Friday, August 22, 2025
Homeರಾಜ್ಯಧರ್ಮಸ್ಥಳದ ಹುಂಡಿ ಮೇಲೆ ಕಣ್ಣು ಹಾಕಿದರೆ ಸಹಿಸಲು ಸಾಧ್ಯವಿಲ್ಲ : ಬೇಳೂರು ಗೋಪಾಲಕೃಷ್ಣ

ಧರ್ಮಸ್ಥಳದ ಹುಂಡಿ ಮೇಲೆ ಕಣ್ಣು ಹಾಕಿದರೆ ಸಹಿಸಲು ಸಾಧ್ಯವಿಲ್ಲ : ಬೇಳೂರು ಗೋಪಾಲಕೃಷ್ಣ

We cannot tolerate anyone if someone eyes on Dharmasthala treasury: Belur Gopalakrishna

ಬೆಂಗಳೂರು, ಆ.22- ಧರ್ಮಸ್ಥಳದ ಹುಂಡಿಯ ಹಣದ ಮೇಲೆ ಯಾರಾದರೂ ಕಣ್ಣು ಹಾಕಿದರೆ ಅದನ್ನು ಸಹಿಸಲು ಸಾಧ್ಯವಿಲ್ಲ ಎಂದು ಆಡಳಿತಾರೂಢ ಕಾಂಗ್ರೆಸ್‌‍ ಪಕ್ಷದ ಶಾಸಕ ಬೇಳೂರು ಗೋಪಾಲಕೃಷ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಧರ್ಮಸ್ಥಳದ ಕುರಿತಂತೆ ನಿನ್ನೆ ಪ್ರಗತಿಪರ ಮುಖಂಡರು ಸಭೆ ನಡೆಸಿದ್ದರು. ಅದರಲ್ಲಿ ಮಾತನಾಡಿದ ಹಿರಿಯ ವಕೀಲ ಸಿ.ಎಸ್‌‍. ದ್ವಾರಕಾನಾಥ್‌, ಧರ್ಮಸ್ಥಳದ ಹುಂಡಿಯನ್ನು ರಾಜ್ಯ ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು. ಈ ಕುರಿತು ಪ್ರತಿಕ್ರಿಯಿಸಿರುವ ಬೇಳೂರು ಗೋಪಾಲಕೃಷ್ಣ ಇಂತಹ ಬೇಡಿಕೆಗಳನ್ನು ಪರಿಗಣಿಸಲು ಸಾಧ್ಯವಿಲ್ಲ.

ಯಾವುದೇ ಕಾರಣಕ್ಕೂ ಧರ್ಮಸ್ಥಳದ ಆದಾಯ ಸರ್ಕಾರದ ವಶವಾಗಲು ನಾವು ಬಿಡುವುದಿಲ್ಲ ಎಂದಿದ್ದಾರೆ.ಧರ್ಮಸ್ಥಳಕ್ಕೆ ಎಂಟುನೂರು ವರ್ಷಗಳ ಇತಿಹಾಸವಿದೆ. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಕುಟುಂಬ ದೇವಸ್ಥಾನವನ್ನು ಸ್ಥಾಪಿಸಿ, ಮುನ್ನಡೆಸಿಕೊಂಡು ಬಂದಿದೆ. ದೇವಸ್ಥಾನದ ಆದಾಯವನ್ನು ಅವರು ಶೈಕ್ಷಣಿಕ ಅಭಿವೃದ್ಧಿ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಂತಹ ಕ್ಷೇತ್ರದ ಆದಾಯದ ಮೇಲೆ ಕಣ್ಣು ಹಾಕುವುದು ಸರಿಯಲ್ಲ ಎಂದರು.

ಇತ್ತೀಚೆಗೆ ಒಂದಿಷ್ಟು ಘಟನೆಗಳು ನಡೆದಿವೆ. ಅದಕ್ಕೆ ತಾತ್ವಿಕ ಅಂತ್ಯ ಕಾಣಿಸಲು ರಾಜ್ಯಸರ್ಕಾರ ಅಗತ್ಯ ಕ್ರಮಕೈಗೊಂಡಿದೆ. ಯಾವುದೇ ಆರೋಪಗಳಿದ್ದರೂ ಅದರ ತನಿಖೆಯಾಗಲಿದೆ. ಷಡ್ಯಂತ್ರ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಹಂತದಲ್ಲಿ ಧರ್ಮಸ್ಥಳದ ಹುಂಡಿಯ ಹಣ ಮುಜರಾಯಿ ಇಲಾಖೆಗೆ ಸೇರಬೇಕು ಎಂದು ಹೇಳುತ್ತಿರುವುದು ಅಸಂಬದ್ಧವಾಗಿದೆ. ಇದಕ್ಕೆ ನಮ ಸಹಮತ ಇಲ್ಲ ಎಂದರು.

ಯಾರೇ ಆಗಲಿ ಧರ್ಮಸ್ಥಳದ ಹುಂಡಿಯ ವಿಚಾರಕ್ಕೆ ಹೇಳಿಕೆ ನೀಡಿದರೆ ಕೂಡಲೇ ಅವರು ತಮ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.ಕಾಂಗ್ರೆಸ್‌‍ ಪಕ್ಷಕೂಡ ಧರ್ಮಸ್ಥಳಕ್ಕೆ ಯಾತ್ರೆ ನಡೆಸುತ್ತದೆ. ಅಲ್ಲಿ ಈಗ ಮಳೆ ಹೆಚ್ಚಿದ್ದು, ವಾತಾವರಣ ತಿಳಿಯಾದ ಬಳಿಕ ಕಾಂಗ್ರೆಸ್‌‍ನ ಶಾಸಕರು ಧರ್ಮಸ್ಥಳ ಜಾಥಾ ನಡೆಸಿ, ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಬೆಂಬಲ ನೀಡಲಿದ್ದೇವೆ ಎಂದರು.

ಕಾಂಗ್ರೆಸ್‌‍ ಸರ್ಕಾರ ಹಿಂದೂ ಧಾರ್ಮಿಕ ಕ್ಷೇತ್ರಗಳ ಆದಾಯ ಮೂಲಗಳಿಗೆ ಕೈಹಾಕುವುದಿಲ್ಲ. ಆದರೆ ಈ ಹಿಂದೆ ಯಡಿಯೂರಪ್ಪ ಮತ್ತು ಅವರ ಮಕ್ಕಳು ಹಿಂದುಳಿದ ವರ್ಗಗಳಿಗೆ ಸೇರಿದ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಆದಾಯವನ್ನು ಮುಜರಾಯಿ ಇಲಾಖೆಗೆ ಸೇರಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದರು. ಬಿಜೆಪಿ ಅವರು ಮಾಡಿದಂತಹ ಕೆಲಸವನ್ನು ನಮ ಸರ್ಕಾರ ಮಾಡುವುದಿಲ್ಲ ಎಂದು ಹೇಳಿದರು.

RELATED ARTICLES

Latest News