿ ಅಭಿವೃದ್ಧಿ ನಿಗಮದಲ್ಲಿ ಅಧಿಕಾರಿಗಳನ್ನಷ್ಟೇ ಹೊಣೆ ಮಾಡಿ ಪ್ರಭಾವಿಗಳು ನುಣುಚಿಕೊಳ್ಳುವ ಯತ್ನ ನಡೆಯುತ್ತಿದೆ ಎಂಬ ಟೀಕೆಗಳು ಜೋರಾಗಿವೆ.

RELATED ARTICLES

Latest News