ಬೆಂಗಳೂರು,ಆ.30- ಧರ್ಮಸ್ಥಳ ಪ್ರಕರಣದಲ್ಲಿ ಸ್ಥಳೀಯವಾಗಿ ನಾನಾ ರೀತಿಯ ತನಿಖೆ ನಡೆಸಿರುವ ಎಸ್‌ಐಟಿ ಅಧಿಕಾರಿಗಳು ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಬಂಧಿತ ಆರೋಪಿ ಬುರುಡೆ ಚಿನ್ನಯ್ಯನನ್ನು ನಗರಕ್ಕೆ ಕರೆ ತಂದಿದ್ದಾರೆ. ಈ ಮೂಲಕ ಶ್ರೀ ಕ್ಷೇತ್ರದ ವಿರುದ್ಧ ರಾಜಧಾನಿಯಲ್ಲಿ ಷಡ್ಯಂತ್ರ ನಡೆದಿತ್ತೇ ಎಂಬ ಅನುಮಾನಗಳು ಕಾಡಲಾರಂಭಿಸಿವೆ.
ಬಂಧಿತ ಆರೋಪಿ ಚಿನ್ನಯ್ಯನ ಹೇಳಿಕೆ ಆಧಾರದ ಮೇಲೆ ಕೆಲ ಸ್ಥಳಗಳ ಮಹಜರು ನಡೆಸುವ ಸಲುವಾಗಿ ಬಿಗಿಭದ್ರತೆಯಲ್ಲಿ ಆರೋಪಿಯನ್ನು ಬೆಂಗಳೂರಿಗೆ ಕರೆತರಲಾಗಿದ್ದು, ನಗರದ ಬಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಮಲ್ಲಸಂದ್ರದ ಸಾಮಾಜಿಕ ಹೋರಾಟಗಾರ ಜಯಂತ್ ಟಿ. ಅವರ ಮನೆಯಲ್ಲಿ ಎಸ್‌ಐಟಿ ಮೂರು ಗಂಟೆಗೂ ಹೆಚ್ಚು ಕಾಲ ಮಹಜರು ನಡೆಸಿದೆ.
ಚಿನ್ನಯ್ಯ ಬೆಂಗಳೂರಿಗೆ ಬಂದಿದ್ದಾಗ ಜಯಂತ್ ಅವರ ಮನೆಯಲ್ಲಿ ತಂಗಿದ್ದನೆಂಬ ಮಾಹಿತಿ ಆಧಾರದ ಮೇಲೆ ಇಂದು ಆತನನ್ನು ಕರೆದುಕೊಂಡು ಬಂದು ಮಹಜರು ಮಾಡಿ ಕೆಲವು ದಾಖಲೆಗಳನ್ನು ಎಸ್‌ಐಟಿ ವಶಕ್ಕೆ ಪಡೆದಿದೆ ಎಂದು ತಿಳಿದುಬಂದಿದೆ.ಇವರ ಮನೆಯಲ್ಲಿ ಮಹಜರು ಮುಗಿದ ನಂತರ ನಗರದ ಇನ್ನೂ ಎರಡು ಕಡೆ ಎಸ್‌ಐಟಿ ಮಹಜರು ನಡೆಸಲಿದೆ.
ಬೆಂಗಳೂರಿಗೆ ಚಿನ್ನಯ್ಯ ಬಂದಿದ್ದಾಗ ಈತನನ್ನು ಭೇಟಿ ಮಾಡಿದವರ್ಯಾರು, ಚರ್ಚೆ ನಡೆಸಿದ ವ್ಯಕ್ತಿಗಳನ್ನು ಗುರುತಿಸುವ ಕೆಲಸವನ್ನು ಎಸ್‌ಐಟಿ ಅಧಿಕಾರಿಗಳು ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಧರ್ಮಸ್ಥಳದ ಬುರುಡೆ ಪ್ರಕರಣ ದಿನದಿಂದ ದಿನಕ್ಕೆ ಒಂದೊಂದು ತಿರುವು ಪಡೆದುಕೊಳ್ಳುತ್ತಿದೆ. ಧರ್ಮಸ್ಥಳದ ವಿರುದ್ಧ ಷಡ್ಯಂತ್ರಕ್ಕೆ ರಾಜ್ಯ ಹಾಗೂ ಅಂತಾರಾಜ್ಯ ಸಂಬಂಧ ಕಲ್ಪಿಸಲಾಗುತ್ತಿದೆ. ವ್ಯವಸ್ಥಿತವಾದ ಜಾಲವೊಂದು ಇದರ ಹಿಂದೆ ಕೆಲಸ ಮಾಡಿರುವ ಶಂಕೆಯಿದೆ. ಚಿನ್ನಯ್ಯನನ್ನು ತಮಿಳುನಾಡಿನಲ್ಲಿ ಭೇಟಿ ಮಾಡಿದ ವ್ಯಕ್ತಿಗಳು, ಆತನಿಗೆ ನಗರದಲ್ಲಿ ಆಶ್ರಯ ನೀಡಿದವರೂ ಸೇರಿದಂತೆ ಹಲವಾರು ಮಂದಿಯ ಬಗ್ಗೆ ಮಾಹಿತಿಗಳನ್ನು ಎಸ್‌ಐಟಿ ಕಲೆ ಹಾಕುತ್ತಿದೆ.
ಪ್ರತಿಯೊಂದು ವಿಚಾರವನ್ನು ಕೂಲಂಕುಶವಾಗಿ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು ಆರೋಪಿಯನ್ನು ಖುದ್ದು ಸ್ಥಳ ಪರಿಶೀಲನೆಗೆ ಕರೆದೊಯ್ಯುವ ಮೂಲಕ ಯಾವ ಅಂಶಗಳು ತಪ್ಪಿಹೋಗದಂತೆ ಎಚ್ಚರಿಕೆ ವಹಿಸಿದ್ದಾರೆ.ನಗರದ ಕಾಮಾಕ್ಷಿಪಾಳ್ಯ ಹಾಗೂ ಸಹಕಾರ ನಗರದಲ್ಲಿ ಬುರುಡೆ ಗ್ಯಾಂಗ್ ಷಡ್ಯಂತ್ರ ರೂಪಿಸಿತ್ತು ಎಂಬ ಅನುಮಾನ ಮೂಡಿದೆ. ಬೆಂಗಳೂರಿನಲ್ಲಿ ಬುರುಡೆ ರಹಸ್ಯ ಅಡಗಿದೆಯೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಈ ಷಡ್ಯಂತ್ರದಲ್ಲಿ ಇನ್ನೂ ಯಾರ್ಯಾರ ಕೈವಾಡವಿದೆ, ನಗರದಲ್ಲಿ ಸಂಚು ರೂಪಿಸುತ್ತಿದ್ದ ಸಂದರ್ಭದಲ್ಲಿ ಯಾರ್ಯಾರು ಸೇರುತ್ತಿದ್ದರು, ಯಾವ ಯಾವ ವಿಚಾರವಾಗಿ ಚರ್ಚೆ ನಡೆದಿತ್ತು ಎಂಬಿತ್ಯಾದಿ ಮಾಹಿತಿಗಳ ಬಗ್ಗೆ ಎಸ್‌ಐಟಿ ತನಿಖೆ ನಡೆಸುತ್ತಿದೆ.ಧರ್ಮಸ್ಥಳ ಸುತ್ತಮುತ್ತ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಅಪಪ್ರಚಾರದ ಸಂಚು ಬೆಂಗಳೂರಿನಲ್ಲೇ ಸೃಷ್ಟಿಯಾಗಿದೆ ಎಂಬ ವದಂತಿಗಳಿವೆ. ಇದಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ಹಲವು ಮಾಹಿತಿಗಳನ್ನು ಈಗಾಗಲೇ ಕಲೆ ಹಾಕಿದ್ದಾರೆ.
ಬೆಂಗಳೂರು ನಂತರ ಮಂಡ್ಯ ಹಾಗೂ ತಮಿಳುನಾಡಿಗೂ ಬುರುಡೆ ಚಿನ್ನಯ್ಯನನ್ನು ಕರೆದುಕೊಂಡು ಹೋಗಿ ಮಹಜರು ಮಾಡುವ ಸಾಧ್ಯತೆಯಿದೆ.ಒಟ್ಟಾರೆ ಈ ಪ್ರಕರಣದಲ್ಲಿ ಧರ್ಮಸ್ಥಳದ ಪ್ರಕರಣಕ್ಕೂ, ಬೆಂಗಳೂರಿಗೂ ನಂಟಿದೆಯೇ ಎಂಬ ಬಗ್ಗೆ ಎಸ್‌ಐಟಿ ತನಿಖೆಯಿಂದಷ್ಟೇ ಗೊತ್ತಾಗಲಿದೆ.
- ನೆರೆ ರಾಜ್ಯಗಳ ದರಗಳೊಂದಿಗೆ ಸಮೀಕರಿಸಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪರಿಷ್ಕರಣೆ
- ರಾಜ್ಯದಲ್ಲಿ ಶೇ.99ರಷ್ಟು ಕೊಲೆ ಪ್ರಕರಣಗಳನ್ನು ಪೊಲೀಸರು ಬೇಧಿಸಿದ್ದಾರೆ : ಪರಮೇಶ್ವರ್
- ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿಯಲ್ಲಿ 5 ಪಾಲಿಕೆಗಳಿಗೆ 10 ವಲಯ ಕಚೇರಿ
- ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಅಶೋಕ್ ವಾಗ್ದಾಳಿ
- ಗಣೇಶ ಮೂರ್ತಿ ಮೆರವಣಿಗೆ ವೇಳೆ ಪಟಾಕಿ ಸ್ಫೋಟ, ಬಾಲಕ ದುರ್ಮರಣ, ಹಲವರಿಗೆ ಗಾಯ