ಬೆಂಗಳೂರು,ಅ.28- ರಾಜ್ಯಸರ್ಕಾರದ ಗ್ಯಾರಂಟಿಗಳು ಸಾಧನೆಯ ಆಧಾರದ ಮೇಲೆ ಉಪಚುನಾವಣೆಯಲ್ಲಿ ಮತಯಾಚನೆ ಮಾಡುತ್ತೇವೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳು ಒಕ್ಕಲಿಗ ಸಮುದಾಯಕ್ಕೂ ತಲುಪುತ್ತಿವೆ ಎಂದು ಚನ್ನಪಟ್ಟಣದಲ್ಲಿ ಒಕ್ಕಲಿಗ ಸಮುದಾಯದ ಮತಗಳನ್ನು ಸೆಳೆಯುವ ವಿಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಚನ್ನಪಟ್ಟಣ ಕ್ಷೇತ್ರದಲ್ಲಿ ಒಂದು ವಾರ ಪ್ರಚಾರ ಮಾಡಿದರೆ ನಾವು ಬೇಡ ಎನ್ನಲು ಆಗುತ್ತದೆಯೇ?, ಜೆಡಿಎಸ್ನ ಸವೋಚ್ಛ ನಾಯಕರಾಗಿರುವ ಅವರು ಚುನಾವಣೆಯಲ್ಲಿ ಸೋತಿಲ್ಲವೇ?, ಸೋಲು-ಗೆಲುವಿನ ಬಗ್ಗೆ ಜನತೆ ತೀರ್ಮಾನ ಮಾಡುತ್ತಾರೆ ಎಂದು ಅವರು ಹೇಳಿದರು.
ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಿದ್ದು ನಾವೇ ಎಂದು ಬಿಜೆಪಿಯವರು ಹೇಳುತ್ತಾರೆ. ಹಳೆ ಮೈಸೂರು ಭಾಗದ ನಾಯಕರು, ಮುಖಂಡರು ಚನ್ನಪಟ್ಟಣ ಕ್ಷೇತ್ರದ ಪ್ರಚಾರದಲ್ಲಿ ಭಾಗಿಯಾಗುತ್ತೇವೆ.
ಕಿತ್ತೂರು ಕರ್ನಾಟಕ ಭಾಗದವರು ಶಿಗ್ಗಾವಿ ಕ್ಷೇತ್ರದಲ್ಲಿ ಹಾಗೂ ಕಲ್ಯಾಣ ಕರ್ನಾಟಕ ಭಾಗದವರು ಸಂಡೂರು ಕ್ಷೇತ್ರದಲ್ಲಿ ಪ್ರಚಾರದಲ್ಲಿ ತೊಡಗಿಕೊಳ್ಳುತ್ತಾರೆ. ನಾವು ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇವೆ. ಉಸ್ತುವಾರಿ ಸಚಿವರು ಹೊಣೆ ಹೇಗೆ ಹೊರುತ್ತಾರೆ? ಎಂದು ಅವರು ಮರುಪ್ರಶ್ನಿಸಿದರು.