Friday, April 25, 2025
Homeರಾಜ್ಯಕರ್ನಾಟಕದಲ್ಲಿರುವ ಪಾಕ್ ಪ್ರಜೆಗಳ ಗಡಿಪಾರು ಮಾಡುತ್ತೇನೆ : ಪರಮೇಶ್ವರ್

ಕರ್ನಾಟಕದಲ್ಲಿರುವ ಪಾಕ್ ಪ್ರಜೆಗಳ ಗಡಿಪಾರು ಮಾಡುತ್ತೇನೆ : ಪರಮೇಶ್ವರ್

We will deport Pakistani nationals in Karnataka: Parameshwar

ಬೆಂಗಳೂರು, ಏ.25- ಪಹಲ್ಗಾಮ್ ದಾಳಿಯ ಪರಿಣಾಮದ ಬಳಿಕ ರಾಜ್ಯದಲ್ಲಿ ಅಧಿಕೃತವಾಗಿ ನೆಲೆಸಿರುವ ಪಾಕಿಸ್ತಾನದ ಪ್ರಜೆಗಳನ್ನು ಗಡೀಪಾರು ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿಯಿಂದಾಗಿ ಕೇಂದ್ರ ಸರ್ಕಾರ ಕೆಲವು ನಿರ್ಧಾರಗಳನ್ನು ಕೈಗೊಂಡಿದೆ. ಅದರ ಪರಿಣಾಮ ಪಾಕಿಸ್ತಾನದ ಪ್ರಜೆಗಳಿಗೆ ವೀಸಾ ರದ್ದು ಮಾಡಲಾಗಿದೆ. ಹೀಗಾಗಿ ರಾಜ್ಯದಲ್ಲಿ ಅಧಿಕೃತವಾಗಿ ನೆಲೆಸಿರುವ ಪಾಕಿಸ್ತಾನೀಯರನ್ನು ಪರಿಶೀಲಿಸಲಾಗುತ್ತಿದೆ. ಅವರ ವೀಸಾಗಳನ್ನು ರದ್ದು ಮಾಡಿ ವಾಪಸ್ ಕಳುಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಕೇಂದ್ರ ವಿದೇಶಾಂಗ ಸಚಿವಾಲಯ ತೆಗೆದುಕೊಳ್ಳುವ ಕ್ರಮಗಳಿಗೆ ರಾಜ್ಯದ ಪೊಲೀಸರು ಸಹಕಾರ ನೀಡಲಿದ್ದಾರೆ. ಸದ್ಯಕ್ಕೆ ಪಾಕಿಸ್ತಾನಿ ಪ್ರಜೆಗಳ ವಿರುದ್ಧಮಾತ್ರ ಈ ನಿರ್ಧಾರ ಕೈಗೊಳ್ಳಲಾಗಿದೆ. ಅನಧಿಕೃತವಾಗಿ ನೆಲೆಸಿರುವವರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಅದನ್ನು ಪರಿಶೀಲಿಸಬೇಕಿದೆ. ಒಂದು ವೇಳೆ ಆ ರೀತಿ ಅಕ್ರಮವಾಗಿ ನೆಲೆಸಿದರೆ ಅವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕಾಶ್ಮೀರದಲ್ಲಿನ ದಾಳಿಯಲ್ಲಿ ಕೇಂದ್ರ ಗುಪ್ತಚರ ವೈಫಲ್ಯ ಇದೆ ಎಂಬುದು ಸ್ಪಷ್ಟವಾಗಿದೆ. ಅವರು ಅನೇಕ ಬಾರಿ ನಮ್ಮ ರಾಜ್ಯದ ಪೊಲೀಸರಿಗೆ ಮಾಹಿತಿ ನೀಡುತ್ತಾರೆ. ನಮ್ಮಿಂದಲೂ ಮಾಹಿತಿ ತೆಗೆದುಕೊಳ್ಳುತ್ತಾರೆ. ಇದು ರಾಷ್ಟ್ರೀಯ ಭದ್ರತಾ ವಿಚಾರವಾಗಿರುವುದರಿಂದ ಕರ್ನಾಟಕವೂ ಸೇರಿದಂತೆ ಬೇರೆಲ್ಲಾ ಕಡೆ ಇರುವ ಸ್ವೀಪರ್‌ಸೆಲ್‌ಗಳ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ಇರುತ್ತದೆ. ನಮ್ಮ ರಾಜ್ಯಕ್ಕೆ ತಿಳಿಯದೇ ಇರುವ ಬಹಳಷ್ಟು ವಿಚಾರಗಳು ಕೇಂದ್ರ ಸರ್ಕಾರದ ಅರಿವಿಗಿರುತ್ತದೆ ಎಂದರು.

ರಾಜ್ಯದ ಪೊಲೀಸರಿಗೆ ಮಾಹಿತಿ ಸಿಕ್ಕರೆ ಕೇಂದ್ರ ಗುಪ್ತಚರ ಹಾಗೂ ರಾಷ್ಟ್ರೀಯ ತನಿಖಾ ದಳಕ್ಕೆ ಮಾಹಿತಿ ನೀಡಲಾಗುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯತೆಯಿಂದ ಕೆಲಸ ಮಾಡುತ್ತವೆ ಎಂದರು. ಇಸ್ರೋ, ಡಿಆರ್‌ಡಿಒ ಎಲ್ಲಾ ಕಡೆ ವಿಶೇಷ ಭದ್ರತಾ ವ್ಯವಸ್ಥೆಗಳಿವೆ. ರಾಜ್ಯದ ಪೊಲೀಸರು ಅದಕ್ಕೆ ಅಗತ್ಯ ಬೆಂಬಲ ನೀಡಿರುತ್ತಾರೆ ಎಂದು ಹೇಳಿದರು.

ಭದ್ರತಾ ದೃಷ್ಟಿಯಿಂದ ಕೇಂದ್ರ ಸರ್ಕಾರ ರಾಜತಾಂತ್ರಿಕವಾಗಿ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದೆ. ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದೇವೆ. ಉಗ್ರರ ನೆಲೆಗಳನ್ನು ಧ್ವಂಸಪಡಿಸಲು ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುವುದಾಗಿ ಹೇಳಿದರು. ಕಲಬುರಗಿಯಲ್ಲಿ ರಸ್ತೆಯುದ್ದಕ್ಕೂ ಪಾಕಿಸ್ತಾನದ ಧ್ವಜ ಹಾಕಿರುವ ಬಗ್ಗೆ ನನಗೆ ಮಾಹಿತಿ ಇಲ್ಲ, ಆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ ಎಂದರು.

RELATED ARTICLES

Latest News