Home ಇದೀಗ ಬಂದ ಸುದ್ದಿ ವಕ್ಫ್ ಆಸ್ತಿ ಒತ್ತುವರಿ ವಿವಾದ: ಜಮೀರ್‌ ವಿರುದ್ಧ `ಕೈ’ ಆಕ್ರೋಶ

ವಕ್ಫ್ ಆಸ್ತಿ ಒತ್ತುವರಿ ವಿವಾದ: ಜಮೀರ್‌ ವಿರುದ್ಧ `ಕೈ’ ಆಕ್ರೋಶ

0
ವಕ್ಫ್ ಆಸ್ತಿ ಒತ್ತುವರಿ ವಿವಾದ: ಜಮೀರ್‌ ವಿರುದ್ಧ `ಕೈ’ ಆಕ್ರೋಶ

ಬೆಂಗಳೂರು,ನ.3- ವಕ್ಫ್ ಆಸ್ತಿ ಒತ್ತುವರಿ ವಿಚಾರವಾಗಿ ಸಚಿವ ಜಮೀರ್‌ ಅಹಮದ್‌ ಖಾನ್‌ ವಿರುದ್ಧ ಸ್ವಪಕ್ಷೀಯರೇ ಆಕ್ರೋಶ ವ್ಯಕ್ತಪಡಿಸ ಲಾರಂಭಿಸಿದ್ದಾರೆ. ಜನಾಕ್ರೋಶದಿಂದ ಕಾಂಗ್ರೆಸ್‌‍ಗೆ ಮುಳುವಾಗಲಿದೆ ಎಂಬ ಸೂಚನೆ ಅರಿತ ಕಾಂಗ್ರೆಸಿಗರು ಒಬ್ಬರ ನಂತರ ಒಬ್ಬರು ಜಮೀರ್‌ ವಿರುದ್ಧ ಆಕ್ಷೇಪ ಎತ್ತುತ್ತಿದ್ದಾರೆ.

ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಮಾತನಾಡಿ, ಮುಖ್ಯಮಂತ್ರಿ ಯವರು ಕಾನೂನು ಬಾಹಿರವಾದ ಯಾವುದೇ ಸೂಚನೆಗಳನ್ನು ನೀಡುವುದಿಲ್ಲ. ಆದರೆ ವಕ್‌್ಫ ಸಚಿವರಾಗಿರುವ ಜಮೀರ್‌ ಅಹಮದ್‌ ಖಾನ್‌ ಸಿಎಂ ಹೆಸರು ಬಳಸಿಕೊಂಡು ನಿಯಮ ಬಾಹಿರವಾಗಿ ಖಾತೆಗಳನ್ನು ಬದಲಾವಣೆ ಮಾಡಿ ಎಂದು ಹೇಳುತ್ತಿರುವುದು ತಪ್ಪು. ಈ ಸೂಚನೆಗಳನ್ನು ಅಧಿಕಾರಿಗಳು ಪಾಲಿಸುತ್ತಿರುವುದು ಕೂಡ ಸರಿಯಲ್ಲ ಎಂದಿದ್ದಾರೆ.

ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದು ಮಾಡಲು ಯಾರು ಕಾರಣಕರ್ತರು ಎಂಬುದನ್ನು ತನಿಖೆ ಮಾಡಿ ಕ್ರಮ ಕೈಗೊಳ್ಳುವಂತೆ ತಾವು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಒತ್ತಾಯಿಸುವುದಾಗಿ ತಿಳಿಸಿದರು. ಒಂದು ವೇಳೆ ಬಿಜೆಪಿಯವರೇ ವಕ್ಫ್ ಆಸ್ತಿ ಎಂದು ಪಹಣಿಯಲ್ಲಿ ನಮೂದಿಸಿ ಉದ್ದೇಶಪೂರ್ವಕವಾಗಿಯೇ ರಾಜಕೀಯ ಮಾಡುತ್ತಿರಬಹುದು ಎಂಬ ಅನುಮಾನವನ್ನು ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮಾಯಿ ವಕ್ಫ್ ಆಸ್ತಿ ಒತ್ತುವರಿ ತೆರವಿಗೆ ಬೆಂಬಲ ನೀಡಿದ್ದಾರೆ. ಕೇವಲ ನೋಟಿಸ್‌‍ ನೀಡುವುದರಿಂದ ಒತ್ತುವರಿ ತೆರವಾಗುವುದಿಲ್ಲ. ಅವರ ಅವಧಿಯಲ್ಲಿ ಈ ವಿಚಾರವಾಗಿ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು. ವಿನ್ಸರ್‌ಮ್ಯಾನರ್‌ನ ಆಸ್ತಿಯನ್ನು ಗಮನದಲ್ಲಿಟ್ಟುಕೊಂಡು ಕೆಲವರು ಟೀಕೆ ಮಾಡುತ್ತಿದ್ದಾರೆ. ಸದರಿ ಆಸ್ತಿಯನ್ನು ವಶಕ್ಕೆ ತೆಗೆದುಕೊಳ್ಳಲು ನೋಟಿಸ್‌‍ ನೀಡಿದಾಗ ಹೋಟೆಲ್‌ನ ಆಡಳಿತ ಮಂಡಳಿಯವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅಲ್ಲಿಂದ ತಡೆಯಾಜ್ಞೆ ತರಲಾಗಿದೆ. ಬಾಡಿಗೆ ಪರಿಷ್ಕರಣೆ ಮಾಡಿ ಹೋಟೆಲ್‌ನ್ನು ಮುಂದುವರೆಸಲಾಗಿದೆ. ಒತ್ತುವರಿ ಆಸ್ತಿಗಳನ್ನು ವಶಕ್ಕೆ ಪಡೆಯುವುದಾಗಿದ್ದರೆ ಬಿಜೆಪಿ ಅವಧಿಯಲ್ಲಿ ಯಾರಾದರೂ ಅಡ್ಡಿಪಡಿಸಿದ್ದರೇ ಎಂದು ಕೇಳಿದರು.

ರೈತರ ಜಮೀನುಗಳಿಗೆ ವಕ್‌್ಫ ಆಸ್ತಿ ಎಂದು ನಮೂದಿಸಿರುವುದರ ಹಿಂದೆ ಚಿತಾವಣೆ ನಡೆದಿದೆ ಎಂಬ ಅನುಮಾನವಿದೆ. ಯಾರ ಆದೇಶದ ಹಿಂದೆ ಇಂತಹ ತಿದ್ದುಪಡಿಗಳಾಗಿವೆ ಎಂಬ ಬಗ್ಗೆ ತನಿಖೆಯಾಗಬೇಕಿದೆ. ಆದರೆ ರೈತರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬೇಕಿಲ್ಲ. ನಮ ಸರ್ಕಾರ ರೈತರ ಹಿತರಕ್ಷಣೆಗೆ ಬದ್ದವಾಗಿದೆ ಎಂದರು. ರಾಜಕಾರಣಕ್ಕಾಗಿ ಇದನ್ನು ದುರ್ಬಳಕೆ ಮಾಡಿಕೊಳ್ಳುವುದು ವಿರೋಧ ಪಕ್ಷಗಳಿಗೆ ಸರಿಯಲ್ಲ. ಏಕಾಏಕಿ ಯಾವುದೇ ದಾಖಲೆಯು ತಿದ್ದುಪಡಿ ಆಗುವುದು ಸಾಧ್ಯವಿಲ್ಲ. ಹಿರಿಯ ಅಧಿಕಾರಿಗಳ ಸೂಚನೆಯೂ ಬೇಕಿದೆ. ಅಂತಹ ಸೂಚನೆ ನೀಡಿದ ಅಧಿಕಾರಿ ಯಾರು ಎಂಬುದು ಪತ್ತೆಯಾಗಬೇಕಿದೆ ಎಂದರು.

ರಾಜ್ಯದಲ್ಲಿ ಜಾರಿಯಾಗಿರುವ ಪಂಚ ಖಾತ್ರಿ ಯೋಜನೆಗಳು ಪರಿಷ್ಕರಣೆಯಾಗುವುದಿಲ್ಲ. ಯಥಾವತ್ತು ಮುಂದುವರೆಯಲಿವೆ ಎಂದು ರಾಜಣ್ಣ ತಿಳಿಸಿದರು. ಬಸ್‌‍ ದರವನ್ನು ಪಾವತಿಸುವವರಿಂದ ಹಣ ಪಡೆಯುವ ಬಗ್ಗೆ ಪರಿಶೀಲಿಸುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ. ಇದು ಚರ್ಚೆ ಮಾಡುವ ವಿಚಾರವಲ್ಲ. ಪಂಚ ಖಾತ್ರಿಗಳಿಗೆ 55 ಸಾವಿರ ಕೋಟಿ ರೂ.ಗಳನ್ನು ಈಗಾಗಲೇ ಬಜೆಟ್‌ನಲ್ಲಿ ನಿಗದಿಪಡಿಸಲಾಗಿದೆ. ಹೀಗಾಗಿ ಯೋಜನೆಗಳು ಯಥಾವತ್ತು ಮುಂದುವರೆಯಲಿದೆ ಎಂದರು.

ಕ್ರೆಡಿಟ್‌ ಸೊಸೈಟಿ ಮಹಾಮಂಡಲದಲ್ಲಿ ಬೇರೆ ಬೇರೆ ಸಂಘಸಂಸ್ಥೆಗಳಲ್ಲಿ ಹಣ ಠೇವಣಿ ಮಾಡಲಾಗಿದೆ ಎಂದು ತೋರಿಸಿ ಸುಮಾರು 19 ಕೋಟಿ ರೂ.ಗಳಷ್ಟು ಹಣವನ್ನು ಲಪಟಾಯಿಸಲಾಗಿದೆ. 2016-17ರಿಂದಲೂ ಇಂತಹ ಅವ್ಯವಹಾರಗಳು ನಡೆದಿವೆ. ಲೆಕ್ಕ ಪರಿಶೋಧಕರು ಈ ಬಗ್ಗೆ ನಿಯಮಗಳನ್ನು ಪಾಲನೆ ಮಾಡಿಲ್ಲ ಎಂದು ರಾಜಣ್ಣ ಆಕ್ಷೇಪಿಸಿದರು.