Thursday, December 5, 2024
Homeರಾಜ್ಯಕೊರತೆ ಇರುವ ವಿಶೇಷ ಚೇತನರ ಅನುದಾನವನ್ನು ಬಜೆಟ್‌ನಲ್ಲಿ ಒದಗಿಸುತ್ತೇವೆ : ಸಿಎಂ

ಕೊರತೆ ಇರುವ ವಿಶೇಷ ಚೇತನರ ಅನುದಾನವನ್ನು ಬಜೆಟ್‌ನಲ್ಲಿ ಒದಗಿಸುತ್ತೇವೆ : ಸಿಎಂ

We will provide the default grant for the specially-abled in the budget: CM

ಬೆಂಗಳೂರು,ಡಿ.3- ವಿಶೇಷ ಚೇತನರ ಕಲ್ಯಾಣಕ್ಕಾಗಿ ಕೊರತೆಯಾಗಿರುವ ಅನುದಾನವನ್ನು ಪೂರಕ ಬಜೆಟ್ನಲ್ಲಿ ಸೇರ್ಪಡೆಗೊಳಿಸಿ ಒದಗಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.ನಗರದ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ವಿಶೇಷ ಚೇತನರ ದಿನಾಚರಣೆಯಲ್ಲಿ ಮಾತನಾಡಿದ ಅವರು, ವಿಶೇಷ ಚೇತನರ ಕಲ್ಯಾಣಕ್ಕಾಗಿ ನೀಡಲಾಗಿದ್ದ ಅನುದಾನದಲ್ಲಿ ಕಡಿತವಾಗಿದೆ ಎಂದು ವ್ಯಾಪಕ ಚರ್ಚೆ ನಡೆಯುತ್ತಿದೆ.

ಸುಮಾರು 44 ಕೋಟಿ ರೂ. ಕಡಿಮೆಯಾಗಿದೆ ಎಂಬ ಚರ್ಚೆಗಳಿವೆ. ಅನುದಾನದ ಖೋತಾ ಆಗಲು ಬಿಡುವುದಿಲ್ಲ. ಮುಂದಿನ ಅಧಿವೇಶನದಲ್ಲಿ ಪೂರಕ ಬಜೆಟ್ನಲ್ಲಿ ಕೊರತೆಯಾಗಿರುವ ಹಣವನ್ನು ಒದಗಿಸಲಾಗುವುದು ಎಂದು ಹೇಳಿದರು.ಬುದ್ಧಿಮಾಂದ್ಯ ಮಕ್ಕಳಿಗಾಗಿ 10 ಹೊಸ ಶಾಲೆಗಳನ್ನು ಆರಂಭಿಸಲು ಬಜೆಟ್ನಲ್ಲಿ ಘೋಷಿಸಲಾಗಿತ್ತು. ಅದನ್ನು ಶೀಘ್ರವಾಗಿ ಅನುಷ್ಟಾನಕ್ಕೆ ತರಲಾಗುವುದು. 13 ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಲಾಗಿದೆ. ವಿಶೇಷ ಚೇತನರ ಆರೈಕೆದಾರರಿಗೆ 1 ಸಾವಿರ ರೂ. ಮಾಸಾಶನ ನೀಡಲಾಗುವುದು ಎಂದರು.

ವಿಶೇಷ ಚೇತನರ ಅವಲಂಬಿತರಿಗೆ ನೀಡಲಾಗುವ ಮರಣಾನಂತರದ ಪರಿಹಾರದ ಮೊತ್ತವನ್ನು 50 ಸಾವಿರದಿಂದ 1 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಸರ್ಕಾರಿ ಉದ್ಯೋಗಗಳಲ್ಲಿ ಸಿ ಮತ್ತು ಡಿ ವರ್ಗಕ್ಕೆ ಶೇ.5 ರಷ್ಟು, ಎ ಮತ್ತು ಬಿ ಶ್ರೇಣಿ ಹುದ್ದೆಗಳಲ್ಲಿ ಶೇ.4 ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಶೇ.40 ರಿಂದ ಶೇ.70 ರಷ್ಟು ಅಂಗವೈಕಲ್ಯ ಇರುವವರಿಗೆ 800 ರೂ. , ಶೇ.70ಕ್ಕಿಂತ ಮೇಲ್ಪಟ್ಟ ವೈಕಲ್ಯಕ್ಕೆ 1,400 ರೂ. ಮಾಸಾಶನ ನೀಡಲಾಗುತ್ತಿದೆ. ಕೇಂದ್ರ ಸರ್ಕಾರ ನೀಡುತ್ತಿರುವ ಮಾಸಾಶನ ಪ್ರಮಾಣವನ್ನು ಹೆಚ್ಚಿಸಬೇಕೆಂದು ಪತ್ರ ಬರೆಯುವುದಾಗಿ ತಿಳಿಸಿದರು.

ವಿಶೇಷ ಚೇತನರು ಸಮಾಜಕ್ಕೆ ಹೊರೆಯಲ್ಲ, ಅಶಕ್ತರೂ ಅಲ್ಲ ಎಂದು ಪ್ರತಿಪಾದಿಸಿದ ಅವರು, ಸರ್ಕಾರದಿಂದ ಅಗತ್ಯವಿರುವ ಎಲ್ಲಾ ಸೌಲಭ್ಯ ಹಾಗೂ ಸವಲತ್ತುಗಳನ್ನು ಒದಗಿಸಲಾಗುವುದು. ವಿಶೇಷ ಚೇತನರಿಗೆ ಅಗತ್ಯದಷ್ಟು ವಾಹನಗಳನ್ನು ಖರೀದಿಸಿ ಹಂಚಿಕೆ ಮಾಡಲು ಆದೇಶಿಸಲಾಗಿದೆ ಎಂದರು.

ರಾಜ್ಯದಲ್ಲಿ 2011 ರ ಜನಗಣತಿಯ ಪ್ರಕಾರ 13 ಲಕ್ಷ ವಿಶೇಷ ಚೇತನರಿದ್ದರು. ಅದರಿಂದೀಚೆಗೆ ಈ ಸಂಖ್ಯೆ 15 ಲಕ್ಷದಷ್ಟಾಗಿರುವ ಸಾಧ್ಯತೆ ಇದೆ ಎಂದು ಹೇಳಿದರು.ಎಲ್ಲಾ ವಿಶೇಷ ಚೇತನರ ಆರೈಕೆ ಹಾಗೂ ವಿಶೇಷ ಸವಲತ್ತು ಒದಗಿಸುವುದು ಸರ್ಕಾರದ ಜವಾಬ್ದಾರಿ. ಸಂವಿಧಾನದಲ್ಲಿ ಎಲ್ಲರಿಗೂ ಬದುಕುವ ಅವಕಾಶವಿದೆ. ಎಲ್ಲಾ ಕ್ಷೇತ್ರದಲ್ಲಿ ಭಾಗವಹಿಸುವ, ಉದ್ಯೋಗ ಪಡೆಯುವ ಅಧಿಕಾರವಿದೆ. ವಿಶೇಷ ಚೇತನರು ಎಂದಾಕ್ಷಣ ಅಶಕ್ತರು, ಉಪಯೋಗಕ್ಕೆ ಬಾರದವರು ಎಂಬ ಭಾವನೆ ಸರಿಯಲ್ಲ. ಆ ರೀತಿ ಹೇಳುವುದೂ ಸರಿಯಲ್ಲ ಎಂದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ವೈಕಲ್ಯ ಎಂಬುದು ಶಾಪವಲ್ಲ. ದೇವರು ಕೊಟ್ಟ ಪರೀಕ್ಷೆ. ಗಣಪತಿಗೆ ಡೊಳ್ಳು ಹೊಟ್ಟೆ, ಆನೆ ಸೊಂಡಿಲು ಇದೆ. ಆದರೆ ಆತ ವಿಘ್ನ ವಿನಾಶಕ. ವಿಶೇಷ ಚೇತನರು ಕೀಳರಿಮೆಯಿಂದ ಬದುಕುವ ಅಗತ್ಯ ಇಲ್ಲ. ನಿಮಲ್ಲಿರುವ ಆತಸ್ಥೈರ್ಯವನ್ನು ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದರು.

ಒಲಂಪಿಕ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಹೆಚ್ಚಿನ ಪದಕ ಬರಲಿಲ್ಲ. ಆದರೆ ಪ್ಯಾರಾಲಿಂಪಿಕ್ನಲ್ಲಿ 21 ಪದಕಗಳು ದೇಶಕ್ಕೆ ಲಭ್ಯವಾಗಿವೆ. ಹೀಗಾಗಿ ವಿಶೇಷ ಚೇತನರು ಸಮಾಜದ ಆಸ್ತಿ ಎಂದರು.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಮನೆಮನೆಗೆ ತಲುಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ವಿಶೇಷ ಚೇತನರು ದೇವರ ಮಕ್ಕಳಿದ್ದಂತೆ. ಎಲ್ಲರಿಗೂ ಅಗತ್ಯ ಸೌಲಭ್ಯ ನೀಡಲು ನಮ ಸರ್ಕಾರ ಬದ್ಧವಾಗಿದೆ ಎಂದರು.

ಇದೇ ವೇಳೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ದಿವ್ಯಾಂಗ ಅಧಿನಿಯಮದ ಅವತರಣಿಕೆಯನ್ನು ಹಾಗೂ 2025ರ ಬ್ರೈಲ್ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಲಾಯಿತು.
ವಿಶೇಷ ಚೇತನರ ಕ್ಷೇತ್ರದಲ್ಲಿ ಕೆಲಸ ಮಾಡಿದ ವ್ಯಕ್ತಿಗಳು ಹಾಗೂ ಸಂಘಸಂಸ್ಥೆಗಳನ್ನು ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.

RELATED ARTICLES

Latest News