Thursday, December 5, 2024
Homeರಾಜ್ಯಮಠ ಖ್ಯಾತಿಯ ನಟ, ನಿರ್ದೇಶಕ ಗುರು ಪ್ರಸಾದ್‌ ಆತ್ಮಹತ್ಯೆ

ಮಠ ಖ್ಯಾತಿಯ ನಟ, ನಿರ್ದೇಶಕ ಗುರು ಪ್ರಸಾದ್‌ ಆತ್ಮಹತ್ಯೆ

ಬೆಂಗಳೂರು,ನ.3- ನಟ, ನಿರ್ದೇಶಕ ಗುರು ಪ್ರಸಾದ್‌ ಸಾವಿಗೆ ಶರಣಾಗಿದ್ದಾರೆ. ಮಠ, ಎದ್ದೇಳು ಮಂಜುನಾಥ, ಡೈರೆಕ್ಟರ್‌ ಸ್ಪೇಷಲ್‌, ರಂಗನಾಯಕ ಸೇರಿದಂತೆ ಹಲವಾರು ಚಿತ್ರಗಳನ್ನು ನಿರ್ದೇಶಿಸಿ ಕನ್ನಡ ನಿರ್ದೇಶಕರಲ್ಲಿ ವಿಶಿಷ್ಟ ಸ್ಥಾನ ಪಡೆದುಕೊಂಡಿದ್ದ ಗುರು ಪ್ರಸಾದ್‌ ಅವರು ಮಾದನಾಯಕನಹಳ್ಳಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿರುವ ಟಾಟಾ ನ್ಯೂ ಹೆವೆನ್‌ ಅಪಾರ್ಟ್‌ಮೆಂಟ್‌ನ ತಮ ಫ್ಲ್ಯಾಟ್‌ನಲ್ಲಿ ನೇಣಿಗೆ ಶರಣಾಗಿದ್ದಾರೆ.

1972 ರ ನ.2 ರಂದು ಜನಿಸಿದ್ದ ಗುರು ಪ್ರಸಾದ್‌ 52 ವರ್ಷಕ್ಕೆ ಪದಾರ್ಪಣೆ ಮಾಡಿದ್ದು, ನಿನ್ನೆಯಷ್ಟೆ ಅವರ ಹುಟ್ಟುಹಬ್ಬವಿತ್ತು. ಕಳೆದ ಹಲವು ದಿನಗಳಿಂದ ಅವರು ಎಲ್ಲೂ ಕಾಣಿಸಿಕೊಂಡಿರಲಿಲ್ಲ ಆದರೆ ಇದೀಗ ಅವರ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಎದ್ದೇಳು ಮಂಜುನಾಥ 2 ಸೇರಿದಂತೆ ಇನ್ನಿತರ ಹಲವಾರು ಚಿತ್ರಗಳ ನಿರ್ದೇಶನದ ಹೊಣೆ ಹೊತ್ತಿದ್ದ ಗುರು ಪ್ರಸಾದ್‌ ಅವರು ಭಾರಿ ಸಾಲ ಮಾಡಿಕೊಂಡಿದ್ದರು. ಸಾಲಗಾರರ ಕಾಟ ಹೆಚ್ಚಾದರಿಂದ ಅವರು ಮನನೊಂದು ಆತಹತ್ಯೆಗೆ ಶರಣಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಇಂದು ಬೆಳಿಗ್ಗೆ ಅವರ ಪ್ಲಾಟ್‌ನಿಂದ ಕೆಟ್ಟ ವಾಸನೆ ಬರುತ್ತಿರುವುದನ್ನು ಗಮನಿಸಿದ ಅಕ್ಕಪಕ್ಕದವರು ನೀಡಿದ ದೂರಿನ ಆಧಾರದ ಮೇರೆಗೆ ಮನೆ ಬಾಗಿಲು ತೆರೆದು ನೋಡಿದಾಗ ಅವರ ಫ್ಯಾನಿಗೆ ನೇಣು ಹಾಕಿಕೊಂಡಿರುವುದು ಪತ್ತೆಯಾಗಿದೆ. ಒಂದೇರಡು ದಿನಗಳ ಹಿಂದೆಯೇ ಅವರು ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿರುವುದರಿಂದ ಅವರ ಇಡಿ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಶವದಿಂದ ಕೆಟ್ಟ ವಾಸನೆ ಬರುತ್ತಿದೆ. ಶವವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಹಿನ್ನೆಲೆ: ಮೂಲತಃ ರಾಮನಗರ ಜಿಲ್ಲೆ ಕನಕ ಪುರ ಮೂಲದವರಾದ ಗುರು ಪ್ರಸಾದ್‌ ಅವರು ಜಗ್ಗೇಶ್‌ ನಾಯಕ ನಟರಾಗಿ ನಟಿಸಿದ್ದ ಮಠ ಚಿತ್ರ ನಿರ್ದೇಶನದ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು. ನಂತರ ಅವರ ನಿರ್ದೇಶನದ ಎದ್ದೇಳು ಮಂಜುನಾಥ್‌ ಚಿತ್ರ ಕನ್ನಡ ಚಿತ್ರರಂಗದಲ್ಲಿ ರೆಕಾರ್ಡ್‌ ಬ್ರೇಕ್‌ ಮಾಡಿತ್ತು. ಆ ಚಿತ್ರದ ನಿರ್ದೇಶನಕ್ಕೆ ಅವರು ರಾಜ್ಯ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿದ್ದರು.

ನಂತರ ಅವರು ಕನ್ನಡದ ಖ್ಯಾತ ನಿರ್ದೇಶಕರ ಸಾಲಿನಲ್ಲಿ ಸ್ಥಾನ ಪಡೆದಿದ್ದೇ ಅಲ್ಲದೆ ಹಲವಾರು ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದರು. ಮಾತ್ರವಲ್ಲದೆ ಅವರು ಕನ್ನಡದ ಬಿಗ್‌ಬಾಸ್‌‍-2 ರಿಯಾಲಿಟಿ ಪ್ರದರ್ಶನದಲ್ಲಿ ಸ್ಪರ್ಧಿಯಾಗಿಯೂ ಕಾಣಿಸಿಕೊಂಡಿದ್ದರು ಇದರ ಜೊತೆಗೆ ಖಾಸಗಿ ವಾಹಿನಿಯೊಂದು ನಡೆಸಿಕೊಡುತ್ತಿದ್ದ ರಿಯಾಲಿಟಿ ಶೋ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಜಡ್‌್ಡ ಆಗಿಯೂ ತಮ ಪಾತ್ರ ನಿರ್ವಹಿಸಿದ್ದರು.

ಕೌಟುಂಬಿಕ ಹಿನ್ನೆಲೆ; ಗುರು ಪ್ರಸಾದ್‌ ಅವರು ಎರಡನೆ ಮದುವೆ ಮಾಡಿಕೊಂಡಿದ್ದರು. ಮೊದಲ ಹೆಂಡತಿ ಇವರಿಂದ ದೂರವಾದ ನಂತರ ಮತ್ತೊಂದು ವಿವಾಹವಾಗಿದ್ದ ಅವರಿಗೆ ಪುತ್ರರೊಬ್ಬರು ಇದ್ದಾರೆ. ಆದರೆ, ಎರಡನೆ ಹೆಂಡತಿಯೂ ಇವರೊಂದಿಗೆ ಇರಲಿಲ್ಲ ಎಂದು ತಿಳಿದುಬಂದಿದೆ.

ಕುಡಿತಕ್ಕೆ ದಾಸ: ಖ್ಯಾತ ನಿರ್ದೇಶಕರಾಗಿ ಹಲವಾರು ಮನೋಜ್ಞ ಚಿತ್ರಗಳನ್ನು ನಿರ್ದೇಶಿಸಿ ಕೈ ತುಂಬಾ ಹಣ ಸಂಪಾದಿಸಿದ್ದ ಅವರು ತಾವು ಸಂಪಾದಿಸಿದ ಹಣವನ್ನೇಲಾ ತಮ ಕುಡಿತದ ಚಟಕ್ಕೆ ಬಳಸಿಕೊಂಡಿದ್ದರು ಎಂಬ ಆರೋಪ ಕೇಳಿ ಬಂದಿದೆ. ಇದುವರೆಗೂ ಮನೆ ಮಾಡಿಕೊಂಡಿರದ ಗುರು ಪ್ರಸಾದ್‌ ಅವರು ಇದುವರೆಗೂ ಹೋಟೆಲ್‌ಗಳಲ್ಲಿಯೇ ಜೀವನ ಕಳೆಯುತ್ತಿದ್ದರೂ ಆದರೆ, ಕಳೆದ ಒಂದು ವರ್ಷದ ಹಿಂದೆ ಮಾದನಾಯಕನಹಳ್ಳಿ ಪೊಲೀಸ್‌‍ ಠಾಣಾ ವ್ಯಾಪ್ತಿಯ ಟಾಟಾ ನ್ಯೂ ಹೆವೆನ್‌ ಅಪಾರ್ಟ್‌ಮೆಂಟ್‌ನಲ್ಲಿ ಪ್ಲಾಟ್‌ ಬಾಡಿಗೆಗೆ ಪಡೆದು ವಾಸವಾಗಿದ್ದರು.

ತಾನೂ ದುಡಿದಿದ್ದ ಕಾಸೆಲ್ಲಾ ಹಾಕಿ ಅವರು ನಿರ್ಮಿಸಿ ನಿರ್ದೇಶಿಸಿದ್ದ ರಂಗನಾಯಕ ಚಿತ್ರ ಮಕಾಡೆ ಮಲಗಿದ ನಂತರ ಅವರ ಕೈ ಖಾಲಿಯಾಗಿತ್ತು. ಇದರ ಜೊತೆಗೆ ಎದ್ದೇಳು ಮಂಜುನಾಥ ಹಾಗೂ ಮತ್ತೊಂದು ಚಿತ್ರದ ನಿರ್ದೇಶನಕ್ಕೂ ಕೈ ಹಾಕಿದ್ದರು. ಇದರ ನಡುವೆ ಸಾಲಗಾರರ ಕಾಟ ಜಾಸ್ತಿಯಾಗಿದ್ದರಿಂದ ಅವರು ಡಿಪ್ರೇಷನ್‌ಗೆ ಒಳಗಾಗಿದ್ದರು ಎಂದು ಅವರನ್ನು ಹತ್ತಿರದಿಂದ ಬಲ್ಲ ಕೆಲವರು ಹೇಳುತ್ತಿದ್ದಾರೆ.ಅದೇನೇ ಇರಲಿ ಒಬ್ಬ ಅತ್ತುತ್ತಮ ನಿರ್ದೇಶಕನನ್ನು ಕಳೆದುಕೊಂಡಿರುವ ಕನ್ನಡ ಚಿತ್ರರಂಗ ಇದೀಗ ಅನಾಥವಾಗಿದೆ.
ಗಣ್ಯರ ಕಂಬನಿ: ಗುರುಪ್ರಸಾದ್‌ ಅವರ ನಿಧನಕ್ಕೆ ಖ್ಯಾತ ಚಿತ್ರನಟರಾದ ಶಿವರಾಜ್‌ಕುಮಾರ್‌, ಸುದೀಪ್‌, ಜಗ್ಗೇಶ್‌ ಮತ್ತಿತರ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.

RELATED ARTICLES

Latest News