ಅರಸೀಕೆರೆ,ಫೆ.18– ಮುಂಬರುವ ತಾಲೂಕು ಹಾಗೂ ಜಿಲ್ಲಾ ಪಂಚಾಯ್ತಿ ಸೇರಿ ಯಾವುದೇ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಾವು ಲಘುವಾಗಿ ಪರಿಗಣಿಸದೆ ಎಲ್ಲೆಡೆ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದರ ಜೊತೆಗೆ ಹಾಸನ ಜೆಡಿಎಸ್‌ನ ಭದ್ರಕೋಟೆ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡುತ್ತೇವೆ ಎಂದು ಮಾಜಿ ಸಚಿವ ಹಾಗೂ ಹೊಳೆನರಸೀಪುರ ಶಾಸಕ ಹೆಚ್.ಡಿ.ರೇವಣ್ಣ ಹೇಳಿದರು.
ಸ್ಥಳೀಯ ಜೆಡಿಎಸ್ ಮುಖಂಡ ಗಂಗಾಧರ್ ಅವರ ಕುಟುಂಬದ ಮದುವೆಗೆಂದು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಅಭಿವೃದ್ಧಿಗೆ ಜೆಡಿಎಸ್ ಪಕ್ಷದ ಕೊಡುಗೆ ಏನೆಂಬುದು ಜನರಿಗೆ ಗೊತ್ತಿದೆ. ಅಲ್ಲದೆ ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಸಿಎಂ ಕುಮಾರಸ್ವಾಮಿ ಅವರ ಅವಧಿಯಲ್ಲಿ ಕೈಗೊಂಡಿರುವ ಶಾಶ್ವತ ಕೆಲಸ ಕಾರ್ಯಗಳು ಜಿಲ್ಲಾದಂತ ಕಾಣುತ್ತಿವೆ ಎಂದರು.
ಇಷ್ಟಿದ್ದರೂ ಜೆಡಿಎಸ್ ಮುಗಿಯುತು ಎನ್ನುವವರಿಗೆ ಸ್ಥಳೀಯ ನಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಕೃತಿಯಲ್ಲಿ ಮಾಡಿ ತೋರಿಸಲಿದ್ದಾರೆ ಎಂದರು. ದೇವೇಗೌಡರು, ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಮೊದಲು ತಾಲೂಕು ವಾರು ಸಮ್ಮೇಳನ ನಡೆಸಲು ರೂಪುರೇಷ ಸಿದ್ದ ಮಾಡಿಕೊಳ್ಳಲಾಗುತ್ತಿದೆ. ಕಡೆಯಲ್ಲಿ ಜಿಲ್ಲಾ ಮಟ್ಟದಲ್ಲೂ ಬೃಹತ್ ಸಮ್ಮೇಳನ ನಡೆಸಲು ಚಿಂತನೆ ಮಾಡಲಾಗಿದೆ ಎಂದು ತಿಳಿಸಿದರು.
ಅಧಿಕಾರ ಶಾಶ್ವತ ಅಲ್ಲ, ಅಧಿಕಾರ ಸಿಕ್ಕಾಗ ಮಾಡಿದ ಕೆಲಸಗಳೇ ಶಾಶ್ವತ ಎಂದ ಅವರು, ಅದೇ ರೀತಿ ಅಧಿಕಾರಿಗಳೂ ಸಹ ನಡೆದುಕೊಳ್ಳಬೇಕು. ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಕಿರು ಕುಳ ನೀಡುವುದಾಗಲೀ, ದಬ್ಬಾಳಿಕೆ ಮಾಡುವುದಾಗಲಿ ಮಾಡಿದರೆ ಯಾವುದೇ ಕಾರಣಕ್ಕೂ ಸಹಿಸಲ್ಲ ಎಂದು ಎಚ್ಚರಿಕೆ ನೀಡಿದರು.
ಕೇಂದ್ರ ಬಜೆಟ್‌ನಲ್ಲಿ ಹಾಸನ ನಗರದ ಮೇಲೇತುವೆ ಸೇರಿದಂತೆ ಜಿಲ್ಲೆಗೆ ಯಾವುದೇ ಹೊಸ ಯೋಜನೆ ಘೋಷಣೆ ಹಾಗೂ ಅನುದಾನ ಬಿಡುಗಡೆ ಮಾಡದೇ ಇರುವ ಬಗ್ಗೆ ಕೇಂದ್ರ ಪ್ರಶ್ನೆಗೆ ಪ್ರೈಓವರ್ ಸೇರಿದಂತೆ ಜಿಲ್ಲೆಗೆ ಕೇಂದ್ರದಿಂದ ಏನೆಲ್ಲಾ ಕೆಲಸ ಕಾರ್ಯ ಆಗಬೇಕು ಎಂಬುದರ ಬಗ್ಗೆ ಈಗಾಗಲೇ ದೇವೇಗೌಡರು, ಕುಮಾರಸ್ವಾಮಿ ಅವರ ಗಮನಕ್ಕೆ ತಂದಿದ್ದು, ಅವರ ಶಕ್ತಿ ಬಳಸಿಕೊಂಡು ಜಿಲ್ಲೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸುತ್ತೇವೆ ಎಂದರು.
ಶೀಘ್ರ ಮಂಡನೆಯಾಗುವ ರಾಜ್ಯ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ರೇವಣ್ಣ, ಕಾದು ನೋಡಿ ನಂತರ ಮಾತನಾಡುವೆ. ಜಿಲ್ಲೆಗೆ ಅನ್ಯಾಯ ಆದರೆ ಸಹಿಸುವುದಿಲ್ಲ. ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಮಾಡುವುದಕ್ಕೆ ಆಸ್ಪದ ನೀಡಲ್ಲ. ಅನ್ಯಾಯ ಆದರೆ ಹೋರಾಟ ಮಾಡುತ್ತೇವೆ ಎಂದರು. ಈ ವೇಳೆ ಜೆಡಿಎಸ್ ಮುಖಂಡರಾದ ಲಾಳನಕೆರೆ ಯೋಗೇಶ್, ಕುಡುಕುಂದಿ ಕುಮಾರ್, ರಾಜೇಶ್ ಧರ್ಮಶೇಖರ್, ನಗರಸಭೆ ಸದಸ್ಯರಾದ ಸುಜಾತ ರಮೇಶ್ ಮೊದಲಾದವರಿದ್ದರು.