Friday, September 20, 2024
Homeರಾಜ್ಯಪಿಎಸ್‌‍ಐ ಪರಶುರಾಮ್‌ ಕುಟುಂಬಕ್ಕೆ ನ್ಯಾಯ ಕೊಡಿಸುತ್ತೇವೆ : ಸಚಿವ ಪ್ರಿಯಾಂಕ್‌ ಖರ್ಗೆ ಭರವಸೆ

ಪಿಎಸ್‌‍ಐ ಪರಶುರಾಮ್‌ ಕುಟುಂಬಕ್ಕೆ ನ್ಯಾಯ ಕೊಡಿಸುತ್ತೇವೆ : ಸಚಿವ ಪ್ರಿಯಾಂಕ್‌ ಖರ್ಗೆ ಭರವಸೆ

ಬೆಂಗಳೂರು,ಆ.3– ಯಾದಗಿರಿ ಪಿಎಸ್‌‍ಐ ಪರಶುರಾಮ್‌ ಅವರ ಸಾವಿನ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಶಾಸಕರ ವಿರುದ್ಧ ದೂರು ಬಂದಿದೆ. ಅದನ್ನು ಪರಿಶೀಲನೆ ನಡೆಸಿ ಕುಟುಂಬದ ಸದಸ್ಯರ ಬೇಡಿಕೆಗ ನುಗುಣವಾಗಿ ನ್ಯಾಯ ದೊರಕಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಭರವಸೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಬೆಳಿಗ್ಗೆ ನಾನು ಪಿಎಸ್‌‍ಐರವರ ಪತ್ನಿ ಶ್ವೇತಾ ಹಾಗೂ ಕುಟುಂಬದ ಸದಸ್ಯರ ಜೊತೆ ದೂರವಾಣಿಯಲ್ಲಿ ಚರ್ಚೆ ನಡೆಸಿದ್ದೇನೆ. ಕುಟುಂಬದ ಬೇಡಿಕೆಗನುಗುಣವಾಗಿ ಸರ್ಕಾರ ನಡೆದುಕೊಳ್ಳಲಿದೆ. ಅವರು ಕೇಳುವಂತಹ ತನಿಖೆಗೆ ಗೃಹಸಚಿವರು ಮತ್ತು ಮುಖ್ಯಮಂತ್ರಿಯವರು ಆದೇಶ ನೀಡಲಿದ್ದಾರೆ ಎಂದರು.

ಶಾಸಕರ ವಿರುದ್ಧ ನೀಡಿರುವ ದೂರನ್ನು ಸ್ವೀಕರಿಸಲಾಗಿದೆ. ಎಫ್‌ಐಆರ್‌ ದಾಖಲಿಸಬೇಕೆಂಬ ವಿಚಾರವನ್ನು ಪರಿಶೀಲಿಸಲಾಗುತ್ತಿದೆ. ಅಧಿಕಾರಿಯ ಸಾವಿನ ಸಂದರ್ಭದಲ್ಲಿ ಹೇಳಿಕೆಯಾಗಲೀ, ಮರಣಾ ಮುನ್ನ ಬರೆದಿರುವ ಪತ್ರವಾಗಲೀ ಸಿಕ್ಕಿಲ್ಲ. ಸಾವನ್ನು ಕೆಲವರು ಹೃದಯಾಘಾತ ಎಂದು ಹೇಳುತ್ತಿದ್ದಾರೆ. ಮತ್ತೆ ಕೆಲವರು ಬೇರೆಯ ರೀತಿ ವ್ಯಾಖ್ಯಾನಿಸಿದ್ದಾರೆ ಎಂದು ಹೇಳಿದರು.

ಪಿಎಸ್‌‍ಐ ಅವರ ಪತ್ನಿ ಶ್ವೇತಾ 8 ತಿಂಗಳ ಗರ್ಭಿಣಿ. ಆಕೆಯ ಆರೋಗ್ಯ ನಮಗೆ ಬಹಳ ಮುಖ್ಯ. ದೂರವಾಣಿಯಲ್ಲಿ ಮಾತನಾಡಿದಾಗ ಮೊದಲು ಆರೋಗ್ಯದ ಕಡೆ ಗಮನ ನೀಡುವಂತೆ ಸಲಹೆ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಇಲಾಖಾ ವಿಚಾರಣೆ, ಪರಿಹಾರ ಸೇರಿದಂತೆ ಲಭ್ಯವಿರುವ ಎಲ್ಲಾ ಅನುಕೂಲಗಳನ್ನೂ ಕುಟುಂಬದ ಸದಸ್ಯರಿಗೆ ಒದಗಿಸಲಾಗುವುದು. ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ್‌ ಅವರ ಜೊತೆಯೂ ಈ ಕುರಿತು ತಾವು ಚರ್ಚೆ ನಡೆಸಿರುವುದಾಗಿ ತಿಳಿಸಿದರು.

ಮೃತಪಟ್ಟ ಅಧಿಕಾರಿ ತಮ ಬಳಿ ಬಂದಿದ್ದರು. ವರ್ಗಾವಣೆಯಾಗಿ ಒಂದು ವರ್ಷವಾಗಿದೆ. ಈ ನಡುವೆ ಚುನಾವಣೆ ಕಾರಣಕ್ಕಾಗಿ ಮೂರು ತಿಂಗಳು ಅಫ್ಜಲ್‌ಪುರಕ್ಕೆ ಸ್ಥಳಾಂತರಿಸಲಾಗಿತ್ತು.ಮರಳಿ ಯಾದಗಿರಿಗೆ ವರ್ಗಾವಣೆಯಾಗಿದೆ. ಕಾರ್ಯ ನಿರ್ವಾಹಕ ಹುದ್ದೆಯನ್ನು ಕೊಟ್ಟರೆ ಇಲಾಖೆಯಲ್ಲಿ ತಮಗೂ ಸೇವಾ ಅನುಭವವಾಗುತ್ತದೆ ಎಂದು ಕೇಳಿಕೊಂಡಿದ್ದರು. ಕಲಬುರಗಿಯಲ್ಲಿ ಸಿಬ್ಬಂದಿಗಳ ಕೊರತೆಯಿದೆ. ಅಲ್ಲಿಗೆ ಬರುವುದಾದರೆ ಅನುಕೂಲ ಮಾಡಿಕೊಡುವುದಾಗಿ ತಾವು ಸಲಹೆ ನೀಡಿದ್ದು, ಈಗಷ್ಟೇ ಯಾದಗಿರಿಗೆ ಕುಟುಂಬವನ್ನು ಸ್ಥಳಾಂತರಿಸಿದ್ದೇನೆ, ಎರಡು ದಿನ ಸಮಯ ಕೊಡಿ. ಮನೆಯವರ ಬಳಿ ಚರ್ಚಿಸಿ ತಿಳಿಸುತ್ತೇನೆ ಎಂದಿದ್ದರು. ಅಷ್ಟರಲ್ಲಿ ಸಾವಾಗಿದೆ ಎಂದು ಪ್ರಿಯಾಂಕ್‌ ಖರ್ಗೆ ತಿಳಿಸಿದರು.

ತಮ ಬಳಿ ಚರ್ಚಿಸಿದಾಗ ಶಾಸಕರು 30 ಲಕ್ಷ ರೂ. ಲಂಚ ಕೇಳಿದ ವಿಚಾರವನ್ನಾಗಲೀ, ಬೇರೆ ಯಾವುದನ್ನೂ ಪರಶುರಾಮ್‌ ಚರ್ಚೆ ಮಾಡಿರಲಿಲ್ಲ. ಕುಟುಂಬದ ಸದಸ್ಯರು ಏನೇ ಆರೋಪ ಮಾಡಿದರೂ ಅದನ್ನು ತನಿಖೆ ನಡೆಸಲಾಗುವುದು. ದೂರನ್ನು ನಾವು ತಿರಸ್ಕರಿಸಿಲ್ಲ. ತನಿಖೆ ನಡೆಸುತ್ತೇವೆ. ಮರಣೋತ್ತರ ಪರೀಕ್ಷಾ ವರದಿಗಾಗಿ ನಿರೀಕ್ಷಿಸಲಾಗುತ್ತಿದೆ ಎಂದು ಹೇಳಿದರು.

ಇದೇ ವೇಳೆ ಜೆಡಿಎಸ್‌‍-ಬಿಜೆಪಿಯ ಪಾದಯಾತ್ರೆ ಬಗ್ಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್‌ ಖರ್ಗೆ, ಬಿಜೆಪಿಯ ಹಲವು ನಾಯಕರು ವಿಜಯೇಂದ್ರರ ನಾಯಕತ್ವವನ್ನು ಒಪ್ಪಿಲ್ಲ. ಪಾದಯಾತ್ರೆಯಲ್ಲಿ ಎಲ್ಲರೂ ಭಾಗವಹಿಸುತ್ತಿಲ್ಲ. ಅವರಲ್ಲಿ ಒಗ್ಗಟ್ಟು ಕಾಣುತ್ತಿಲ್ಲ ಎಂದರು. ರಾಜ್ಯಪಾಲರನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡಲಾಗುತ್ತಿದೆ. ಸೂಕ್ತ ದಾಖಲೆಗಳಿಲ್ಲದೆ ಆರೋಪ ಮಾಡಲಾಗುತ್ತಿದೆ. ರಾಜಭವನವನ್ನು ಬಿಜೆಪಿಯವರು ಪ್ರಾದೇಶಿಕ ಕಚೇರಿಯಂತೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಪಾದಯಾತ್ರೆಗೆ ನಮ ಸರ್ಕಾರ ಅಡ್ಡಿಪಡಿಸಿಲ್ಲ ಎಂದು ಹೇಳಿದರು.

RELATED ARTICLES

Latest News