ಬೆಂಗಳೂರು, ಜು.31- ನಿರಂತರ ಮಳೆಯಿಂದ ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಅತಿವೃಷ್ಟಿ, ಪ್ರವಾಹ ಉಂಟಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಆದರೂ ವರುಣನಿಗೆ ಮಾತ್ರ ತೃಪ್ತಿಯಾದಂತೆ ಕಂಡುಬರುತ್ತಿಲ್ಲ. ಸದ್ಯಕ್ಕಂತೂ ಮಳೆ ನಿಲ್ಲುವ ಮುನ್ಸೂಚನೆಗಳಿಲ್ಲ.
ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಗಳಿರುವ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ.
ದಕ್ಷಿಣ ಗುಜರಾತ್ ನಿಂದ ಕೇರಳ ರಾಜ್ಯದ ಕರಾವಳಿಯ ಅರಬ್ಬೀ ಸಮುದ್ರ ಮಟ್ಟದಲ್ಲಿ ಉಂಟಾದ ಮೇಲುಬ್ಬರದ (ಟ್ರಫ್) ಪರಿಣಾಮ ರಾಜ್ಯದ ಕರಾವಳಿ ಮತ್ತು ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಇಂದು ಬಿರುಗಾಳಿಯಿಂದ ಕೂಡಿದ ಸಿಡಿಲುಸಹಿತ ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಕೆಲವೆಡೆ ಅತ್ಯಧಿಕ ಮಳೆಯಾಗುವ ಸಾಧ್ಯತೆ ಇರುವುದರಿಂದ ರೆಡ್‌ಅಲರ್ಟ್ ನೀಡಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.
ನಾಳೆ ಕರಾವಳಿ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅತಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು,ಆರೆಂಜ್ ಅಲರ್ಟ್ ನೀಡಲಾಗಿದೆ. ಅನಂತರದ ಮೂರು ದಿನಗಳಲ್ಲೂ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಉತ್ತರ ಒಳನಾಡು ಜಿಲ್ಲೆಗಳಲ್ಲಿ, ಇಂದಿನಿಂದ ಆಗಸ್ಟ್ 2 ರವರೆಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ.
ಅನಂತರದ ದಿನಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ನಿರಂತರವಾಗಿ ಬೀಳುತ್ತಿರುವ ಮಳೆಗೆ ರಾಜ್ಯ ಪ್ರಮುಖ ಜಲಾಶಯಗಳು ಭರ್ತಿಯಾಗಿದ್ದು, ನದಿಗಳಲ್ಲಿ ಪ್ರವಾಹ ಉಂಟಾಗಿದೆ. ಇದರಿಂದ ಅಪಾರ ಪ್ರಮಾಣದ ಗುಡ್ಡ ಕುಸಿತ, ರಸ್ತೆ, ಸೇತುವೆ, ಬೆಳೆ, ವಿದ್ಯುತ್ ಸಂಪರ್ಕ, ಮನೆಗಳಿಗೆ ಹಾನಿ ಸಂಭವಿಸಿದೆ.