Thursday, December 12, 2024
Homeರಾಜ್ಯಚನ್ನಪಟ್ಟಣ - ರಾಮನಗರ ನಡುವೆ ಬೃಹತ್‌ ಕೈಗಾರಿಕೆ: 10 ಸಾವಿರ ಉದ್ಯೋಗ

ಚನ್ನಪಟ್ಟಣ – ರಾಮನಗರ ನಡುವೆ ಬೃಹತ್‌ ಕೈಗಾರಿಕೆ: 10 ಸಾವಿರ ಉದ್ಯೋಗ

ಬೆಂಗಳೂರು, ನ.3-ಹುಬ್ಬಳ್ಳಿ -ಧಾರವಾಡ ಮಾದರಿಯಲ್ಲಿ ಚನ್ನಪಟ್ಟಣ ಹಾಗೂ ರಾಮನಗರ ನಡುವೆ ಸುಮಾರು ಹತ್ತು ಸಾವಿರ ಜನರಿಗೆ ನೇರ ಉದ್ಯೋಗ ಸಿಗುವಂತಹ ಕೈಗಾರಿಕೆ ಸ್ಥಾಪನೆಗೆ ಪ್ರಯತ್ನ ಮಾಡಲಾಗುವುದು ಎಂದು ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ಅವರು ಭರವಸೆ ನೀಡಿದ್ದಾರೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಎನ್‌ಡಿಎ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಅವರ ಪರವಾಗಿ ವಿರೂಪಸಂದ್ರ ಗ್ರಾಮದಲ್ಲಿ ನಿನ್ನೆ ಪ್ರಚಾರ ಭಾಷಣ ಮಾಡಿದ ಅವರು, ಚನ್ನಪಟ್ಟಣ ಹಾಗೂ ರಾಮನಗರಗಳ ಅಭಿವೃದ್ಧಿಗೆ ಹೊಸ ಆಯಾಮ ನೀಡಲಾಗುವುದು ಎಂದು ಹೇಳಿದ್ದಾರೆ.

ಈವರೆಗೂ ನಾನು ಕೊಟ್ಟ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೇನೆ. ತಾಲ್ಲೂಕಿನ ಜನರ ಔದಾರ್ಯ ಹಾಗೂ ಮಂಡ್ಯ ಜಿಲ್ಲೆಯ ಜನರ ಆಶೀರ್ವಾದ, ಪ್ರಧಾನಿ ನರೇಂದ್ರ ಮೋದಿ ಅವರ ವಿಶ್ವಾಸ- ನಂಬಿಕೆಯಿಂದ ಕೇಂದ್ರದಲ್ಲಿ ಮಂತ್ರಿಯಾಗಿದೇನೆ. ಸಿಕ್ಕಿರುವ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ನನಗೆ ರಾಜಕೀಯ ಜನ ಕೊಟ್ಟ ಜಿಲ್ಲೆಗೆ ಒಳ್ಳೆಯದು ಮಾಡಲು ಪ್ರಯತ್ನಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಈ ಭಾಗದ ಯುವ ಜನರಿಗೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಅವಕಾಶ ದೊರಕಿಸುವ ಕೆಲಸ ಮಾಡುತ್ತೇವೆ. ಅಲ್ಲದೆ ಪರೋಕ್ಷವಾಗಿ ಸಾವಿರಾರು ಜನರಿಗೆ ಉದ್ಯೋಗ ಸಿಗುತ್ತದೆ. ಆರ್ಥಿಕತೆಗೆ ಶಕ್ತಿ ಬಂದು ಈ ಭಾಗದಲ್ಲಿ ಜನಜೀವನ ಸುಧಾರಿಸುತ್ತದೆ ಎಂದು ಸಚಿವರು ಹೇಳಿದ್ದಾರೆ.

2018ರಲ್ಲಿ ಕಾರ್ಯಕರ್ತರು ಒತ್ತಡ ಹಾಕಿ ನನ್ನನ್ನು ಚನ್ನಪಟ್ಟಣಕ್ಕೆ ಕರೆತಂದರು. ಬಳಿಕ ಎರಡು ಬಾರಿಯೂ ದೊಡ್ಡಮಟ್ಟದಲ್ಲಿ ಗೆಲ್ಲಿಸಿಕೊಟ್ಟಿದ್ದೀರಿ. ಕಳೆದ ಲೋಕಸಭಾ ಚುನಾವಣೆಯಲ್ಲಿ ಅನಿವಾರ್ಯವಾಗಿ ಮಂಡ್ಯದಲ್ಲಿ ಸ್ಪರ್ಧೆ ಮಾಡಿ ಗೆದ್ದಿದ್ದೇನೆ. ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರು ನೀರಾವರಿ ಸಚಿವರಾಗಿದ್ದಾಗ ಇಗ್ಗಲೂರು ಬಳಿ ಜಲಾಶಯ ಕಟ್ಟಿಸಿದರು. ಹಲವು ಪಕ್ಷಗಳಿಗೆ ಹೋಗಿ ಈಗ ಕಾಂಗ್ರೆಸ್‌‍ ಸೇರಿರುವ ಕಾಂಗ್ರೆಸ್‌‍ ಅಭ್ಯರ್ಥಿ ತಾಲೂಕಿಗೆ ನೀರಾವರಿ ಕೊಟ್ಟಿದ್ದು ನಾನೇ ಎನ್ನುತ್ತಿದ್ದಾರೆ. ದೇವೇಗೌಡರು ಡ್ಯಾಂ ಕಟ್ಟಲಿಲ್ಲ ಅಂದರೆ ಇವರು ಕೆರೆಗಳಿಗೆ ನೀರು ಎಲ್ಲಿ ತುಂಬಿಸುತ್ತಿದ್ದರು ಎಂದು ಅವರು ಕಿಡಿಕಾರಿದ್ದಾರೆ.

ಡಿ.ವಿ.ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದಾಗ ಚನ್ನಪಟ್ಟಣದ ಕೆರೆಗಳಿಗೆ ನೀರು ತುಂಬಿಸುವ ಉದ್ದೇಶಕ್ಕೆ ಹಣ ಬಿಡುಗಡೆ ಮಾಡಿದ್ದರು. ಅವರನ್ನು ಭಗೀರಥ ಎಂದು ಕರೆಯುವುದರಲ್ಲಿ ಅರ್ಥವಿದೆ. ಆದರೆ, ಇವರು ನಾನೇ ಭಗೀರಥ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಚನ್ನಪಟ್ಟಣದಲ್ಲಿ 85 ಕೋಟಿ ರೂ.ವೆಚ್ಚದಲ್ಲಿ ರೇಷ್ಮೆ ಮಾರುಕಟ್ಟೆ ನಿರ್ಮಾಣ ಆಗುತ್ತಿದೆ. ಮಾವಿನ ಸಂರಕ್ಷಣೆಗೆ ನೂತನ ಘಟಕ ನಿರ್ಮಾಣ ಮಾಡಲಾಗುತ್ತಿದೆ. ಸಾಕಷ್ಟು ರಸ್ತೆಗಳು, ಶಾಲೆಗಳನ್ನು ಅನುದಾನ ತಂದು ನಿರ್ಮಾಣ ಮಾಡಿದ್ದೇವೆ. ಈಗ ಅನಿವಾರ್ಯವಾಗಿ ನಿಖಿಲ್‌ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದಾರೆ. ನಿಮ ಮನೆ ಮಗನೆಂದು ತಿಳಿದು ಅವರಿಗೆ ಆಶೀರ್ವಾದ ಮಾಡಿ. ನಿಮ ಕುಟುಂಬದ ಮಗ ಎಂದು ಬೆಂಬಲ ನೀಡಿ. ನಿಖಿಲ್‌ ನನಗಿಂತಲೂ ಮೃದು ಸ್ವಭಾವದ ವ್ಯಕ್ತಿ. ಅವರಿಗೆ ಈ ಬಾರಿ ಆಶೀರ್ವಾದ ಮಾಡಿ ಎಂದು ಅವರು ಮನವಿ ಮಾಡಿದ್ದಾರೆ.

ಆನೆ ಹಾವಳಿಗೆ ಕಡಿವಾಣ : ರಾಜ್ಯದ ಯಾವುದೇ ಭಾಗದಲ್ಲಿ ಅಭಿವೃದ್ಧಿಯಾಗುತ್ತಿಲ್ಲ. ನಮ ತೆರಿಗೆ ಹಣ ಲೂಟಿ ಆಗುತ್ತಿದೆ. ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಹಾಗಾಗಿ ಈ ಬಾರಿ ನಿಖಿಲ್‌ ಗೆಲ್ಲಿಸಿಕೊಡಿ. ನನಗೆ 6 ರಿಂದ 7 ತಿಂಗಳು ಸಮಯ ಕೊಡಿ. ಈ ಭಾಗದ ಕಾಡಾನೆ ಹಾವಳಿಗೆ ಕಡಿವಾಣ ಹಾಕುತ್ತೇವೆ. ಕೇಂದ್ರ ರೈಲ್ವೆ ಸಚಿವರ ಜತೆ ಚರ್ಚೆ ಮಾಡಿದ್ದೇನೆ. ರೈಲ್ವೆ ತಡೆಗೋಡೆ ನಿರ್ಮಾಣಕ್ಕೆ ಕ್ರಮ ವಹಿಸುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ. ಮಾಜಿ ಸಚಿವ ಸಿ.ಎಸ್‌‍.ಪುಟ್ಟರಾಜು, ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ ಸೇರಿದಂತೆ ಸ್ಥಳೀಯ ಜೆಡಿಎಸ್‌‍ ಮುಖಂಡರು, ಕಾರ್ಯಕರ್ತರು ಹಾಗೂ ಅಪಾರ ಸಾರ್ವಜನಿಕರು ಉಪಸ್ಥಿತರಿದ್ದರು.

RELATED ARTICLES

Latest News