ಬೆಂಗಳೂರು,ಸೆ.19- ನೀರು, ಹಾಲು, ಮೆಟ್ರೋ ದರ ಹೆಚ್ಚಳವಲ್ಲದೆ ಆಸ್ತಿ ತೆರಿಗೆ, ಕಸದ ಸೆಸ್ ಹೊರೆಯನ್ನು ಬೆಂಗಳೂರಿನ ನಾಗರಿಕರಿಗೆ ಹೊರಿಸಿರುವ ರಾಜ್ಯ ಸರ್ಕಾರ ಯಾವ ಮೂಲ ಸೌಕರ್ಯಗಳನ್ನು ಕಲ್ಪಿಸಿದೆ? ಎಂದು ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರಶ್ನಿಸಿದರು.
ನಗರದಲ್ಲಿ ರಸ್ತೆಗುಂಡಿಗಳು ಅಪಘಾತಕ್ಕೆ ಕಾರಣವಾಗುತ್ತಿವೆ. ಪ್ರತಿ ವಾರ್ಡ್‌ನಲ್ಲೂ ಘನತ್ಯಾಜ್ಯ ಸಮರ್ಪಕವಾಗಿ ವಿಲೇವಾರಿಯಾಗದೆ ಗಬ್ಬು ನಾರುತ್ತಿವೆ. ರಾಜ್ಯಕ್ಕೆ ಶೇ.30ರಷ್ಟು ತೆರಿಗೆಯನ್ನು ಬೆಂಗಳೂರು ನಾಗರಿಕರು ನೀಡುತ್ತಿದ್ದಾರೆ. ಆದರೂ ಅಗತ್ಯ ಮೂಲ ಸೌಕರ್ಯ ಏಕೆ ಕಲ್ಪಿಸಿಲ್ಲ ಎಂದು ವಾಗ್ದಾಳಿ ನಡೆಸಿದರು.
ಹೊರ ವರ್ತುಲ ರಸ್ತೆಯ ಬ್ಲಾಕ್‌ಬಗ್ ಕಂಪನಿ ಸಿಇಒ ಅವರು ಮೂಲ ಸೌಕರ್ಯಗಳ ಬಗ್ಗೆ ಎಕ್‌್ಸನಲ್ಲಿ ಪ್ರಸ್ತಾಪಿಸಿದ್ದಾರೆ. ಮೂಲ ಸೌಕರ್ಯವಿಲ್ಲದ್ದರಿಂದ ರಾಜ್ಯದಿಂದ ಹೊರಹೋಗುವ ಮಾತನ್ನಾಡಿದ್ದಾರೆ. ಆದರೆ ಬೆಂಗಳೂರು ಉಸ್ತುವಾರಿ ಹೊತ್ತಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರು ಮೂಲ ಸೌಕರ್ಯ ಒದಗಿಸಲು ಯಾವ ಕ್ರಮ ಕೈಗೊಂಡಿದ್ದಾರೆ ಎಂದು ಆಗ್ರಹಿಸಿದರು.
ಬಂಡವಾಳ ಹೂಡಿಕೆಗೆ ಸರ್ಕಾರ ಯಾವ ಮೂಲ ಸೌಲಭ್ಯ ಕಲ್ಪಿಸಿದೆ. ನವೆಂಬರ್ ವೇಳೆಗೆ ಗುಂಡಿ ಮುಚ್ಚುವ ಗಡುವು ನೀಡಿ 1100 ಕೋಟಿ ರೂ. ಒದಗಿಸುವುದಾಗಿ ಹೇಳಿದ್ದಾರೆ. ಮೂಲ ಸೌಕರ್ಯವಿಲ್ಲದೆ ಉದ್ಯಮಗಳು ನೆರೆಹೊರೆಯ ರಾಜ್ಯಗಳಿಗೆ ಹೋದರೆ ತೆರಿಗೆ ನಷ್ಟ ಉಂಟಾಗಲಿದೆ. ಜಿಬಿಎ ವ್ಯಾಪ್ತಿಯಲ್ಲಿ ವಾರ್ಷಿಕ 850 ಕೋಟಿ ರೂ. ತೆರಿಗೆ ಪಾವತಿಯಾಗುತ್ತಿದೆ. ಇರುವ ಕಂಪನಿಗಳನ್ನು ಉಳಿಸಿಕೊಂಡು ಹೊಸ ಕಂಪನಿಗಳನ್ನು ಬೆಂಗಳೂರಿಗೆ ಕರೆತರುವ ಪ್ರಯತ್ನವಾಗುತ್ತಿಲ್ಲ ಎಂದು ಆಕ್ಷೇಪಿಸಿದರು.
ಮುಂದಿನ ಎರಡು ತಿಂಗಳಲ್ಲಿ ಬೆಂಗಳೂರಿನ ಸಮಸ್ಯೆಗಳು ಪರಿಹಾರವಾಗುತ್ತವೆಯೇ? ಕೃತಕ ಬುದ್ಧಿಮತ್ತೆ ಯುಗದಲ್ಲಿ ಇದ್ದರೂ ಮೂಲಸೌಕರ್ಯ ಏಕೆ ಕಲ್ಪಿಸಲಾಗುತ್ತಿಲ್ಲ ಎಂಬುದನ್ನು ಸರ್ಕಾರ ಉತ್ತರಿಸಬೇಕು. ಉದ್ಯಮಿಗಳು ಸಾರ್ವಜನಿಕರಿಗಾಗುವ ತೊಂದರೆಗಳ ಬಗ್ಗೆ ದನಿಯೆತ್ತಿದ್ದಾರೆ ಎಂದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರು 4,500 ಇವಿ ಬಸ್‌ಗಳನ್ನು ಬೆಂಗಳೂರಿಗೆ ನೀಡಿದ್ದರು. ಸರ್ಕಾರದಿಂದ ಕೃತಜ್ಞತೆ ಸಲ್ಲಿಸುವ ಕೆಲಸವಾಗಲಿಲ್ಲ. ಜೆಡಿಎಸ್ ಆಡಳಿತದಲ್ಲಿ ಏನು ಅಭಿವೃದ್ಧಿಯಾಗಿದೆ ಎಂದು ಪ್ರಶ್ನಿಸಿದ್ದಾರೆ. ಅದರ ಬಗ್ಗೆ ಶ್ವೇತಪತ್ರ ಹೊರಡಿಸಲು ಸಿದ್ಧ. ಉಪಮುಖ್ಯಮಂತ್ರಿ ಸಮಸ್ಯೆ ಬಗೆಹರಿಸುವ ಕಡೆ ಗಮನ ಹರಿಸಲಿ ಎಂದು ಅವರು ಟೀಕಿಸಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಐಟಿಬಿಟಿಗೆ 10 ವರ್ಷಗಳ ಕಾಲ ತೆರಿಗೆ ವಿನಾಯಿತಿ ನೀಡಿ ಭದ್ರ ಬುನಾದಿ ಹಾಕಿದರು. ಮೈಸೂರು ರಸ್ತೆ ಮೇಲ್ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಿದರು. ಪ್ರಧಾನಿಯಾಗಿ ಬೆಂಗಳೂರಿಗೆ 9 ಟಿಎಂಸಿ ಕಾವೇರಿ ನೀರನ್ನು ಒದಗಿಸಿದರು. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಬಿಬಿಎಂಪಿ ಮಾಡಿದ್ದರು. ಆದರೆ ಈ ಸರ್ಕಾರದ ಅವಧಿಯಲ್ಲಿ ರಾಜರಾಜೇಶ್ವರಿ ನಗರ, ಹೊಸಕೆರೆಹಳ್ಳಿ ಸೇರಿದಂತೆ ವಿವಿಧೆಡೆ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿಗಳು ಕುಂಟುತ್ತಾ ಸಾಗಿವೆ ಎಂದು ಅವರು ವ್ಯಂಗ್ಯವಾಡಿದರು.