ಬೆಂಗಳೂರು, ಜ.2-ಬೆಂಗಳೂರು ನಗರದ ನೀರು ಸರಬರಾಜಿನ ದರ ಪರಿಷ್ಕರಣೆಗೆ ಬೆಂಗಳೂರು ಜಲಮಂಡಲಿ ಸಿದ್ಧತೆ ನಡೆಸಿದ್ದು, ಸಂಕ್ರಾಂತಿ ಹಬ್ಬದ ವೇಳೆ ಗ್ರಾಹಕರಿಗೆ ದರ ಏರಿಕೆ ಬಿಸಿ ತಟ್ಟುವ ಸಾಧ್ಯತೆಗಳಿವೆ.ಬಸ್ ಪ್ರಯಾಣ ದರ ಏರಿಕೆಗೆ ಈಗಾಗಲೇ ಸಾರಿಗೆ ಸಂಸ್ಥೆಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಬಸ್ ಪ್ರಯಾಣ ದರ ಏರಿಕೆ ಜೊತೆಗೆ ಬೆಂಗಳೂರಿನ ನೀರಿನ ದರ ಏರಿಕೆ ಆಗಲಿದೆ ಎಂಬ ಆತಂಕ ಜನರನ್ನು ಕಾಡುತ್ತಿದೆ.
ಜನವರಿ ಎರಡನೇ ವಾರದಲ್ಲಿ ನೀರಿನ ದರ ಪರಿಷ್ಕರಣೆಯಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಜನವರಿ ಎರಡನೇ ವಾರದಲ್ಲಿ ಬೆಂಗಳೂರು ನಗರ ಪ್ರತಿನಿಧಿಸುವ ಶಾಸಕರೊಂದಿಗೆ ಉಪ ಮುಖ್ಯಮಂತ್ರಿ ಸಭೆ ನಡೆಸಲಿದ್ದು, ಆ ಸಭೆಯಲ್ಲಿ ನೀರಿನ ದರ ಏರಿಕೆ ಕುರಿತಂತೆ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ.
ನೀರಿನ ದರ ಪರಿಷ್ಕರಣೆಗೆ ಸಂಬಂಧಿಸಿದಂತೆ ಬೆಂಗಳೂರು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಅವರು ಮಾತನಾಡಿ, ಬೆಂಗಳೂರಿನ ಎಲ್ಲಾ ಶಾಸಕರಿಗೆ ಜಲ ಮಂಡಳಿಯ ಆರ್ಥಿಕ ಪರಿಸ್ಥಿತಿ ಕುರಿತಂತೆ ಈಗಾಗಲೇ ಪತ್ರ ಬರೆದಿದ್ದು, ನೀರಿನ ದರ ಏರಿಕೆಯ ಅನಿವಾರ್ಯತೆ ಬಗ್ಗೆ ಪ್ರಸ್ತಾಪಿಸಲಾಗಿದೆ ಎಂದಿದ್ದಾರೆ.
ಜಲಮಂಡಳಿ 1000 ಲೀಟರ್ ನೀರು ಪೂರೈಸಲು 52 ರೂಪಾಯಿ ಖರ್ಚು ಮಾಡುತ್ತಿದೆ. 25 ರಿಂದ 40 ರೂ.ಗೆ ಪೂರೈಸುತ್ತಿರುವುದರಿಂದ ಜಲಮಂಡಳಿಗೆ ನಷ್ಟವಾಗುತ್ತಿದೆ. ಪ್ರತಿ ತಿಂಗಳಿಗೆ ಜಲಮಂಡಳಿಗೆ ಮಾಸಿಕ 41 ಕೋಟಿ ರೂಪಾಯಿ ನಷ್ಟವಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಕಾವೇರಿ ಐದನೇ ಹಂತ ನೀರು ಪೂರೈಕೆ ಆರಂಭಿಸಿದ ಬಳಿಕ 82 ಕೋಟಿ ರೂ. ನಷ್ಟ ಆಗುತ್ತಿದೆ. ವಾರ್ಷಿಕವಾಗಿ ಸಾವಿರಾರು ಕೋಟಿ ರೂ.ನಷ್ಟವಾಗುತ್ತಿದ್ದು, ದರ ಏರಿಕೆ ಮಾಡಲೇ ಬೇಕಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ಜಲಮಂಡಳಿಗೆ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ. ಪ್ರತಿ ವರ್ಷ 800 ರಿಂದ 900 ಕೋಟಿರೂ ಜಲಮಂಡಲಿಗೆ ನಷ್ಟವಾಗುತ್ತಿದ್ದು, ಏರಿಕೆ ಅನಿವಾರ್ಯವಾಗಿದೆ. ಬೆಂಗಳೂರು ನಗರದ ಶಾಸಕರ ಸಭೆ ನಡೆಸಿದ ಬಳಿಕ ನೀರಿನ ದರ ಏರಿಕೆ ಬಗ್ಗೆ ನಿರ್ಧಾರವಾಗಲಿದೆ. ಆದರೆ, ನೀರಿನ ದರ ಎಷ್ಟು ಏರಿಕೆ ಆಗುತ್ತದೆ ಎಂಬುದು ಶಾಸಕರ ಸಭೆಯ ಬಳಿಕ ನಿರ್ಧಾರವಾಗಲಿದೆ. ಈ ಸಂಬಂಧ ಉಪ ಮುಖ್ಯಮಂತ್ರಿಗಳು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.