ಬೆಂಗಳೂರು,ಆ.22- ಯಾರು, ಎಷ್ಟೇ ಟೀಕೆ ಮಾಡಲಿ, ನಾನಂತೂ ಬೆಂಗಳೂರಿನಲ್ಲಿ ನೀರಿನ ದರವನ್ನು ಹೆಚ್ಚಿಸುವುದು ಶತಸಿದ್ಧ ಎಂದು ಬೆಂಗಳೂರು ನಗರಾ ಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ.ಬೆಂಗಳೂರಿಗೆ ಹೊಂದಿಕೊಂಡಿರುವ 110 ಹಳ್ಳಿಗಳಿಗೆ ಕಾವೇರಿ ನೀರು ಸಂಪರ್ಕ ಅಭಿಯಾನ, ಮಳೆನೀರು ಕೊಯ್ಲು ಜಾಗೃತಿ ಅಭಿಯಾನ, ವರುಣಮಿತ್ರ ತರಬೇತಿ ಕಾರ್ಯಕ್ರಮಕ್ಕೆ ವಿಧಾನಸೌಧದ ಮೆಟ್ಟಿಲುಗಳ ಮುಂಭಾಗ ಚಾಲನೆ ನೀಡಿ ಮಾತನಾಡಿದ ಅವರು, ವಿರೋಧಪಕ್ಷಗಳಾಗಲೀ, ಮಾಧ್ಯಮದವರಾಗಲೀ ಯಾರೇ ಟೀಕೆ ಮಾಡಿದರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಚರ್ಚೆ ಮಾಡಲಿ, ಧರಣಿ ಮಾಡಲಿ, ಪ್ರತಿಭಟನೆ ಮಾಡಲಿ, ಯಾವುದಕ್ಕೂ ಜಗ್ಗುವುದಿಲ್ಲ, ನೀರಿನ ದರ ಹೆಚ್ಚಿಸಲು ಬದ್ಧವಾಗಿದ್ದೇನೆ ಎಂದರು.
ನೀರಿನ ದರ ಹೆಚ್ಚಿಸದೇ ಇದ್ದರೆ ಬಿಡಬ್ಲ್ಯೂಎಸ್ಎಸ್ಬಿ ಉಳಿಯುವುದಿಲ್ಲ. ಕಳೆದ 14 ವರ್ಷಗಳಿಂದ ವಿದ್ಯುತ್ ದರ ತೀವ್ರವಾಗಿ ಹೆಚ್ಚಾಗಿದೆ. ಬಿಬಿಎಂಪಿ, ಬಿಡಬ್ಲ್ಯೂಎಸ್ಎಸ್ಬಿ, ಬಿಎಂಆರ್ಸಿಎಲ್ ಸೇರಿ ಒಂದು ಕಂಪನಿ ಮಾಡಿ ತಲಾ ಶೇ.26 ರಷ್ಟು ಶೇರು ಬಂಡವಾಳ ಹಾಕುವ ಮೂಲಕ ಕ್ಯಾಪ್ಟಿವ್ ಆಗಿ ಸ್ವಂತಕ್ಕೆ ವಿದ್ಯುತ್ ಉತ್ಪಾದನೆ ಮಾಡಿಕೊಳ್ಳುವ ವ್ಯವಸ್ಥೆ ಮಾಡಲಾಗುತ್ತದೆ. ಸೌರಶಕ್ತಿ ಹಾಗೂ ಇತರ ವಿದ್ಯುತ್ ಉತ್ಪಾದನೆಗಾಗಿ ಈಗಾಗಲೇ ಕಂಪೆನಿ ರಚಿಸಲಾಗಿದೆ. ಈ ರೀತಿ ಮಾಡುವುದರಿಂದ ವಿದ್ಯುತ್ ಬಿಲ್ನಲ್ಲಿ ಒಂದೆರೆಡು ರೂಪಾಯಿ ಉಳಿತಾಯವಾಗಲಿದೆ ಎಂದು ಹೇಳಿದರು.
ವಿದ್ಯುತ್ ಸರಬರಾಜಿನಿಂದ ಆಗುತ್ತಿರುವ ಲಾಭ-ನಷ್ಟಗಳ ಬಗ್ಗೆ ಸಾರ್ವಜನಿಕವಾಗಿ ಮಾಹಿತಿ ನೀಡಬೇಕು. ಎಷ್ಟು ಜನ ಬಿಲ್ ಕಟ್ಟುತ್ತಿದ್ದಾರೆ? ಸೋರಿಕೆ ಎಷ್ಟು? ಬಿಡಬ್ಲ್ಯೂಎಸ್ಎಸ್ಬಿಗೆ ಆಗುತ್ತಿರುವ ನಷ್ಟ ಎಷ್ಟಿದೆ? ಎಂದು ವಿರೋಧಪಕ್ಷಗಳಿಗೆ, ಸಾರ್ವಜನಿಕರಿಗೆ ಮಾಹಿತಿ ನೀಡಲು ಜಾಹೀರಾತು ನೀಡುವಂತೆ ಡಿ.ಕೆ.ಶಿವಕುಮಾರ್ ಸೂಚಿಸಿದರು.
ಈ ಹಿಂದೆ ಪಾವಗಡದಲ್ಲಿ ಸೋಲಾರ್ ಪಾರ್ಕ್ ನಿರ್ಮಿಸುವಾಗ ನನ್ನನ್ನು ನೋಡಿ ಇವನಿಗೆ ತಲೆಕೆಟ್ಟಿದೆ ಎಂದು ನಗುತ್ತಿದ್ದರು. ಆದರೆ ಕಾರ್ಯಾಚರಣೆ ಶುರುವಾದ ಬಳಿಕ ಮೂರುವರೆ ರೂಪಾಯಿಗೆ ಯೂನಿಟ್ ವಿದ್ಯುತ್ ದೊರೆಯುತ್ತಿದೆ. ಪ್ರತಿ ತಾಲ್ಲೂಕಿನಲ್ಲೂ 20ರಿಂದ 50 ಮೆಗಾವ್ಯಾಟ್ ಉತ್ಪಾದನೆಯಾಗುತ್ತಿತ್ತು. ಇದರಿಂದಾಗಿ ಸರಬರಾಜು ನಷ್ಟ ಬಹಳಷ್ಟು ತಗ್ಗಿದೆ ಎಂದರು.
ಇತ್ತೀಚೆಗೆ ಭೀಕರ ಬರಗಾಲ ಪರಿಸ್ಥಿತಿ ಎದುರಾದಾಗ ಬೆಂಗಳೂರಿನಲ್ಲಿ 7 ಸಾವಿರ ಬೋರ್ವೆಲ್ಗಳ ಬತ್ತಿ ಹೋಗಿದ್ದರೂ, ನೀರು ಸರಬರಾಜು ಮತ್ತು ಜಲಮಂಡಳಿ ಅಧಿಕಾರಿಗಳು ಹಗಲು-ರಾತ್ರಿ ಶ್ರಮ ವಹಿಸಿ ಜನರಿಗೆ ತೊಂದರೆಯಾಗದಂತೆ ಸೇವೆ ಸಲ್ಲಿಸಿದ್ದಾರೆ. ಆರಂಭದಲ್ಲಿ ಒಂದೆರೆಡು ದಿನ ಸಮಸ್ಯೆಗಳು ತೀವ್ರವಾಗಿ ಕಂಡುಬಂದವು. ಆನಂತರ ಪರಿಸ್ಥಿತಿಯನ್ನು ನಿಭಾಯಿಸಲಾಗಿದೆ ಎಂದು ಹೇಳಿದರು.
ಬೆಂಗಳೂರಿನ ನಾಗರಿಕರಿಗೆ ಉಪಕಾರ ಸ್ಮರಣೆ ಇಲ್ಲ. ನೀರು ಬಂದರೆ ಬಂತು. ಇಲ್ಲವಾದರೆ ವಾಟ್ಸಾಪ್ನಲ್ಲಿ ಸಂದೇಶ ಕಳುಹಿಸಿ ನಿಂದಿಸಲಾರಂಭಿಸುತ್ತಾರೆ. ಪರಿಸ್ಥಿತಿ ನಿಭಾಯಿಸುವುದು ಎಷ್ಟು ಕಷ್ಟವಿದೆ ಎಂದು ಅವರಿಗೆ ಅರ್ಥವಾಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಂತರ್ಜಲ ಹೆಚ್ಚಿಸಲು ಮಳೆಕೊಯ್ಲು ಪದ್ಧತಿಯನ್ನು ರಚಿಸಬೇಕು. ಅಧಿಕಾರಿಗಳು ಜನಜಾಗೃತಿ ಮೂಡಿಸಬೇಕು. ವ್ಯಾಪಕ ಪ್ರಚಾರ ಮಾಡಬೇಕು. ಕಾವೇರಿ ನದಿಯಿಂದ ತಮಿಳುನಾಡಿಗೆ 179 ಟಿಎಂಸಿ ಹರಿಸಲಾಗಿದೆ. 99 ಟಿಎಂಸಿ ಹೆಚ್ಚುವರಿಯಾಗಿ ಹರಿದಿದೆ. ಇದನ್ನು ಸಮತೋಲಿತ ಅಣೆಕಟ್ಟಿನಲ್ಲಿ ಸಂಗ್ರಹಿಸಲು ಮೇಕೆದಾಟು ಯೋಜನೆ ರೂಪಿಸಲಾಗಿದೆ. ನ್ಯಾಯಾಲಯದಲ್ಲಿ ನಮಗೆ ಜಯವಾಗುವ ನಿರೀಕ್ಷೆಯಿದೆ. ಅಲ್ಲಿಂದ ಬೆಂಗಳೂರಿಗೆ ನೀರು ತರಬೇಕಿದೆ ಎಂದರು.
ಕೆಆರ್ಎಸ್ನಿಂದ ಪೈಪ್ಲೈನ್ ಮೂಲಕ ನೇರವಾಗಿ ಬೆಂಗಳೂರಿಗೆ ನಿಗದಿಪಡಿಸಲಾಗಿರುವ ನೀರನ್ನು ಸರಬರಾಜು ಮಾಡುವ ಚರ್ಚೆಗಳು ನಡೆಯುತ್ತಿವೆ. ಐದನೇ ಹಂತದ ಕಾವೇರಿ ನೀರು ಪೂರೈಕೆ ವ್ಯವಸ್ಥೆಗೆ 2-3 ದಿನದಲ್ಲಿ ಚಾಲನೆ ನೀಡಲಾಗುವುದು ಎಂದು ಹೇಳಿದರು.
ಶರಾವತಿ ನದಿಯಿಂದ ನೀರು ತರಲು ಪ್ರಸ್ತಾವಿತ ಯೋಜನೆ ಇದೆ. ಅಲ್ಲಿ ಸಾಮೂಹಿಕ ವಿರೋಧ ವ್ಯಕ್ತವಾಗಬಹುದು. ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ರಾಜಕೀಯ ಕಾರಣಕ್ಕಾಗಿ ಬೇರೆ ಬೇರೆ ಕೆರೆಗಳಿಗೆ ತಿರುವು ಪಡೆದುಕೊಂಡಿದೆ. ಈಗ ಅದು ಒಂದು ಹಂತಕ್ಕೆ ಬಂದಿದೆ ಎಂದು ಹೇಳಿದರು.
ಕುಡಿಯುವ ನೀರು, ಅಂತರ್ಜಲಕ್ಕೆ ನೀರು ಬಳಸುವುದು ತಪ್ಪಲ್ಲ. ಬರುವ ನೀರನ್ನು ಕೃಷಿಗೆ ದುರುಪಯೋಗಪಡಿಸಿಕೊಳ್ಳುವುದು ಸರಿಯಲ್ಲ. ಕಾಲುವೆಗಳಿಗೆ ಪೈಪ್ಗಳನ್ನು ಹಾಕಿ ನೀರು ಕದಿಯುವುದನ್ನು ತಡೆಯಲು ವಿಶೇಷ ಮಸೂದೆ ರೂಪಿಸಲಾಗಿದ್ದು, ಅದಕ್ಕೆ ರಾಜ್ಯಪಾಲರು ಅಂಗೀಕಾರ ನೀಡಿದ್ದಾರೆ. ಎತ್ತಿನಹೊಳೆಯಿಂದ ತಿಪ್ಪಗೊಂಡನಹಳ್ಳಿಗೆ ನೀರು ತರುವಾಗ ಈ ರೀತಿಯ ಸಮಸ್ಯೆಗಳು ಎದುರಾಗಲಿವೆ ಎಂದರು.
ಜಲಮಂಡಳಿ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಕಾರ್ಯಯೋಜನೆ ರೂಪಿಸಿ ನನ್ನನ್ನು ಭೇಟಿ ಮಾಡಿ. ಜಲಮಂಡಳಿಯ ಅಧ್ಯಕ್ಷರು ಬರುತ್ತಾರೆ, ಹೋಗುತ್ತಾರೆ. ಅವರನ್ನು ಬಿಡಿ. ನೀರು ಸರಬರಾಜು ಹಾಗೂ ಒಳಚರಂಡಿ ಸಮಸ್ಯೆಗಳು ನನಗೆ ಗೊತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ದೊರಕಿಸುವ ಅಗತ್ಯವಿದೆ ಎಂದು ಹೇಳಿದರು.ಬಿಡಿಎ ಆಯುಕ್ತ ಜಯರಾಂ, ಬಿಡಬ್ಲ್ಯೂಎಸ್ಎಸ್ಬಿ ವ್ಯವಸ್ಥಾಪಕ ನಿರ್ದೇಶಕ ರಾಮ್ಪ್ರಸಾದ್ ಮನೋಹರ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮತ್ತಿತರರು ಉಪಸ್ಥಿತರಿದ್ದರು.