ಬೆಂಗಳೂರು,ಜೂ.19– ಪೆಟ್ರೋಲ್ ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಹೆಚ್ಚಿಸಿ ಗಾಯದ ಮೇಲೆ ಬರೆ ಎಳೆದಿರುವ ರಾಜ್ಯಸರ್ಕಾರ ಈಗ ನೀರಿನ ದರವನ್ನು ಹೆಚ್ಚಿಸುವ ಮೂಲಕ ಬೆಂಗಳೂರಿನ ನಾಗರಿಕರಿಗೆ ಮತ್ತಷ್ಟು ಸಂಕಷ್ಟ ತಂದಿಡಲು ಮುಂದಾಗಿದೆ.
ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಂಗಳೂರಿಗೆ ನೀರು ಪೂರೈಸುವ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸುಸ್ಥಿರತೆಗಾಗಿ ದರ ಪರಿಷ್ಕರಣೆ ಅನಿವಾರ್ಯ ಎಂದು ಸ್ಪಷ್ಟಪಡಿಸಿದ್ದಾರೆ.
ಕಳೆದ 10 ವರ್ಷಗಳಿಂದಲೂ ನೀರಿನ ದರ ಹೆಚ್ಚಳವಾಗಿಲ್ಲ. ಯಾವುದೇ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಿಲ್ಲ. ವರ್ಷದಿಂದ ವರ್ಷಕ್ಕೆ ನಷ್ಟದ ಪ್ರಮಾಣ ಹೆಚ್ಚಾಗುತ್ತಿದೆ. ಯಾವುದೇ ಬ್ಯಾಂಕುಗಳು ಆರ್ಥಿಕ ನೆರವಿಗೆ ಮುಂದೆ ಬರುತ್ತಿಲ್ಲ ಎಂದರು.
ಸಂಗ್ರಹಿಸಲಾಗುತ್ತಿರುವ ನೀರಿನ ಕರದಲ್ಲಿ ಶೇ.70 ರಷ್ಟು ವಿದ್ಯುತ್ ಬಿಲ್ ಮತ್ತು ಕಾರ್ಮಿಕರ ವೇತನಕ್ಕೆ ಸಂದಾಯವಾಗುತ್ತಿದೆ.
ರಾಜಕೀಯ ಕಾರಣಕ್ಕಾಗಿ ನೀರಿನ ದರ ಪರಿಷ್ಕರಣೆ ಮಾಡದೇ ಸಂಸ್ಥೆಯನ್ನು ನಷ್ಟಕ್ಕೊಳಪಡಿಸಲಾಗುತ್ತಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಹಾಗೂ ವಿಶ್ವಬ್ಯಾಂಕ್ ಸೇರಿದಂತೆ ಹಲವಾರು ಸಂಸ್ಥೆಗಳು ರಾಜಕೀಯವನ್ನು ಬದಿಗಿಟ್ಟು ನಿರ್ಧಾರ ತೆಗೆದುಕೊಳ್ಳುವಂತೆ ಸಲಹೆ ನೀಡುತ್ತಿವೆ ಎಂದು ಹೇಳಿದರು.
ನೀರಿನ ದರ ಪರಿಷ್ಕರಣೆ ಸೇರಿದಂತೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಆರ್ಥಿಕ ಸುಸ್ಥಿರತೆಗೆ ಸಾಧುವಾಗಿರುವ ಎಲ್ಲಾ ಸಾಧ್ಯತೆಗಳನ್ನು ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸದ್ಯಕ್ಕೆ ಕಾಲಮಿತಿ ನಿಗದಿ ಮಾಡಲಾಗಿಲ್ಲ. ಆದರೆ ನಿಷ್ಠೂರವಾದ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯ ಎಂದು ಹೇಳಿದ್ದಾರೆ.