ಬೆಂಗಳೂರು, ಫೆ.27- ಇಡ್ಲಿ ತಯಾರಿಸುವಾಗ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಹಾರ ಸುರಕ್ಷತಾ ಇಲಾಖೆ ನಡೆಸಿದ ತಪಾಸಣೆಯಲ್ಲಿ 51 ಮಾದರಿಗಳು ಅಸುರಕ್ಷಿತ ಎಂಬ ವರದಿ ಬಂದಿದೆ. ಈ ಹಿನ್ನೆಲೆಯಲ್ಲಿ ಇಡ್ಲಿ ತಯಾರಿಸುವಾಗ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗುವುದು. ಬಟ್ಟೆ ಬಳಸಿ ಇಡ್ಲಿ ತಯಾರಿಸುವಂತೆ ಸಲಹೆ ನೀಡಿದರು.
500 ಹೋಟೆಲ್‌ಗಳಿಂದ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಪ್ಲಾಸ್ಟಿಕ್ ಬಳಕೆ ಮಾಡುವ ಹೋಟೆಲ್‌ಗಳಿಗೆ ನೋಟಿಸ್ ನೀಡಲಾಗುತ್ತದೆ. ಆಹಾರ ಸುರಕ್ಷತೆ ಸರ್ಕಾರದ ಆಧ್ಯತೆಯಾಗಿದ್ದು, ಜನರ ಹಿತದೃಷ್ಟಿಯಿಂದ ಪ್ಲಾಸ್ಟಿಕ್ ನಿಷೇಧಿಸುತ್ತಿರುವುದಾಗಿ ತಿಳಿಸಿದರು.
ಮತ್ತಷ್ಟು ಆಹಾರದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಬಹುತೇಕ ಎಲ್ಲದರಲ್ಲೂ ಕಲಬೆರಕೆ ಕಂಡು ಬಂದಿದೆ. ನಾಳೆ ಸವಿಸ್ತಾರ ವಿವರಗಳೊಂದಿಗೆ ಸರ್ಕಾರದ ಆದೇಶಗಳು ಜಾರಿಯಾಗಲಿವೆ ಎಂದು ಹೇಳಿದರು.