ಬೆಂಗಳೂರು,ಜು.18- ನಗರದ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಮಾಹಿತಿ ಬಂದಿರುವುದನ್ನು ಲಘುವಾಗಿ ಪರಿಗಣಿಸು ವುದಿಲ್ಲ. ಸೂಕ್ತ ರೀತಿಯಲ್ಲಿ ಪರಿಶೀಲನೆ ನಡೆಸಲಾಗುವುದು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆಯೂ ಶಾಲೆಗಳಿಗೆ ಬೆದರಿಕೆ ಕರೆ ಬಂದಿದ್ದು, ಬಾಂಬ್ ಬೆದರಿಕೆಯ ಅನೇಕ ಇ-ಮೇಲ್‌ಗಳೂ ಬಂದಿವೆ. ಇವುಗಳನ್ನು ಮೊದಲು ಪರಿಶೀಲನೆ ಮಾಡುತ್ತೇವೆ. ಯಾವುದನ್ನೂ ಲಘುವಾಗಿ ತೆಗೆದುಕೊಳ್ಳುವುದಿಲ್ಲ. ಏಕೆ ಈ ರೀತಿ ಮಾಹಿತಿ ಬರುತ್ತದೆ ಎಂಬುದನ್ನು ಪರಿಶೀಲಿಸುತ್ತೇವೆ. ಆನಂತರ ವಾಸ್ತವ ಏನೆಂಬುದು ಗೊತ್ತಾಗಲಿದೆ ಎಂದರು.
ರೌಡಿಶೀಟರ್ ಬಿಕ್ಲು ಶಿವು ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಭೈರತಿ ಬಸವರಾಜ್‌ಗೆ ನೋಟಿಸ್ ನೀಡಲಾಗಿದೆ. ಅವರ ಹೇಳಿಕೆಯನ್ನು ದಾಖಲಿಸಲಾಗುತ್ತದೆ. ದೂರು ನೀಡಿದವರು ಅವರ ಹೆಸರನ್ನು ಸೇರಿಸಲೇಬೇಕೆಂದು ಒತ್ತಾಯಿಸಿರುವುದರಿಂದ ಸ್ವಲ್ಪ ಗೊಂದಲವಿದೆ ಎಂದು ತಿಳಿಸಿದರು.ಈ ವಿಚಾರದಲ್ಲಿ ಏನೇ ಇದ್ದರೂ ನಿಯಮಾನುಸಾರ ಕ್ರಮವಾಗಲಿದೆ. ನೋಟಿಸ್ ಕೊಟ್ಟಿರುವುದರಿಂದ ಅವರು ಬರಲೇಬೇಕಾಗುತ್ತದೆ ಎಂದರು.
ರಾಜಕಾರಣ ಇಲ್ಲ :
ಭೈರತಿ ಬಸವರಾಜ್ ವಿರುದ್ಧ ಎಫ್‌ಐಆರ್ ದಾಖಲಿಸಿರುವುದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೃಹಸಚಿವರು, ಬಿಜೆಪಿ ಇರುವುದೇ ಆರೋಪ ಮಾಡಲು. ಸ್ವಾಭಾವಿಕವಾಗಿ ಅವರು ಆರೋಪ ಮಾಡುತ್ತಾರೆ. ಕಾನೂನು ಚೌಕಟ್ಟಿನಲ್ಲಿ ಪೊಲೀಸರು ಕೆಲಸ ಮಾಡುತ್ತಾರೆ. ಎಫ್‌ಐಆರ್ ದಾಖಲಿಸಿರುವುದರ ಹಿಂದೆ ಯಾವುದೇ ರಾಜಕಾರಣ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರತಿ ಮನೆಗೂ ಭೇಟಿ ಕೊಟ್ಟು ಪೊಲೀಸರು ಸಮಸ್ಯೆಯನ್ನು ಆಲಿಸುತ್ತಾರೆ. ಏನಾದರೂ ಬೇರೆ ರೀತಿಯ ಸಮಸ್ಯೆ ಇದ್ದರೆ ಅದನ್ನು ಸಂಗ್ರಹಿಸುತ್ತಾರೆ. ಯಾವ ಬೀದಿಯಲ್ಲಿ ಯಾರಿದ್ದಾರೆ, ಏನು ನಡೆದಿದೆ, ಇದರ ಬಗ್ಗೆ ಸೂಕ್ತ ಮಾಹಿತಿ ಪಡೆಯಲು ಪೊಲೀಸ್ ಇಲಾಖೆಯಿಂದ ಹೊಸ ಕಾರ್ಯಕ್ರಮ ಹಮಿಕೊಳ್ಳಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಒಳಮೀಸಲಾತಿ ಸಮೀಕ್ಷೆ ಪೂರ್ಣವಾಗದಿರುವುದರಿಂದ ನೇಮಕಾತಿ ಹಾಗೂ ಬಡ್ತಿ ಪ್ರಕ್ರಿಯೆ ವಿಳಂಬವಾಗಿದೆ. ಒಳಮೀಸಲಾತಿ ಸಂಪೂರ್ಣವಾದ ನಂತರ ನೇಮಕಾತಿ ಹಾಗೂ ಬಡ್ತಿಗೆ ಚಾಲನೆ ದೊರೆಯಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿರುವ ವಿಚಾರಕ್ಕೆ ಪರಮೇಶ್ವರ್ ಪ್ರತಿಕ್ರಿಯಿಸಿದರು.
ಆರ್‌ಸಿಬಿ ವಿಜಯೋತ್ಸವ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾ.ಮೈಕಲ್ ಕುನ್ಹಾ ಅವರ ನೇತೃತ್ವದ ವಿಚಾರಣಾ ಆಯೋಗ ನೀಡಿರುವ ವರದಿಯನ್ನು ಸಂಪುಟ ಸಭೆಯ ಮುಂದೆ ಮಂಡಿಸಲಾಗಿದೆ. ಅದರ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಮುಂದಿನ ಸಭೆಯಲ್ಲಿ ಆ ವಿಚಾರದ ಚರ್ಚೆಯಾಗಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
- ಬೆಂಗಳೂರಲ್ಲಿ ಇಂದು ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರ ಸಾವು
- ಶಾಲೆಗಳಿಗೆ ಬಾಂಬ್ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ : ಗೃಹಸಚಿವ ಪರಮೇಶ್ವರ
- ನೈರುತ್ಯ ಮುಂಗಾರು ಚೇತರಿಕೆ, ರಾಜ್ಯದ ಹಲವೆಡೆ ಮಳೆ
- 20 ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ, ಬೆಚ್ಚಿ ಬಿದ್ದ ದೆಹಲಿ
- ಟಿಆರ್ಎಫ್ನ್ನು ಜಾಗತಿಕ ಭಯೋತ್ಪಾದಕ ಸಂಘಟನೆಗೆ ಎಂದು ಘೋಷಿಸಿದ ಅಮೆರಿಕ ; ಭಾರತ ಸ್ವಾಗತ