ಬೆಂಗಳೂರು, ಸೆ.16- ಯಾವುದೇ ಕಾನೂನು ಸಂಕಷ್ಟ ಎದುರಾಗದಿದ್ದರೆ ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಅದಷ್ಟು ಬೇಗ ಚುನಾವಣೆ ನಡೆಯುವ ಲಕ್ಷಣಗಳು ಗೋಚರಿಸುತ್ತಿವೆ. ಡಿಸಂಬರ್ ವೇಳೆಗೆ ಚುನಾವಣೆ ನಡೆಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದ್ದು ಇದೇ 23 ರಂದು ವಾರ್ಡ್ ಪುನರ್ ವಿಂಗಡಣೆ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಶರವೇಗದಲ್ಲಿ ವಾರ್ಡ್ ಪರಿಷ್ಕರಣೆ ಕಾರ್ಯ ನಡೆಸಲಾಗುತ್ತಿದೆ. ಈಗಾಗಲೇ ಶೇ.50ರಷ್ಟು ಕಾರ್ಯ ಮುಗಿಸಿದ್ದೇವೆ. ಒಂದೇರಡು ದಿನಗಳ ಒಳಗೆ ಎಲ್ಲಾ ಕಾರ್ಯಗಳು ಪೂರ್ಣಗೊಳ್ಳಲಿದ್ದು, ಸೆ. 23 ರಂದು ಸರ್ಕಾರಕ್ಕೆ ಸಲ್ಲಿಕೆ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.
ಹತ್ತು ವರ್ಷಗಳ ಹಿಂದೆ ನಡೆದಿದ್ದ ಬಿಬಿಎಂಪಿ ಚುನಾವಣೆ ನಂತರ 198 ಪಾಲಿಕೆ ಸದಸ್ಯರು ಐದು ವರ್ಷಗಳ ಹಿಂದೆ ಸ್ಥಾನ ಕಳೆದುಕೊಂಡಿದ್ದರು. ಆ ನಂತರ ಐದು ವರ್ಷಗಳವರೆಗೂ ಸರ್ಕಾರ ಬಿಬಿಎಂಪಿಗೆ ಚುನಾವಣೆ ನಡೆಸಿರಲಿಲ್ಲ. ಇದೀಗ ಕಾಂಗ್ರೆಸ್ ಸರ್ಕಾರ ಬಿಬಿಎಂಪಿ ಅಸ್ಥಿತ್ವವನ್ನು ರದ್ದುಗೊಳಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಮಾಡಿದೆ.
ಆಡಳಿತಾತಾಕ ದೃಷ್ಟಿಯಿಂದ ಜಿಬಿಎ ವ್ಯಾಪ್ತಿಯಲ್ಲಿ ಐದು ನಗರ ಪಾಲಿಕೆಗಳನ್ನು ರಚನೆ ಮಾಡಿದ್ದು, ಒಟ್ಟು 365ಕ್ಕೂ ಹೆಚ್ಚು ವಾರ್ಡ್‌ಗಳನ್ನು ರಚನೆ ಮಾಡುವ ಸಾಧ್ಯತೆ ಇರುವುದರಿಂದ ಮುಂದಿನ ಚುನಾವಣೆ ತೀವ್ರ ಕೂತುಹಲ ಕೆರಳಿಸಿದೆ.ಅ.10 ರೊಳಿಗೆ ಬಜೆಟ್; ಬಿಬಿಎಂಪಿ ಹೋಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಬಂದು ಐದು ನಗರ ಪಾಲಿಕೆ ರಚನೆಯಾಗುತ್ತಿದ್ದಂತೆ ಹೊಸ ಪಾಲಿಕೆಗಳಿಗೆ ಹೊಸ ಬಜೆಟ್ ಮಂಡನೆ ಮಾಡಲು ಜಿಬಿಎ ಅಧಿಕಾರಿಗಳು ತೀರ್ಮಾನಿಸಿದ್ದಾರೆ.
ಗ್ರೇಟರ್ ಬೆಂಗಳೂರು ವ್ಯಾಪ್ತಿಯ 5 ನಗರ ಪಾಲಿಕೆಗೆ ಹೊಸ ಬಜೆಟ್ ಮಂಡನೆಗೆ ದಿನಗಣನೆ ಆರಂಭವಾಗಿದ್ದು, ಆಕ್ಟೋಬರ್ 10 ರೊಳಗೆ ಎಲ್ಲಾ ಪಾಲಿಕೆಗಳಲ್ಲೂ ಬಜೆಟ್ ಮಂಡನೆಯಾಗುವುದು ಖಚಿತವಾಗಿದೆ.
ಈಗಾಗಲೇ ಹೊಸ ಬಜೆಟ್ ಮಂಡನೆಗೆ ಪೂರ್ವ ಬಾವಿ ಸಿದ್ದತೆ ಆರಂಭವಾಗಿದ್ದು, ಆರ್ಥಿಕ ವರ್ಷದ ಕೊನೆಗೆ ಇನ್ನು ಬಾಕಿ ಇರುವ 8 ತಿಂಗಳ ಅವಧಿಗೆ ಪ್ರತ್ಯೇಕ ಬಜೆಟ್ ಮಂಡನೆ ಮಾಡಲಾಗುತ್ತಿದೆ
5 ನಗರ ಪಾಲಿಕೆಗಳಿಗೆ ಈಗಾಗಲೇ ಆಯುಕ್ತರುಗಳನ್ನು ನಿಯೋಜನೆ ಮಾಡಲಾಗಿದೆ. ಎಲ್ಲಾ ಆಯುಕ್ತರುಗಳು ತಮ ವ್ಯಾಪ್ತಿಯ ಪಾಲಿಕೆಯಲ್ಲಿ ಬಜೆಟ್ ಮಂಡನೆ ಮಾಡಲು ತಯಾರಿ ಆರಂಭಿಸಿದ್ದಾರೆ.
ತಮ್ಮ ನಗರ ಪಾಲಿಕೆ ವ್ಯಾಪ್ತಿಗೆ ಬರುವ ಸಿಬ್ಬಂದಿ ವೇತನ, ಆಡಳಿತಾತ್ಮಕ ವೆಚ್ಚ, ಸಭೆ ಸಮಾರಂಭಗಳ ವೆಚ್ಚ, ಕಲ್ಯಾಣ ಕಾರ್ಯಕ್ರಮಗಳು, ಕಾಮಗಾರಿಗಳು, ಉದ್ಯಾನವನಗಳು, ಮೈದಾನ, ಶಾಲಾ.ಕಾಲೇಜು, ಅಸ್ಪತ್ರೆ, ರಸ್ತೆ ನಿರ್ವಹಣೆ, ಇಂದಿರಾ ಕ್ಯಾಂಟೀನ್ ಖರ್ಚು ವೆಚ್ಚ ಹಾಗೂ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದ ಬಜೆಟ್ ಮಂಡನೆ ಮಾಡಲು ತೀರ್ಮಾನಿಸಲಾಗಿದೆ ಎಂದು ಜಿಬಿಎ ಮೂಲಗಳು ತಿಳಿಸಿವೆ.
ಎಲ್ಲಾ ಅಂದುಕೊಂಡತೆ ನಡೆದರೆ, ಈ ತಿಂಗಳ ಅಂತ್ಯ ಇಲ್ಲವೇ ಆ.10ರೊಳಗೆ ಬಜೆಟ್ ಮಾಡುವುದು ಪಕ್ಕಾ ಎನ್ನುತ್ತಿವೆ ಮೂಲಗಳು.ನಗರದಲ್ಲಿ ನಡೆಯುತ್ತಿರುವ ಬೃಹತ್ ಕಾಮಗಾರಿಗಳು ಹಾಗೂ ಕಸ ವಿಲೇವಾರಿ ವಿಚಾರಗಳು ಜಿಬಿಎ ವ್ಯಾಪ್ತಿಗೆ ಬರುವ ಹಿನ್ನೆಲೆಯಲ್ಲಿ ಅಂತಹ ಕಾಮಗಾರಿಗಳನ್ನು ಬಿಟ್ಟು ಉಳಿದ ಕಾಮಗಾರಿಗಳ ಅಭಿವೃದ್ಧಿ ಗೆ ಹೊಸ ಬಜೆಟ್ ಮಂಡನೆ ಮಾಡಲಾಗುತ್ತಿದೆಯಂತೆ.
ಈಗಾಗಲೇ ಅಯಾ ನಗರ ಪಾಲಿಕೆಗೆ ಬರುವ ಅಸ್ತಿ ತೆರಿಗೆಗಳ ಬಗ್ಗೆ ಮಾಹಿತಿ ಪಡೆಯಲಾಗಿದೆ..ಇದರ ಅಧಾರದ ಮೇಲೆ ಬಜೆಟ್ ಮಂಡನೆ ಮಾಡಲು 5 ಪಾಲಿಕೆಗಳ ಆಯುಕ್ತರುಗಳು ಸಿದ್ದತೆ ನಡೆಸಿದ್ದಾರೆ.ಈ ಹಿಂದೆ ಬಿಬಿಎಂಪಿ ವ್ಯಾಪ್ತಿಯಲ್ಲಿ ತೀರ್ಮಾನಗೊಂಡ ಕಾಮಗಾರಿಗಳನ್ನು ಸಾರ್ವಜನಿಕರಿಗೆ ಉಪಯೋಗವಿದ್ದರೆ ಮಾತ್ರ ಅವುಗಳನ್ನು ಬಜೆಟ್ ವ್ಯಾಪ್ತಿಗೆ ತರಲಾಗುವುದು ಇಲ್ಲದಿದ್ದರೆ ಅಂತಹ ಕಾಮಗಾರಿಗಳನ್ನು ಕೈಬಿಡುವ ಸಾಧ್ಯತೆಗಳಿವೆ.ಇನ್ನೂ ಬಿಬಿಎಂಪಿ ಈ ಹಿಂದೆ ಮಾಡಿದ ಸಾಲಗಳನ್ನು ಕೂಡ ಆಯಾ ನಗರ ಪಾಲಿಕೆಗಳಿಗೆ ಹಂಚಿಕೆ ಮಾಡಲಾಗಿದೆ.
ನಿರೀಕ್ಷಿತ ಬಜೆಟ್ ಗಾತ್ರ: ಬೆಂಗಳೂರು ಪಶ್ಚಿಮ.. 555.37 ಕೋಟಿ ರೂ, ಬೆಂಗಳೂರು ದಕ್ಷಿಣ 316.28 ಕೋಟಿ ರೂ, ಬೆಂಗಳೂರು ಉತ್ತರ 364.58 ಕೋಟಿ, ಬೆಂಗಳೂರು ಪೂರ್ವ 155.50 ಕೋಟಿ ಹಾಗೂ ಬೆಂಗಳೂರು ಕೇಂದ್ರ ಪಾಲಿಕೆಯಿಂದ 313.25 ಕೋಟಿ ರೂ. ಸೇರಿದಂತೆ ಒಟ್ಟು 1707.98 ಕೋಟಿ ರೂ. ಬಜೆಟ್ ಮಂಡನೆಯಾಗುವ ನಿರೀಕ್ಷೆಯಿದೆ.