Thursday, April 3, 2025
Homeರಾಷ್ಟ್ರೀಯ | NationalBIG NEWS : ಬಹುನಿರೀಕ್ಷಿತ ವಕ್ಫ್ ತಿದ್ದುಪಡಿ ವಿಧೇಯಕ-2024 ಲೋಕಸಭೆಯಲ್ಲಿಂದು ಮಂಡನೆ

BIG NEWS : ಬಹುನಿರೀಕ್ಷಿತ ವಕ್ಫ್ ತಿದ್ದುಪಡಿ ವಿಧೇಯಕ-2024 ಲೋಕಸಭೆಯಲ್ಲಿಂದು ಮಂಡನೆ

Waqf Amendment Bill tabled in Lok Sabha

ನವದೆಹಲಿ,ಏ.2- ಪ್ರತಿಪಕ್ಷ ಮತ್ತು ಮುಸ್ಲಿಂ ಸಂಘಟನೆಗಳ ತೀವ್ರ ವಿರೋಧದ ನಡುವೆಯೂ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಬಹುನಿರೀಕ್ಷಿತ ವಕ್ಫ್ ತಿದ್ದುಪಡಿ ವಿಧೇಯಕ-2024 ಅನ್ನು ಲೋಕಸಭೆಯಲ್ಲಿಂದು ಮಂಡನೆಯಾಯಿತು.

ಪ್ರಧಾನಿ ನರೇಂದ್ರಮೋದಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದ ವಕ್ಫ್ ತಿದ್ದುಪಡಿ ವಿಧೇಯಕ -2024 ಲೋಕಸಭೆಯಲ್ಲಿ ಅಂಗೀಕಾರವಾಗುವ ಸಾಧ್ಯತೆ ಇದ್ದು, ರಾಜ್ಯ ಸಭೆಯಲ್ಲಿ ಅಂಗೀಕಾರವಾಗುವುದಷ್ಟೇ ಬಾಕಿ ಇದೆ. ಮಸೂದೆಯ ಪರವಾಗಿ 293, ವಿರುದ್ಧವಾಗಿ 250 ಸದಸ್ಯರು ಮತ ಚಲಾಯಿಸಲಿದ್ದಾರೆ. ನಾಳೆ ರಾಜ್ಯ ಸಭೆಯಲ್ಲೂ ಈ ವಿಧೇಯಕವನ್ನು ಮಂಡನೆಯಾಗಲಿದ್ದು, ಮೈತ್ರಿ ಪಕ್ಷಗಳ ನೆರವಿನಿಂದ ಮೇಲ್ಮನೆಯಲ್ಲೂ ಅಂಗೀಕಾರ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿ ಎನ್‌ಡಿಎ ಇದೆ.

ಒಂದು ವೇಳೆ ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರವಾದರೆ ನಂತರ ರಾಷ್ಟ್ರಪತಿಗಳ ಸಹಿಗೆ ಕಳುಹಿಸಿಕೊಡಲಿದ್ದು, ಬಳಿಕ ಕಾನೂನಾಗಿ ಮಾರ್ಪಡಲಿದೆ. ನಿಗದಿಯಂತೆ ಲೋಕಸಭೆಯಲ್ಲಿ ಮಧ್ಯಾಹ್ನ 12 ಗಂಟೆಗೆ ಕೇಂದ್ರ ಅಲ್ಪಸಂಖ್ಯಾತ ಕಲ್ಯಾಣ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜುಜು ಅವರು ವಿಧೇಯಕವನ್ನು ಮಂಡನೆ ಮಾಡಿದರು.

ಈ ವೇಳೆ ಪ್ರತಿ ಪಕ್ಷದ ಸದಸ್ಯರೊಬ್ಬರು ಕ್ರಿಯಾಲೋಪ ಎತ್ತಿ ಸ್ಪಷ್ಟನೆ ಬಯಸಿದರು. ಇದಕ್ಕೆ ದನಿಗೂಡಿಸಿದ ಕಾಂಗ್ರೆಸ್‌ ಕೆ.ಸಿ.ವೇಣುಗೋಪಾಲ್ ಅವರು ಸರ್ಕಾರ ಬೇರೆ ಬೇರೆ ರಾಜ್ಯಗಳಿಗೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮನೆಗಳ ಮೇಲೆ ಬುಲ್ಡೋಜರ್ ಹತ್ತಿಸಿದಂತೆ ಶಾಸಕಾಂಗದ ಮೇಲೂ ಬುಲ್ಲೋಜರ್ ಪ್ರಯೋಗ ಮಾಡಲು ಕೇಂದ್ರ ಮುಂದಾಗಿದೆ ಎಂದು ವಾಗ್ದಾಳಿ ನಡೆಸಿದರು.

ಇದಕ್ಕೆ ತಿರುಗೇಟು ಕೊಟ್ಟ ಕೇಂದ್ರ ಗೃಹಸಚಿವ ಅಮಿತ್ ಶಾ.ನಾವು ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಂಡಿಲ್ಲ. ವಿಧೇಯಕ ಮಂಡನೆಗೂ ಮುನ್ನ ಎಲ್ಲಾ ಪಕ್ಷಗಳನ್ನು ಒಳಗೊಂಡ ಜಂಟಿ ಸದನ ಸಮಿತಿಯನ್ನು ರಚನೆ ಮಾಡಲಾಗಿತ್ತು. ಎಲ್ಲಾ ರಾಜ್ಯಗಳ ಅಭಿಪ್ರಾಯವನ್ನು ಸಹ ಕೇಳಲಾಗಿತ್ತು.

ಕೆಲವರು ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಕೆಲವರು ಯಾರದೋ ನಿರ್ದೇಶನಕ್ಕಾಗಿ ಅಭಿಪ್ರಾಯವನ್ನು ಹಂಚಿಕೊಂಡಿಲ್ಲ, ಮಸೂದೆಯಿಂದ ಯಾವುದೇ ಸಮುದಾಯಕ್ಕೂ ಅನ್ಯಾಯವಾಗುವುದಿಲ್ಲ. 70 ವರ್ಷದಿಂದ ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ಲಾಲಿಪ್ ಕೊಡುತ್ತಾ ಬಂದಿದೆ. ಈಗ ಆ ಸಮುದಾಯ ಜಾಗೃತಗೊಂಡಿದ್ದು, ಎಲ್ಲಿ ತಮ್ಮ ಮತ ಬ್ಯಾಂಕ್ ಕೈತಪ್ಪಿ ಬಿಡಬಹುದೆಂಬ ಆತಂಕದಿಂದ ಕಾಂಗ್ರೆಸ್ ದಿಕ್ಕು ತಪ್ಪಿಸಲು ಹೊರಟಿದೆ ಎಂದು ಆಕ್ರೋಶ ಹೊರಹಾಕಿದರು.

ಮಸೂದೆ ಮೇಲೆ ಸುಧೀರ್ಘವಾಗಿ ಮಾತನಾಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, 25 ರಾಜ್ಯಗಳ ವಕ್ಸ್ ಬೋರ್ಡ್ ಅಭಿಪ್ರಾಯವನ್ನು ನಾವು ಸಂಗ್ರಹಿಸಿದ್ದೇವೆ. ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯ ಎರಡೂ ಸದನಗಳ ಸದಸ್ಯರನ್ನು ನಾನು ಅಭಿನಂದಿಸಲು ಬಯಸುತ್ತೇನೆ. ಒಟ್ಟಾರೆಯಾಗಿ 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಕ್ಫ್ ಮಂಡಳಿಗಳ 284 ನಿಯೋಗಗಳು ಜೆಪಿಸಿಯಲ್ಲಿ ತಮ್ಮ ವಾದಗಳನ್ನು ಮಂಡಿಸಿದ್ದವು.

ಅವುಗಳನ್ನು ಪರಿಗಣಿಸಿಯೇ ಮಸೂದೆಯನ್ನು ರಚಿಸಲಾಗಿದೆ ಎಂದು ಸಮರ್ಥಿಸಿಕೊಂಡರು. ಈ ವೇಳೆ ಸಿಟ್ಟಿಗೆದ್ದ ಪ್ರತಿಪಕ್ಷ ನಾಯಕರು ಮೋದಿ ಸರ್ಕಾರ ಸಾಂವಿಧಾನಿಕ ನಿಯಮಗಳನ್ನು ಉಲ್ಲಂಘಿಸುತ್ತಿದೆ. ಸಮಗ್ರ ಚರ್ಚೆಗೆ ಅವಕಾಶ ಕೊಡದೇ ಮಸೂದೆ ಮಂಡಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದರು.

ಇನ್ನು ಆಡಳಿತ ಪಕ್ಷದ ಪರವಾಗಿ ಸಚಿವ ಅಮಿತ್ ಶಾ, ಸದಸ್ಯರಾದ ರವಿಶಂಕರ್ ಪ್ರಸಾದ್, ತೇಜಸ್ವಿ ಸೂರ್ಯ, ಅನುರಾಗ್ ಠಾಕೂರ್, ಸಂಬಿತ್ ಪಾತ್ರ, ಜಗದಾಂಬಿಕ ಪಾಲ್, ನಿತೀಶ್ ಚೌಧರಿ, ನಿಶಿಕಾಂತ್ ದುಬೆ, ಅಭಿಷೇಕ್ ಗಂಗೂಲಿ, ಸ್ಥಿತಾ ಉದಯ್ ವಾಗ್, ಕಮಲ್‌ಜಿತ್ ಶರಾವತ್ ಹಾಗೂ ಜೆಡಿಯುನಿಂದ ಲಲನ್ ಸಿಂಗ್, ಟಿಡಿಪಿ ಸೇರಿದಂತೆ ಮತ್ತಿತರರು ಮಾತಾಡಿದರು.

ಪ್ರತಿಪಕ್ಷದ ಪರವಾಗಿ ಮೊದಲು ಲೋಕಸಭೆಯ ಕಾಂಗ್ರೆಸ್ ಉಪನಾಯಕ ತರುಣ್ ಗೋಗಯ್ ಮಾತನಾಡಿ, ಕೇಂದ್ರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಒಂದು ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಈ ವಿಧೇಯಕ ಜಾರಿ ಮಾಡಲಾಗಿದೆ. ಇಂದು ವಕ್ಸ್ ವಿಧೇಯಕ ಜಾರಿ ಮಾಡದವರು. ನಾಳೆ ಮುಸ್ಲಿಂ ಸಮುದಾಯ ಮಸೀದಿಗಳಲ್ಲಿ ಪ್ರಾರ್ಥನೆ ಮಾಡಬಾರದೆಂಬ ನಿಯಮವನ್ನು ಜಾರಿ ಮಾಡುತ್ತೀರಾ ಎಂದು ಪ್ರಶ್ನಿಸಿದರು.

ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯಿತು.ವಿಧೇಯಕದ ಮೇಲೆ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು 8 ಗಂಟೆ ಸಮಯವನ್ನು ನಿಗದಿಪಡಿಸಿದ್ದರು. ಆಡಳಿತ ಪಕ್ಷಕ್ಕೆ 5 ಗಂಟೆ ಹಾಗೂ ಪ್ರತಿಪಕ್ಷಗಳಿಗೆ 5 ಗಂಟೆ ಸಮಯವನ್ನು ನಿಗದಿಪಡಿಸಲಾಗಿತ್ತು. ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿ ಕೂಟ ವಿಧೇಯಕದ ವಿರುದ್ಧ ಮತ ಚಲಾಯಿಸಲು ತೀರ್ಮಾನಿಸಿವೆ.

ಲೋಕಸಭೆಯಲ್ಲಿ ಎನ್‌ಡಿಎ ಸ್ಪಷ್ಟ ಬಹುಮತ ಹೊಂದಿದ್ದರಿಂದ ವಿಧೇಯಕ ಅಂಗೀಕಾರವಾಗಲು ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಬಿಜೆಪಿ ಮೈತ್ರಿಕೂಟದ ಪ್ರಮುಖ ಪಕ್ಷಗಳಾದ ಟಿಡಿಪಿ, ಜೆಡಿಯು, ಶಿವಸೇನೆ(ಏಕನಾಥ್ ಶಿಂಧೆ ಬಣ), ಎಲ್‌ ಜೆಪಿ, ಪವನ್ ಕಲ್ಯಾಣ ನೇತೃತ್ವದ ಜನಸೇನ, ಜೆಡಿಎಸ್, ಎನ್ ಸಿಪಿ ಸೇರಿದಂತೆ ಹಲವು ಪಕ್ಷಗಳು ಬೆಂಬಲ ಸೂಚಿಸಿವೆ.

ವಿಧೇಯಕ ಮಂಡನೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರಿಗೆ ಸದನದಲ್ಲಿ ಕಡ್ಡಾಯವಾಗಿ ಹಾಜರರಿಬೇಕೆಂದು ವಿಪ್ ಜಾರಿ ಮಾಡಲಾಗಿತ್ತು.ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ, ಸಮಾಜವಾಧಿ ಪಕ್ಷದ ಮುಲಾಯಂಸಿಂಗ್ ಯಾದವ್, ಎಐಎಡಿಎಂಕೆ ಕನಿ ಮೌಳಿ, ಅಸಾವುದ್ದೀನ್ ಓವೈಸಿ ಪ್ರತಿಪಕ್ಷಗಳ ಪರವಾಗಿ ಸರ್ಕಾರದ ಕ್ರಮವನ್ನು ಖಂಡಿಸಿದರು.

ವಕ್ಫ್ ಮಸೂದೆ ಎಂದರೇನು:
ವಕ್ಸ್ (ತಿದ್ದುಪಡಿ) ಮಸೂದೆ 2024, 1995ರ ವಕ್ಸ್ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮಸೂದೆಯಾಗಿದೆ. ವಕ್ಫ್ ಆಸ್ತಿಗಳ ನಿರ್ವಹಣೆ, ಪಾರದರ್ಶಕತೆ ಮತ್ತು ದುರುಪಯೋಗ ತಡೆಗಟ್ಟುವಿಕೆಗಾಗಿ ನಿಯಮಗಳನ್ನು ಬಿಗಿಗೊಳಿಸುವುದು ಇದರ
ಉದ್ದೇಶವಾಗಿದೆ.

ಇದು ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರು ಮತ್ತು ಮಹಿಳಾ ಸದಸ್ಯರನ್ನು ಸೇರಿಸುವುದು, ಕಲೆಕ್ಟರ್ಗೆ ಆಸ್ತಿಯನ್ನು ಸಮೀಕ್ಷೆ ಮಾಡುವ ಹಕ್ಕು ನೀಡುವುದು ಮತ್ತು ವಕ್ಸ್ ನ್ಯಾಯಮಂಡಳಿಯ ನಿರ್ಧಾರಗಳನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸುವ ನಿಬಂಧನೆಯನ್ನು ಒಳಗೊಂಡಿದೆ.

RELATED ARTICLES

Latest News