ಬೆಂಗಳೂರು,ಜು.4- ಕಾವೇರಿ ಜಲಾಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಕಬಿನಿ,ಕೆಆರ್‌ಎಸ್ ಜಲಾಶಯಗಳಿಗೆ ನೀರಿನ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಕಬಿನಿ ಜಲಾಶಯಕ್ಕೆ 18,560 ಕ್ಯೂಸೆಕ್ಸ್ ಒಳಹರಿವಿನ ಪ್ರಮಾಣವಿದ್ದು, 84 ಅಡಿ ಎತ್ತರದ ಜಲಾಶಯದಲ್ಲಿ ಈಗಾಗಲೇ 80 ಅಡಿ ನೀರು ಸಂಗ್ರಹವಾಗಿದೆ.
ಕಬಿನಿ ಜಲಾಶಯದ ಭರ್ತಿಯಾಗಲು ಕೇವಲ 4 ಅಡಿ ಬಾಕಿಯಿದ್ದು, ಇದೇ ರೀತಿ ಮಳೆ ಮುಂದುವರೆದು ಒಳಹರಿವಿನ ಪ್ರಮಾಣ ಹೆಚ್ಚಾದರೆ ಇನ್ನೆರಡು ದಿನಗಳಲ್ಲಿ ಕಬಿನಿ ಜಲಾಶಯ ಭರ್ತಿಯಾಗಲಿದೆ. ಕೃಷ್ಣರಾಜ ಸಾಗರಕ್ಕೂ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. 124.8 ಅಡಿ ಎತ್ತರದ ಅಣ್ಣೆಕಟ್ಟಿನಲ್ಲಿ 100 ಮಟ್ಟದಲ್ಲಿ ನೀರು ಸಂಗ್ರಹವಾಗಿದೆ.
49.452 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 22.267 ಟಿಎಂಸಿ ನೀರು ಸಂಗ್ರಹವಾಗಿದೆ. 11,189 ಕ್ಯೂಸೆಕ್ಸ್ ನೀರು ಜಲಾಶಯಕ್ಕೆ ಹರಿದುಬರುತ್ತಿದ್ದು, ಜಲಾಶಯದ ನೀರಿನ ಸಂಗ್ರಹ ದಿನೇ ದಿನೇ ಹೆಚ್ಚಾಗುತ್ತಿದೆ. ಒಳಹರಿವಿನ ಪ್ರಮಾಣ 540 ಕ್ಯೂಸೆಕ್ ಇದೆ.
ದಿನೇ ದಿನೇ ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚಳದಿಂದ ರೈತರಲ್ಲಿ ಸಂತಸ ಮನೆ ಮಾಡಿದೆ. ಶೀಘ್ರವೇ ನಾಲೆಗಳಿಗೆ ನೀರು ಬಿಡುವ ನಿರೀಕ್ಷೆಯಲ್ಲಿ ಅನ್ನದಾತರು ಇದ್ದಾರೆ.