ಬೆಂಗಳೂರು, ಅ.29-ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ಮೊಂತಾ ಚಂಡಮಾರುತದ ಪರಿಣಾಮದಿಂದಾಗಿ ರಾಜ್ಯದಲ್ಲಿ ಹಿಂಗಾರು ಮಳೆ ದುರ್ಬಲಗೊಂಡಿದೆ. ಚಂಡಮಾರುತದ ನೇರ ಪರಿಣಾಮ ರಾಜ್ಯದ ಮೇಲಾಗದಿದ್ದರೂ ವ್ಯಾಪಕ ಮಳೆ ನಿರೀಕ್ಷಿಸಲಾಗಿತ್ತು. ಕೆಲವೆಡೆ ಭಾರಿ ಮಳೆ ಮುನ್ಸೂಚನೆ ನೀಡಲಾಗಿತ್ತು.
ಆದರೆ, ನಿನ್ನೆ ಬೀದರ್ ಜಿಲ್ಲೆಯಲ್ಲಿ ಮಾತ್ರ ವ್ಯಾಪಕ ಪ್ರಮಾಣದ ಮಳೆಯಾಗಿದ್ದು, ಕರಾವಳಿ, ಮಲೆನಾಡು ಸೇರಿದಂತೆ ಕೆಲವೆಡೆ ಮಾತ್ರ ಹಗುರದಿಂದ ಸಾಧಾರಣ ಮಳೆಯಾಗಿದೆ. ಚಂಡಮಾರುತ ತೀವ್ರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಮೋಡ ಕವಿದ ವಾತಾವರಣ ಕಂಡುಬಂದಿತ್ತು. ಅಲ್ಲದೆ, ತಂಪಾದ ವಾತಾವರಣ ಸೃಷ್ಟಿಯಾಗಿ ಚಳಿ ಹೆಚ್ಚಾಗಿತ್ತು. ಜೊತೆಗೆ ಆಗಾಗ್ಗೆ ಮೇಲೈ ಗಾಳಿ ಬೀಸುವುದರಿಂದ ಚಳಿಯ ತೀವ್ರತೆ ಹೆಚ್ಚಾಗಿತ್ತು.
ಚಂಡಮಾರುತವು ವಾತಾವರಣದಲ್ಲಿನ ತೇವಾಂಶವನ್ನು ಸೆಳೆದಿರುವುದರಿಂದ ಹಿಂಗಾರು ಮಳೆ ದುರ್ಬಲವಾಗಿದೆ. ಇಂದಿನಿಂದ ಮಳೆಯ ಪ್ರಮಾಣ ರಾಜ್ಯದಲ್ಲಿ ಮತ್ತಷ್ಟು ಕಡಿಮೆಯಾಗಲಿದೆ ಎಂಬುದು ಹವಾಮಾನ ತಜ್ಞರ ಅಭಿಪ್ರಾಯವಾಗಿದೆ.ವಾಡಿಕೆಗಿಂತ ತಡವಾಗಿ ಆರಂಭಗೊಂಡಿರುವ ಮುಂಗಾರು ಪ್ರಾರಂಭದಲ್ಲೇ ದುರ್ಬಲವಾಗಿದೆ. ಆದರೂ ನವೆಂಬರ್ ಅಂತ್ಯದವರೆಗೆ ಮುಂದುವರೆಯುವ ಲಕ್ಷಣಗಳಿವೆ ಎಂದು ತಜ್ಞರು ಹೇಳಿದ್ದಾರೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ನಿನ್ನೆ ಬೀದರ್ ಜಿಲ್ಲೆಯಲ್ಲಿ ವ್ಯಾಪಕ ಹಾಗೂ ಉತ್ತಮ ಮಳೆಯಾಗಿದೆ. ಕಲಬುರಗಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ. 15 ಜಿಲ್ಲೆಗಳಲ್ಲಿ ಕೆಲವೆಡೆ ಮಳೆಯಾಗಿದ್ದರೆ, 11 ಜಿಲ್ಲೆಗಳಲ್ಲಿ ಅತ್ಯಲ್ಪ ಪ್ರಮಾಣದ ಮಳೆಯಾಗಿದೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಭಾತಂಬ್ರಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 93 ಮಿ.ಮೀ.ನಷ್ಟು ಅತ್ಯಧಿಕ ಪ್ರಮಾಣದ ಮಳೆ ಬಿದ್ದಿದೆ.
ಅಕ್ಟೋಬರ್ ಒಂದರಿಂದ ಇದುವರೆಗೆ ರಾಜ್ಯದಲ್ಲಿ ವಾಡಿಕೆಗಿಂತ ಶೇ.7ರಷ್ಟು ಹೆಚ್ಚು ಮಳೆಯಾಗಿದೆ. ಅಂದರೆ, 123 ಮಿ.ಮೀ. ವಾಡಿಕೆ ಪ್ರಮಾಣದ ಮಳೆಗೆ 132 ಮಿ.ಮೀ. ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಶೇ.27ರಷ್ಟು, ಮಲೆನಾಡಿನಲ್ಲಿ ಶೇ.50ರಷ್ಟು ಹಾಗೂ ಕರಾವಳಿಯಲ್ಲಿ ಶೇ.32ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಆದರೆ. ಉತ್ತರ ಒಳನಾಡಿನಲ್ಲಿ ಶೇ. 36 ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಹಿಂಗಾರು ಬೆಳೆಯನ್ನು ಹೆಚ್ಚು ಬೆಳೆಯಲಾಗುತ್ತದೆ. ಮಳೆ ಕೊರತೆ ರೈತರಲ್ಲಿ ನಿರಾಸೆ ಉಂಟು ಮಾಡಿದೆ.
