ಮೈಸೂರು,ಆ.11– ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವಕ್ಕೆ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಮೊದಲ ಹಂತದಲ್ಲಿ ಅರಮನೆ ಪ್ರವೇಶಿಸಿರುವ ಆನೆಗಳಿಗೆ ಇಂದು ತೂಕ ಪರೀಕ್ಷೆ ನಡೆಸಲಾಗಿದ್ದು, ತೂಕದಲ್ಲಿ ಕ್ಯಾಪ್ಟನ್ ಅಭಿಮನ್ಯುವನ್ನು ಭೀಮ ಮೀರಿಸಿದ್ದಾನೆ.
ಹುಣಸೂರು ತಾಲ್ಲೂಕಿನ ವೀರನಹೊಸಳ್ಳಿಯಿಂದ ಮೊದಲ ಹಂತದಲ್ಲಿ 9 ಆನೆಗಳು ಮೈಸೂರು ಪ್ರವೇಶಿಸಿದ್ದು, ಇಂದು ಆನೆಗಳಿಗೆ ತೂಕ ಪರೀಕ್ಷೆ ನಡೆಸಲಾಗಿದೆ.ಅಭಿಮನ್ಯು- 5360 ಕೆಜಿ, ಭೀಮ-5460 ಕೆಜಿ, ಪ್ರಶಾಂತ-5110 ಕೆಜಿ, ಧನಂಜಯ-5310 ಕೆಜಿ, ಮಹೇಂದ್ರ-5120 ಕೆಜಿ, ಏಕಲವ್ಯ-5305 ಕೆಜಿ, ಕಂಜನ್-4880 ಕೆಜಿ, ಕಾವೇರಿ-3110 ಕೆಜಿ ತೂಕ ಹೊಂದಿವೆ.
ಈ ಬಾರಿ ತೂಕದಲ್ಲಿ ಅಭಿಮನ್ಯುವನ್ನು ಭೀಮ ಮೀರಿಸಿದ್ದಾನೆ. ಕಳೆದ ಬಾರಿ ದಸರಾದಲ್ಲಿ ಅಭಿಮನ್ಯು ಹೆಚ್ಚು ತೂಕ ಹೊಂದಿದ್ದ. ಈ ಬಾರಿ 25 ವರ್ಷದ ಭೀಮ ಹೆಚ್ಚು ತೂಕ ಹೊಂದಿದ್ದಾನೆ. ದಸರಾ ವೇಳೆಗೆ ಇವುಗಳ ತೂಕ ಮತ್ತಷ್ಟು ಹೆಚ್ಚಾಗಲಿದೆ.
ಅದ್ಧೂರಿಯಾಗಿ ಅರಮನೆ ಪ್ರವೇಶ :
ತುಂತುರು ಮಳೆ, ಗೋಧೂಳಿಯ ಹೊಂಬೆಳಕಿನಲ್ಲೇ ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಮೊದಲ ಗಜಪಡೆ ತಂಡ ಅದ್ಧೂರಿಯಾಗಿ ಅರಮನೆ ಪ್ರವೇಶಿಸಿವೆ.
ವೀರನಹೊಸಳ್ಳಿಯಿಂದ ಪ್ರಯಾಣ ಬೆಳೆಸಿ ಅರಣ್ಯಭವನದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಗಜಪಡೆಗಳಿಗೆ ಇಂದು ಮುಂಜಾನೆಯೇ ಮಜ್ಜನ ಮಾಡಿಸಿ ಚಿತ್ತಾಕರ್ಷಕ ಬಣ್ಣಗಳಿಂದ ಅಲಂಕರಿಸಿ ಮಧ್ಯಾಹ್ನ ಆನೆಗಳಿಗೆ ಪೂಜೆ ಸಲ್ಲಿಸಿ ಅರಣ್ಯಾಧಿಕಾರಿಗಳು ಬೀಳ್ಕೊಟ್ಟರು. ನಂತರ ಪ್ರಮುಖ ರಸ್ತೆಗಳ ಮೂಲಕ ಮಂಗಳವಾದ್ಯ, ಜನಪದ ಕಲಾತಂಡಗಳೊಂದಿಗೆ ಸಾಗಿದ ಗಜಪಡೆ ಅರಮನೆಯ ಜಯಮಾರ್ತಾಂಡ ದ್ವಾರಕ್ಕೆ ಪ್ರವೇಶಿಸಿದವು.
ಕ್ಯಾಪ್ಟನ್ ಅಭಿಮನ್ಯು ಪಡೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ, ಪಶು ಸಂಗೋಪನಾ ಸಚಿವ ಎಚ್.ವಿ.ವೆಂಕಟೇಶ್, ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ, ಶಾಸಕರಾದ ಜಿ.ಟಿ.ದೇವೇಗೌಡ, ಶ್ರೀವತ್ಸ, ನಗರ ಪೊಲೀಸ್ ಆಯುಕ್ತ ಸೀಮಾಲಟ್ಕರ್, ವಿಷ್ಣುವರ್ಧನ್ ಸೇರಿದಂತೆ ಅಧಿಕಾರಿಗಳು ಸಂಜೆ ಆನೆಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ವಿಶೇಷ ಪೂಜೆ ಸಲ್ಲಿಸಿ ಅರಮನೆ ಅಂಗಳಕ್ಕೆ ಬರಮಾಡಿಕೊಂಡರು.