ಬೆಂಗಳೂರು, ಜು.17- ಕಾವೇರಿ ನದಿ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್ ಜಲಾಶಯಕ್ಕೆ ಒಂದೇ ದಿನ ಮೂರು ಅಡಿಯಷ್ಟು ನೀರು ಬಂದಿದ್ದು, ಇಂದು 110 ಅಡಿಗಿಂತ ಹೆಚ್ಚು ನೀರು ಸಂಗ್ರಹವಾಗಿದೆ.
ಕೊಡಗು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆಯಾದ ಪರಿಣಾಮ ಕೆಆರ್‌ಎಸ್ ಜಲಾಶಯದ ಒಳಹರಿವು ನಿರಂತರವಾಗಿ ಹೆಚ್ಚಾಗಿದೆ. ಇಂದು 36,674 ಕ್ಯೂಸೆಕ್ ಒಳಹರಿವು ಇತ್ತು.
ನಿನ್ನೆ 107.60 ಅಡಿ ಇದ್ದ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟವು ಇಂದು 110.60 ಅಡಿಗೆ ತಲುಪಿದೆ. ನಿನ್ನೆ ಕೆಆರ್‌ಎಸ್ ಜಲಾಶಯದಲ್ಲಿ 29.378 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು. ಇಂದು 32.330 ಟಿಎಂಸಿ ಅಡಿಗೆ ಏರಿಕೆಯಾಗಿದೆ.
ಈ ಜಲಾಶಯದ ಗರಿಷ್ಠ ಮಟ್ಟ ಸಾಮರ್ಥ್ಯ 124.80 ಅಡಿ ಆಗಿದೆ. ಅಂದರೆ, ಗರಿಷ್ಠ 49.452 ಟಿಎಂಸಿ ಅಡಿ ನೀರು ಸಂಗ್ರಹವಾಗಲಿದೆ. ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದ್ದರೂ ಹೊರ ಹರಿವು 2,361 ಕ್ಯೂಸೆಕ್‌ನಷ್ಟಿದೆ.
ಇದೆ ರೀತಿ ಕಾವೇರಿ ಕೊಳ್ಳದ ಹೇಮಾವತಿ, ಹಾರಂಗಿ ಹಾಗೂ ಕಬಿನಿ ಜಲಾಶಯಗಳಿಗೂ ಒಳ ಹರಿವು ಗಣನೀಯವಾಗಿ ಏರಿಕೆಯಾಗಿದೆ. ಕಬಿನಿ ಹಾಗೂ ಹಾರಂಗಿ ಜಲಾಶಯಗಳು ಭರ್ತಿಯಾಗುವ ಸನಿಹದಲ್ಲಿವೆ. ಆದರೆ, ಒಳಹರಿವಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಜಲಾಶಯದಿಂದ ಹೊರಕ್ಕೆ ನೀರನ್ನು ಬಿಡಲಾಗುತ್ತಿದೆ.
ಭಾರೀ ಮಳೆಯಾಗುತ್ತಿರುವ ಹಾಗೂ ಭಾರೀ ಮಳೆಯಾಗುವ ಮುನ್ಸೂಚನೆ ಇರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈ ಎರಡೂ ಜಲಾಶಯಗಳಿಂದ ಹೆಚ್ಚಿನ ನೀರನ್ನು ನದಿಗಳಿಗೆ ಬಿಡಲಾಗುತ್ತಿದೆ.